ಪ್ರತಿದಿನವೂ ನೋವಿನಲ್ಲೇ ಕಳೆಯುತ್ತಿದ್ದೇನೆ: ಕುಮಾರಸ್ವಾಮಿ ಮತ್ತೆ ಭಾವುಕ
Recommended Video
ರಾಮನಗರ, ಜೂನ್ 19: ಸಂಪುಟ ವಿಸ್ತರಣೆ ಕಸರತ್ತು, ಅತೃಪ್ತರ ಆರ್ಭಟ, ಕಾಂಗ್ರೆಸ್‌ನ ಕಾಲೆಳೆತ, ವಿರೋಧ ಪಕ್ಷಗಳ ತಂತ್ರ ಎಲ್ಲವೂ ನಡೆಯುತ್ತಿರುವ ವೇಳೆಯಲ್ಲಿಯೇ ಕುಮಾರಸ್ವಾಮಿ ಅವರು ಭಾವುಕರಾಗಿ ಸರ್ಕಾರದ ಬಗ್ಗೆ ನೀಡಿರುವ ಹೇಳಿಕೆ ಹೆಚ್ಚಿನ ಗಮನ ಸೆಳೆಯುತ್ತಿದೆ.
ಚನ್ನಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕುಮಾರಸ್ವಾಮಿ, ಪ್ರತಿ ದಿನವೂ ನಾನು ನೋವಿನಲ್ಲಿಯೇ ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಷ್ಟು ಮಾತ್ರವಲ್ಲದೆ, ನಾನೆಷ್ಟು ನೋವು ಅನುಭವಿಸಿಕೊಂಡು ಸರ್ಕಾರ ನಡೆಸುತ್ತಿದ್ದೇನೆ ಎಂದು ಹೇಳಲಾರೆ ಎಂದು ಕುಮಾರಸ್ವಾಮಿ ಭಾವುಕರಾಗಿ ಹೇಳಿದ್ದಾರೆ.
ನಿಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ, ಪ್ರತಿ ದಿನ ನಾನು ಅನುಭವಿಸುತ್ತಿರುವ ನೋವನ್ನು ನಾನು ಹೇಳಲು ಸಾಧ್ಯವಿಲ್ಲ, ನಿಮ್ಮೊಂದಿಗೆ ನನ್ನ ನೋವು ಹಂಚಿಕೊಳ್ಳಬೇಕೆಂಬ ಆಸೆ ಇದ್ದರೂ ಸಹ ನಾನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ, ನಾನು ರಾಜ್ಯದ ಜನರ ನೋವನ್ನು ನಿವಾರಿಸುವಲ್ಲಿ ನಿರತನಾಗಿದ್ದೇನೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

'ಮೈತ್ರಿ ಸರ್ಕಾರ ಐದು ವರ್ಷ ಪೂರೈಸುತ್ತದೆ'
ಇದೇ ಸಮಯದಲ್ಲಿ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಿಯೇ ತೀರುತ್ತದೆ ಎಂಬ ಭರವಸೆಯನ್ನೂ ಕುಮಾರಸ್ವಾಮಿ ಅವರು ನೀಡಿದ್ದು. ಮೈತ್ರಿ ಸರ್ಕಾರ ಜನರ ಎಲ್ಲ ನಿರೀಕ್ಷೆಗಳನ್ನು ಪೂರ್ಣಗೊಳಿಸಿಯೇ ತೀರುತ್ತದೆ ಎಂದು ಸಹ ಭರವಸೆ ನೀಡಿದ್ದಾರೆ.

12 ವರ್ಷದ ಹಿಂದೆ ಪರಿಸ್ಥಿತಿ ಬೇರೆ ಇತ್ತು
12 ವರ್ಷದ ಹಿಂದೆ ಸಿಎಂ ಆಗಿದ್ದಾಗ ಇದ್ದಂತಹಾ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ವ್ಯತ್ಯಾಸ ಇದೆ. 12 ವರ್ಷದ ಹಿಂದೆ ಇದ್ದಂತಹಾ ಶಕ್ತಿ ಈಗ ಇಲ್ಲ, ಆದರೆ ಉತ್ಸಾಹ ಇದೆ. ಆರೋಗ್ಯದ ಸಮಸ್ಯೆ ಇದ್ದರೂ ಬದಿಗೊತ್ತಿ ಜನರ ಸೇವೆ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಹಲವು ಪ್ರಶ್ನೆಗಳು ಹುಟ್ಟಿವೆ
ಕುಮಾರಸ್ವಾಮಿ ಪ್ರತಿದಿನ ಅನುಭವಿಸುತ್ತಿರುವ ನೋವು ಯಾವುದು? ಅವರಿಗೆ ನೋವು ನೀಡುತ್ತಿರುವವರು ಯಾರು? ನೋವನನ್ನು ಅನುಭವಿಸಿಕೊಂಡು ಸಿಎಂ ಆಗಿ ಮುಂದುವರೆಯುವ ಅವಶ್ಯಕತೆ ಏನಿದೆ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಕೇಳಲಾಗುತ್ತಿದೆ.

ಹಿಂದೊಮ್ಮೆ ಇಂತಹುದೇ ಹೇಳಿಕೆ ನೀಡಿದ್ದರು ಎಚ್‌ಡಿಕೆ
ಈ ಹಿಂದೆಯೂ ಒಮ್ಮೆ ಸಿಎಂ ಕುಮಾರಸ್ವಾಮಿ ಅವರು, 'ನಾನು ಸಂತೋಶದಿಂದ ಸಿಎಂ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ಹೇಳಿ ಕಣ್ಣೀರು ಹಾಕಿದ್ದರು, ಇದು ಭಾರಿ ವಿವಾದ ಎಬ್ಬಿಸಿತ್ತು, ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿ ಗೆ ಕಾಟ ನೀಡುತ್ತಿದೆ ಎಂಬರ್ಥದಲ್ಲಿ ಚರ್ಚೆ ಆಗಿತ್ತು. ಈಗಲೂ ಸಹ ಕುಮಾರಸ್ವಾಮಿ ಅವರು ಇಂತಹುದ್ದೇ ಹೇಳಿಕೆ ನೀಡಿದ್ದು, ಇದೂ ಸಹ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications