Channapatna By Election: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಂತಿಮ, ಘೋಷಣೆ ಬಾಕಿ?
ಬೆಂಗಳೂರು, ಆಗಸ್ಟ್ 20: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಇವುಗಳ ಪೈಕಿ ಭಾರೀ ಚರ್ಚೆಗೆ ಕಾರಣವಾಗಿರುವುದು ರಾಮನಗರ ಜಿಲ್ಲೆಯ ಚನ್ನಪಟ್ಟಣ. ಕಾಂಗ್ರೆಸ್ ಪಕ್ಷದಿಂದ ಉಪ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಣೆ ಮಾಡಿಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರು? ಎಂಬುದು ಸದ್ಯದ ಚರ್ಚೆ. ಕ್ಷೇತ್ರ ಉಳಿಸಿಕೊಳ್ಳಬೇಕು ಎಂಬುದು ಮೈತ್ರಿಕೂಟದ ಪಕ್ಷವಾದ ಜೆಡಿಎಸ್‌ನ ವಾದ.
ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿದು ಎಚ್. ಡಿ. ಕುಮಾರಸ್ವಾಮಿ ಗೆಲವು ಸಾಧಿಸಿದ ಬಳಿಕ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಈಗ ಉಪ ಚುನಾವಣೆ ನಡೆಯಬೇಕಿದೆ. ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕವನ್ನು ಯಾವುದೇ ಕ್ಷಣದಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.

ಬಿಜೆಪಿ ನಾಯಕ, ಎಂಎಲ್‌ಸಿ ಸಿ. ಪಿ. ಯೋಗೇಶ್ವರ ಚನ್ನಪಟ್ಟಣದ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಟಿಕೆಟ್ ಸಿಗುವ ಭರವಸೆ ಹೈಕಮಾಂಡ್ ನಾಯಕರಿಂದ ಸಿಕ್ಕಿಲ್ಲ. ಮತ್ತೊಂದು ಕಡೆ ಮೈತ್ರಿ ಅಭ್ಯರ್ಥಿ ಅಂತಿಮಗೊಳಿಸಲು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅಂತಿಮ ಒಪ್ಪಿಗೆ ಬೇಕಿದೆ. ಟಿಕೆಟ್ ಸಿ. ಪಿ. ಯೋಗೇಶ್ವರ ಕೈ ತಪ್ಪಿದರೆ ಮುಂದೇನು? ಎಂಬುದು ಬೇರೆ ಲೆಕ್ಕಾಚಾರ.
ಅಭ್ಯರ್ಥಿ ಬಹುತೇಕ ಅಂತಿಮ?: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ 'ಮೈಸೂರು ಚಲೋ' ಪಾದಯಾತ್ರೆ ನಡೆಸಿದವು. ಈ ಪಾದಯಾತ್ರೆ ಬಳಿಕ ಚನ್ನಪಟ್ಟಣಕ್ಕೆ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಚನ್ನಪಟ್ಟಣದಲ್ಲಿ ಕಣಕ್ಕಿಳಿಯಲಿದ್ದಾರೆ. ಮಂಡ್ಯ ಲೋಕಸಭೆ ಚುನಾವಣೆ, ರಾಮನಗರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ನಿಖಿಲ್ ರಾಜಕೀಯ ಭವಿಷ್ಯ ಗಟ್ಟಿ ಮಾಡಲು ಮತ್ತು ಚನ್ನಪಟ್ಟಣವನ್ನು ತಮ್ಮ ವಶದಲ್ಲಿಯೇ ಇಟ್ಟುಕೊಳ್ಳಲು ಜೆಡಿಎಸ್ ನಾಯಕರು ಈ ನಡೆಗೆ ಮುಂದಾಗಿದ್ದಾರೆ.
