'ಅನ್ನ ಭಾಗ್ಯ' ಅಕ್ಕಿಗೆ ಕಾಳ ಸಂತೆಕೋರರ ಕನ್ನ, ಇಲಾಖೆಯ ಮೌನ
ರಾಮನಗರ, ಮಾರ್ಚ್ 17; ಸರ್ಕಾರ ಪಡಿತರ ಅಂಗಡಿಗಳ ಮೂಲಕ ಬಡವರಿಗೆ ವಿತರಿಸುವ ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕನ್ನ ಹಾಕಲಾಗುತ್ತಿದೆ. ಅಕ್ಕಿ ಕಾಳ ಸಂತೆಕೋರರ ಮೂಲಕ ರೈಸ್ ಮಿಲ್‌ಗಳಿಗೆ ಸೇರುತ್ತಿರುವ ಕರಾಳ ದಂಧೆ ಬಯಲಾಗಿದೆ, ರಾಮನಗರ ಪೊಲೀಸರು ಇದನ್ನು ಪತ್ತೆ ಹಚ್ಚಿದ್ದಾರೆ.
ಕೆಲ ದಂಧೆಕೋರರು ಇದನ್ನು ಕಸುಬು ಮಾಡಿಕೊಂಡಿದ್ದು ನಿರಂತರವಾಗಿ ಅನ್ನಭಾಗ್ಯದ ಅಕ್ಕಿಗೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದಾರೆ. ಅಕ್ರಮ ಅಕ್ಕಿ ಮಾರಾಟ ಜಾಲದ ವಿರುದ್ಧ ಸಮರ ಸಾರಿರುವ ಪೊಲೀಸರು ಕಳೆದೆರೆಡು ತಿಂಗಳಲ್ಲಿ 8 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.
ರಾಜ್ಯ ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿಯನ್ನ ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡುತ್ತಿದೆ. ಈ ಉಚಿತವಾಗಿ ಅಕ್ಕಿ ನೀಡುವ ಯೋಜನೆಯನ್ನೇ ತಮ್ಮ ಬಂಡವಾಳ ಮಾಡಿಕೊಂಡ ಕೆಲವರು ಕಳ್ಳಸಂತೆಯಲ್ಲಿ ಅಕ್ಕಿಯನ್ನು ಖರೀದಿ ಮಾಡಿ ರೈಸ್ ಮಿಲ್‌ಗಳಿಗೆ ಮಾರಾಟ ಮಾಡಿ ದುಡ್ಡು ಮಾಡಿಕೊಳ್ಳುತ್ತಿರುವ ಬೃಹತ್ ಜಾಲವೇ ಕಾರ್ಯನಿರ್ವಹಿಸುತ್ತಿದೆ.

ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯ 8 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಿರುವ ಪೋಲಿಸರು ವಾಹನಗಳ ವಶಕ್ಕೆ ಪಡೆದು ಅಕ್ರಮ ಅಕ್ಕಿ ಸಾಗಾಟ ಜಾಲವನ್ನು ಬಯಲಿಗೆಳೆದಿದ್ದಾರೆ.
ಪೋಲಿಸರು ಭೇದಿಸಿರುವ 8 ಪ್ರಕರಣಗಳಲ್ಲಿ 5 ಪ್ರಕರಣಗಳು ಚನ್ನಪಟ್ಟಣ ತಾಲ್ಲೂಕಿನ ಒಂದರಲ್ಲೇ ದಾಖಲಾಗಿದ್ದು ಪ್ರಕರಣದ ತೀವ್ರತೆಯನ್ನು ಸಾರುತ್ತಿದೆ. 5 ಪ್ರಕರಣಗಳಿಂದ ಸುಮಾರು 98 ಕ್ವಿಂಟಲ್ ಅಕ್ಕಿಯನ್ನು ಪೋಲಿಸರು ವಶಕ್ಕೆ ಪಡೆಸಿಕೊಂಡಿದ್ದಾರೆ.
ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಅಕ್ಕಿಯನ್ನು ಹಣದ ಆಸೆ ತೋರಿಸಿ ಧಂದೆ ಕೋರರು ಅನ್ನಭಾಗ್ಯದ ಪಡಿತರವನ್ನ ಪಡೆದು ಒಂದೆಡೆ ಶೇಖರಣೆ ಮಾಡಿ ತದನಂತರ ಮಂಡ್ಯ ಮೂಲದ ರೈಸ್ ಮಿಲ್‌ಗಳಿಗೆ ಸಾಗಾಟ ಮಾಡುವ ಜಾಲ ಇದಾಗಿದೆ. ಅದರಲ್ಲೂ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.
ಸರ್ಕಾರ ಪಡಿತರ ಅಕ್ಕಿಗೆ ದುಬಾರಿ ದುಡ್ಡು ತೆತ್ತು ಖರೀದಿ ಮಾಡಿ ಪಡಿತರ ಅಂಗಡಿಗಳ ಮೂಲಕ ಉಚಿತವಾಗಿ ವಿತರಿಸುತ್ತಿದೆ. ಉಚಿತ ಅಕ್ಕಿ ಪಡೆದವರಿಂದ ಪ್ರತಿ ಕೆಜಿಗೆ 10 ರಿಂದ 14 ರೂಪಾಯಿ ನೀಡಿ ಖರೀದಿಸುವ ದಂಧೆಕೋರರು ಅಕ್ರಮವಾಗಿ ಒಂದು ಕಡೆ ಶೇಖರಣೆ ಮಾಡಿ ನಂತರ ರೈಸ್ ಮಿಲ್‌ನಲ್ಲಿ ಪಡಿತರ ಅಕ್ಕಿಗೆ ಪಾಲಿಶ್ ಮಾಡಿಸಿ ಸಣ್ಣ ಅಕ್ಕಿಯಾಗಿ ಪರಿವರ್ತಿಸಿ ದುಬಾರಿ ಹಣಕ್ಕೆ ಮಾರುಕಟ್ಟೆಯಲ್ಲಿ ಮಾರಾಟಮಾಡುವ ದೊಡ್ಡ ಜಾಲ ಸಕ್ರಿಯವಾಗಿದೆ.
ಇನ್ನೂ ಪಡಿತರ ಅಕ್ರಮ ಸಾಗಾಟ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಹಾರ ಇಲಾಖೆ ಅಧಿಕಾರಿ ಸೌಮ್ಯ, "ಪೋಲಿಸ್ ಇಲಾಖೆಯವರೇ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆಹಾರ ಇಲಾಖೆ ವತಿಯಿಂದ ಈ ಬಗ್ಗೆ ನ್ಯಾಯಬೆಲೆ ಅಂಗಡಿಗಳ ಮೇಲೆ ತನಿಖೆ ನಡೆಸಲಾಗುತ್ತದೆ" ಎಂದು ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ವರಿಷ್ಠಾಧಿಕಾರಿ ಸಂತೋಷ ಬಾಬು, "ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ದಾಳಿ ಮಾಡಿ ವಾಹನ ಸಮೇತ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಅಲ್ಲದೇ 8 ಪ್ರಕರಣಗಳಿಂದ ಸುಮಾರು 98 ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದೇವೆ" ಎಂದು ಹೇಳಿದರು.












Click it and Unblock the Notifications