ನಿವೃತ್ತ ಪೊಲೀಸಪ್ಪನ ಬಳಿ ಸಾಲ ತಗೋಂಡು ಆತನನ್ನೇ ಮುಗಿಸಿದ ಸಹೋದರರು
ರಾಮನಗರ, ಜುಲೈ 03: ನಿವೃತ್ತ ಸಿಸಿಬಿ ಪೊಲೀಸ್ ಅಧಿಕಾರಿಯ ಕೊಲೆ ಪ್ರಕರಣವನ್ನ ಬೇಧಿಸುವಲ್ಲಿ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸರು ಬೆಂಗಳೂರಿನ ಶಂಕರ್ ಹಾಗೂ ಆತನ ಸಹೋದರ ನಟರಾಜು ಎಂಬುವರನ್ನು ಬಂಧಿಸಿದ್ದಾರೆ.
ಇದೇ ತಿಂಗಳ 26 ರಂದು ಬೆಂಗಳೂರಿನ ಜಗಳೂರು ನಿವಾಸಿ ನಿವೃತ್ತ ಸಿಸಿಬಿ ಪಿಎಸ್ಐ 63 ವರ್ಷದ ಸಿದ್ದಲಿಂಗಯ್ಯ ಅವರನ್ನ ಕರೆತಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಗೇಟ್ ಬಳಿ ಕಣ್ಣಿಗೆ ಕಾರದ ಪುಡಿ ಎರಚಿ ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಈ ಸಂಬಂಧ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಮಾಡಿದ ದಿನದಂದೆ ಪ್ರರಕರಣದ ಪ್ರಮುಖ ಆರೋಪಿ ಶಂಕರ್ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಗೆ ಶರಣಾಗಿದ್ದ. ಪೊಲೀಸರು ಹೆಚ್ಚಿನ ತನಿಖೆ ನಡೆಸಲಾಗಿ ನಾನು ಹಾಗೂ ನನ್ನ ಸಹೋದರ ನಟರಾಜು ಇಬ್ಬರು ಸೇರಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಶಂಕರ್ ಹಾಗೂ ಮೃತ ಸಿದ್ದಲಿಂಗಯ್ಯ ಇಬ್ಬರು ಬಹಳ ವರ್ಷದ ಸ್ನೇಹಿತರಾಗಿದ್ದರು ಇಬ್ಬರ ನಡುವೆ ಲೇವಾದೇವಿ ಕೂಡ ನಡೆಯುತಿತ್ತು. ಇದೇ ಶಂಕರ್ 30 ಲಕ್ಷ ಹಣ ಬಡ್ಡಿಗೆ ಪಡೆದಿದ್ದರೆ ನಟರಾಜ್ ಕೂಡ ಸಿದ್ದಲಿಂಗಯ್ಯ ನವರಿಂದ 30 ಲಕ್ಷ ಹಣ ಸಾಲ ಪಡೆದಿದ್ದ.
ಬಡ್ಡಿ ವಿಚಾರದಲ್ಲಿ ಸಿದ್ದಲಿಂಗಯ್ಯ ಹಾಗೂ ಶಂಕರ್ ನಡುವೆ ಜಗಳ ಕೂಡ ನಡೆದಿತ್ತು, ನಿನಗೆ ಕೊಟ್ಟಿರುವ ಸಾಲ ಜತೆಗೆ ನಿನ್ನ ತಮ್ಮನಿಗೆ ಕೊಟ್ಟಿರುವ ಹಣ ವಾಪಸ್ಸು ಕೊಡು ಎಂದು ಸಿದ್ದಲಿಂಗಯ್ಯ ಪೀಡಿಸುತ್ತಿದ್ದ ಇದರಿಂದ ರೊಚ್ಚಿಗೆದಿದ್ದ ಇಬ್ಬರು ಸಹೋದರರು ಒಳ ಸಂಚು ನಡೆಸಿ ಸಿದ್ದಲಿಂಗಯ್ಯನನ್ನು ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಕರೆತಂದು ಕೊಲೆ ಮಾಡಿದ್ದಾರೆ.
ಪ್ರಕರಣ ಬೇಧಿಸಿದ ಗ್ರಾಮಾಂತರ ಠಾಣೆ ಸಿಪಿಐ ಕುಮಾರ್, ಎಂ.ಕೆ.ದೊಡ್ಡಿ ಪಿಎಸ್ಐ ಶಿವಕುಮಾರ್ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಡಿವೈಎಸ್ಪಿ ಮಂಜುನಾಥ್ ಪ್ರಸಂಸೆ ವ್ಯಕ್ತಪಡಿಸಿದರು.












Click it and Unblock the Notifications