ಚನ್ನಪಟ್ಟಣದಿಂದ ನಿಖಿಲ್ ಸ್ಪರ್ಧೆ ಮಾಡುವುದಿಲ್ಲ ಎಂದು ಎಚ್. ಡಿ. ಕುಮಾರಸ್ವಾಮಿ ಎರಡು ತಿಂಗಳ ಹಿಂದೆ ಹೇಳಿದ್ದರು. ಆದರೆ ಈಗ ಲೆಕ್ಕಾಚಾರ ಬದಲಾಗಿದೆ. ಸಿ. ಪಿ. ಯೋಗೇಶ್ವರ ಅಭ್ಯರ್ಥಿ ಮಾಡಲು ಜೆಡಿಎಸ್ ನಾಯಕರು ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡುತ್ತಿಲ್ಲ. ಅಲ್ಲದೇ ಕುಮಾರಸ್ವಾಮಿ ರಾಷ್ಟ್ರ ರಾಜಕೀಯದಲ್ಲಿ ಇರುವ ಕಾರಣ ಜೆಡಿಎಸ್ ಪಕ್ಷಕ್ಕೆ ರಾಜ್ಯ ಮಟ್ಟದಲ್ಲಿ ನಾಯಕನ ಅಗತ್ಯವಿದ್ದು, ಆದ್ದರಿಂದ ನಿಖಿಲ್ ಸ್ಪರ್ಧೆ ಮಾಡುತ್ತಾರೆ ಎಂಬುದು ಪಕ್ಷದೊಳಗಿನ ಮಾತು.
ಮೈಸೂರು ಚಲೋ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ನಿಖಿಲ್ ಕುಮಾರಸ್ವಾಮಿ ಪರವಾಗಿ ಬೆಂಬಲ ವ್ಯಕ್ತವಾಗಿದೆ. ಜೆಡಿಎಸ್ ಯುವ ಘಟಕದ ನಾಯಕರಾದ ಅವರನ್ನು ವಿಧಾನಸಭೆ ಉಪ ಚುನಾವಣೆ ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಳ್ಳುವುದು, ವಿಧಾನಸಭೆಯಲ್ಲಿ ಕಡಿಮೆಯಾಗಿರುವ ಒಂದು ಸದಸ್ಯ ಬಲ ಭರ್ತಿ ಮಾಡುವುದು ಜೆಡಿಎಸ್ ಲೆಕ್ಕಾಚಾರವಾಗಿದೆ.
ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಈಗಾಗಲೇ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, "ಉಪ ಚುನಾವಣೆಗೆ ಯಾವ ಪಕ್ಷದವರು ಕಣಕ್ಕಿಳಿಯಬೇಕು ಎಂಬುದನ್ನು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಎದುರಿಸಿದ್ದೇವೆ. ಚನ್ನಪಟ್ಟಣ ಉಪ ಚುನಾವಣೆಯನ್ನು ಅದೇ ರೀತಿ ಎದುರಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.
ರಾಮನಗರದ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪ್ರತಿಷ್ಠೆ ಅಡಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ 96,592 ಮತಗಳನ್ನು ಪಡೆದು ಜಯಗಳಿಸಿದ್ದರು.
ಎದುರಾಳಿಯಾಗಿದ್ದ ಬಿಜೆಪಿ ಅಭ್ಯರ್ಥಿ ಸಿ. ಪಿ. ಯೋಗೇಶ್ವರ 80,677 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಎಸ್. ಕೇವಲ 15,374 ಮತ ಪಡೆದಿದ್ದರು. ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ತವರು ಜಿಲ್ಲೆ ರಾಮನಗರದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂಬುದು ಡಿ. ಕೆ. ಶಿವಕುಮಾರ್ ಲೆಕ್ಕಾಚಾರ.
ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ ಎಚ್. ಡಿ. ಕುಮಾರಸ್ವಾಮಿ ಸದಾ ಎದುರಾಳಿಗಳು. ಈಗ ಉಭಯ ಪಕ್ಷಗಳ ಮೈತ್ರಿಯಾದರೂ ಸಿ. ಪಿ. ಯೋಗೇಶ್ವರಗೆ ಬೆಂಬಲ ನೀಡಲು ಕುಮಾರಸ್ವಾಮಿ ಮಾತ್ರವಲ್ಲ ಜೆಡಿಎಸ್ ಕಾರ್ಯಕರ್ತರು ಸಹ ಒಪ್ಪಿಗೆ ನೀಡುತ್ತಿಲ್ಲ. ಇದೇ ಕಾರಣಕ್ಕೆ ಚನ್ನಪಟ್ಟಣದ ಅಭ್ಯರ್ಥಿ ಚರ್ಚೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications