ರಾಮನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕನ್ನಡ ಪರ ಹೋರಾಟಗಾರರಿಂದ ಪ್ರತಿಭಟನೆ
ರಾಮನಗರ, ಆಗಸ್ಟ್, 20: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರರು ರಾಮನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ರಾಮನಗರದ ಐಜೂರು ವೃತ್ತದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ನಡೆಸಿದ್ದು, ಈ ವೇಳೆ ರಾಜ್ಯ ಸರ್ಕಾರ ಹಾಗೂ ಮಂಡ್ಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲು ನಮ್ಮ ರಾಜ್ಯದ ಕೆರೆಕಟ್ಟೆಗಳಿಗೆ ನೀರು ಹರಿಸಿ, ಕಾವೇರಿ ಕೊಳ್ಳದ ಕರೆಗಳನ್ನು ತುಂಬಿಸಿ. ನಂತರ ತಮಿಳುನಾಡಿಗೆ ನೀರು ಬಿಡಬೇಕಿತ್ತು. ಆದರೆ ಇವರು ರಾಜ್ಯದಲ್ಲಿನ ನೀರಿನ ಕೊರತೆ ನೀಗಿಸುವುದನ್ನು ಬಿಟ್ಟು ಮೊದಲು ತಮಿಳು ರಾಜ್ಯದ ಜನರಿಗೆ ಕೊಡುವ ಮೂಲಕ ದ್ರೋಹ ಮಾಡುತ್ತಿದ್ದಾರೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ರಾಜ್ಯದ ನೀರಿನ ಭವಣೆ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಿದ್ದೇವೆ. ಹೋರಾಟದಲ್ಲಿ ಮಹಿಳೆಯರು ಸಹ ಭಾಗಿಯಾಗಲಿದ್ದಾರೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಅಲ್ಲದೆ ಜನರ ಹಿತ ಕಾಪಾಡಲು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಕಾವೇರಿ ನೀರನ್ನು ತಡೆದು ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಎಲ್.ರಮೇಶ್ ಗೌಡ ಆಗ್ರಹಿಸಿದರು.
ಕಾವೇರಿ ಹೋರಾಟ ಕೇವಲ ರಾಜಕೀಯವಲ್ಲ
ಹಾಗೆಯೇ ಕಾವೇರಿ ಹೋರಾಟ ಎನ್ನುವುದು ಕೇವಲ ರಾಜಕೀಯ ಹೋರಾಟವಲ್ಲ. ಇದರಲ್ಲಿ ಜನಸಾಮಾನ್ಯರೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಹೇಳಿದ್ದಾರೆ.
ಮಳೆ ಕೊರತೆ ಎದುರಾದಾಗಲೆಲ್ಲಾ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕೇಂದ್ರದಿಂದ ಹಿಡಿದು ಸುಪ್ರೀಂ ಕೋರ್ಟ್‌ವರೆಗೂ ತಮಿಳುನಾಡು ಪರವಾಗಿಯೇ ತೀರ್ಪುಗಳು ಹೊರಬೀಳುತ್ತಿವೆ. ಇದರಿಂದ ರೈತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಈ ಹಂತದಲ್ಲಿ ಸರ್ಕಾರಗಳು ಜವಾಬ್ದಾರಿಯುತ ತೀರ್ಮಾನಗಳನ್ನು ಕೈಗೊಳ್ಳಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಳೆಯಾಗುವ ಪರಿಸ್ಥಿತಿ ಇಲ್ಲ
ಮುಂದಿನ ದಿನಗಳಲ್ಲಿ ಮಳೆ ಬೀಳುವ ಪರಿಸ್ಥಿತಿ ಕಾಣಿಸುತ್ತಿಲ್ಲ. ಕಾವೇರಿ ಕಣಿವೆ ಜಲಾಶಯಗಳು ಭರ್ತಿಯಾಗಿಲ್ಲ. ನೀರಿಗೆ ಸಂಕಷ್ಟ ಎದುರಾಗಿರುವ ಸಮಯದಲ್ಲಿ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದು ರೈತರಿಗೆ ಮಾತ್ರವಲ್ಲದೆ, ಜನಸಾಮಾನ್ಯರಿಗೂ ಸಂಕಷ್ಟ ಎದುರಾಗಲಿದೆ. ಹಾಗಾಗಿ ರೈತರ ಹೋರಾಟದ ಜೊತೆ ನಾವೆಲ್ಲರೂ ನಿಲ್ಲಬೇಕಾಗಿದೆ ಎಂದು ತಿಳಿಸಿದರು.
ಸಂಕಷ್ಟ ಕಾಲದಲ್ಲಿ ರೈತರು ಬೆಳೆಯುವ ಬೆಳೆಗೆ ಮಾತ್ರ ಸಂಕಷ್ಟ ಎಂದು ಭಾವಿಸಬಾರದು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಕಾಡಲಿದೆ. ಹಾಗಾಗಿ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಇನ್ನು ನದಿ ನೀರು ಹಂಚಿಕೆ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ರೈತರ ಸಮಸ್ಯೆ, ನೀರಿನ ಸಮಸ್ಯೆ ಕೇವಲ ಯಾರೋ ಒಬ್ಬರಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಅದು ಜನಸಾಮಾನ್ಯರ ಸಮಸ್ಯೆ ಎಂದು ಭಾವಿಸಬೇಕು ಎಂದರು.
ಮಳೆ ಬಾರದ ಕಾರಣ ಪ್ರಸ್ತುತ ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ಜಲ ಸಂಕಷ್ಟದ ನಡುವೆಯೂ ಈ ಬಾರಿ ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ರೈತರನ್ನು ಸಂದಿಗ್ಧ ಸ್ಥಿತಿಗೆ ದೂಡಿದೆ. ಈ ಸಮಯದಲ್ಲಿ ನಾವು ಯಾವ ರೀತಿ ಹೋರಾಟ ಮಾಡುತ್ತೇವೆ ಎನ್ನುವುದು ಮುಖ್ಯ ಎಂದು ತಿಳಿಸಿದರು.
ತಮಿಳುನಾಡು ಪರ ಹೆಚ್ಚು ಒಲವು
ಕೇಂದ್ರದಲ್ಲಿ ತಮಿಳುನಾಡು ಪರವಾಗಿ ಹೆಚ್ಚು ಒಲವು ಇದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಹೋರಾಟ ಮಾಡಬೇಕಾದ ಅವಶ್ಯಕತೆಯಿದೆ. ಕಾವೇರಿ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡಬೇಕು. ನಮಗೇ ನೀರಿನ ಸಮಸ್ಯೆ ಇದೆ. ಹಾಗಾಗಿ ನಮ್ಮ ಹೋರಾಟವನ್ನು ನಾವು ಮಾಡಬೇಕು. ನಮಗೆ ಸಮಸ್ಯೆ ಇದ್ದರೂ ನೀರು ಬಿಡುತ್ತಿದ್ದಾರೆ. ಸರ್ವ ಪಕ್ಷಗಳ ಸಭೆ ಕರೆದಿರುವ ಬಗ್ಗೆ ಮಾಹಿತಿ ಇದೆ, ಎಲ್ಲರೂ ಸೇರಿ ಚರ್ಚಿಸಲಿ. ಮುಖ್ಯವಾಗಿ ರೈತರ ಹಿತ ಕಾಪಾಡುವುದು ಪ್ರಮುಖವಾಗಿದೆ ಎಂದರು.
ನಾನು ಬಿಜೆಪಿ ಸಂಸದೆಯಲ್ಲ
ರಾಜಕೀಯವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದೇನೆ. ಆದರೆ, ನಾನು ಬಿಜೆಪಿ ಸಂಸದೆ ಅಲ್ಲ. ಬಿಜೆಪಿ ನಿರ್ಧಾರ ನನಗೆ ಅನ್ವಯವಾಗುವುದಿಲ್ಲ. ಅದು ಅವರಿಗೆ ಬಿಟ್ಟದ್ದು. ಎಲ್ಲವನ್ನೂ ನನ್ನ ಕೇಳಿ ಮಾಡಬೇಕು ಎಂಬ ನಿಯಮವೂ ಇಲ್ಲ. ಪ್ರತಿಯೊಂದು ವಿಷಯದಲ್ಲೂ ನಾನು ಮಧ್ಯ ಪ್ರವೇಶ ಮಾಡುವುದಿಲ್ಲ. ನನ್ನನ್ನು ಸಂಪರ್ಕ ಮಾಡಿದರೆ ಬೆಂಬಲ ಮಾಡುತ್ತೇನೆ ಎಂದರು.
ಇನ್ನು ನನಗೆ ರಾಜಕೀಯ ಅನಿವಾರ್ಯವಾಗಿಲ್ಲ, ಆಕಸ್ಮಿಕ ಮಾತ್ರ. ಆಪರೆಷನ್ ಹಸ್ತ ವಿಚಾರವಾಗಿ ಯಾರೂ ನನಗೆ ಆಹ್ವಾನ ಮಾಡಿಲ್ಲ, ನಾನು ಸಂತೋಷವಾಗಿದ್ದೇನೆ. ಕಾಂಗ್ರೆಸ್‌ನಿಂದ ನಮಗೆ ಯಾವುದೇ ಆಫರ್ ಬಂದಿಲ್ಲ. ಎಲ್ಲವೂ ವದಂತಿ ಅಷ್ಟೇ. ಎಲ್ಲವೂ ಸರಿ ಎಂದಾದರೆ ಮಾತ್ರ ಮುಂದಿನ ಹೆಜ್ಜೆ ಇಡುತ್ತೇನೆ ಎಂದರು.












Click it and Unblock the Notifications