ರಾಮನಗರ; ನಿವೃತ್ತ ಪೈಲೆಟ್ ಕೊಂದಿದ್ದು ಮನೆ ಕೆಲಸದವನೇ!
ರಾಮನಗರ, ಫೆಬ್ರವರಿ 10; ಹಣದಾಸೆಗೆ ನಿವೃತ್ತ ಪೈಲೆಟ್ ಹಾಗೂ ಅವರ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಹತ್ಯೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಬಿಡದಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಬಿಡದಿಯ ಈಗಲ್ಟನ್ ಗಾಲ್ಫ್ ರೆಸಾರ್ಟ್‌ನ ವಿಲ್ಲಾ ನಂ. ಸಿ 21ರಲ್ಲಿ ವೃದ್ಧ ದಂಪತಿ ಕೊಲೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಜೋಗಿಂದರ್ ಕುಮಾರ್ ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ರಘುರಾಜನ್ ಭಾರತೀಯ ವಾಯುಪಡೆಯಲ್ಲಿದ್ದರು. ನಿವೃತ್ತಿ ನಂತರ ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ವಿಲ್ಲಾ ಖರೀದಿಸಿ, ಕಳೆದ 3 ವರ್ಷದಿಂದ ಪತ್ನಿ ಅಶಾ ರಾಜನ್ ಜೊತೆ ವಾಸವಿದ್ದರು. ದಂಪತಿಗಳ ಇಬ್ಬರು ಮಕ್ಕಳು ದೆಹಲಿಯಲ್ಲಿ ವಾಸಿಸುತ್ತಿದ್ದರು.

ರಘುರಾಜನ್ ಮನೆ ಕೆಲಸಕ್ಕೆ ಬರುತ್ತಿದ್ದ ಬಿಹಾರ ಮೂಲದ ಜೋಗಿಂದರ್ ಕುಮಾರ್ ಯಾದವ್, ತನ್ನ ಸಂಬಂಧಿಯೊಂದಿಗೆ ಸೋಮವಾರ ರಾತ್ರಿ ಸುತ್ತಿಗೆಯಿಂದ ಹೊಡೆದು ರಘುರಾಜನ್ ಮತ್ತು ಆಶಾ ರಾಜನ್ ದಂಪತಿಗಳನ್ನು ಕೊಲೆ ಮಾಡಿದ್ದಾನೆ.
ಸೋಮವಾರ ತಡರಾತ್ರಿ ರಘುರಾಜನ್‌ಗೆ ಪುತ್ರ ಕರೆ ಮಾಡಿದ್ದು, ಕರೆ ಸ್ವೀಕಾರ ಮಾಡಿಲ್ಲ. ಇದರಿಂದ ಸಂಶಯಗೊಂಡ ಅವರು, ವಿಲ್ಲಾಗೆ ಹೋಗಿ ಚೆಕ್ ಮಾಡುವಂತೆ ರೆಸಾರ್ಟ್ ಸೆಕ್ಯೂರಿಟಿಗೆ ಹೇಳಿದ್ದಾರೆ. ಸೆಕ್ಯೂರಿಟಿ ವಿಲ್ಲಾ ಒಳಗೆ ಹೋಗಿ ನೋಡಿದಾಗ ಮೊದಲ ಮಹಡಿಯಲ್ಲಿ ರಘುರಾಜನ್, ಕೆಳ ಮಹಡಿಯಲ್ಲಿ ಪತ್ನಿ ಶವ ಕಾಣಿಸಿದೆ. ಅದೇ ಹೊತ್ತಿಗೆ ಜೋಗಿಂದರ್ ಆತನ ಅಣ್ಣನ ಜತೆ ವಿಲ್ಲಾದ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ.
ವೃದ್ಧ ದಂಪತಿಗಳನ್ನು ಹತ್ಯೆ ಮಾಡಿದ ಆರೋಪಿಗಳು ಬಿಡದಿಯ ಕೇತಗಾನಹಳ್ಳಿ ಬಳಿ ತಡರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಪೊಲೀಸರು ಬಂಧಿಸಿದ್ದು, ಆತನ ಬಳಿ ಇದ್ದ 50 ಸಾವಿರ ನಗದನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಹತ್ಯೆಯಲ್ಲಿ ಭಾಗಿಯಾಗಿದ್ದ ಜೋಗಿಂದರ್ ಕುಮಾರ್ ಯಾದವ್ ಅಣ್ಣ ರವೀಂದ್ರ ಯಾದವ್‌ಗಾಗಿ ಬಲೆ ಬೀಸಿದ್ದಾರೆ.
ಘಟನೆ ವಿವರ; ರಘುರಾಜನ್ ದಂಪತಿಗಳ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಬಿಹಾರ ಮೂಲದ ಜೋಗಿಂದರ್ ಕುಮಾರ್ ದಂಪತಿಗಳ ಬಳಿ ಸಾಕಷ್ಟು ಹಣ ಮತ್ತು ಒಡವೆ ಇದೆ. ಅದನ್ನು ಲಪಟಾಯಿಸುವ ಪ್ಲಾನ್ ಮಾಡಿ ತನ್ನ ಸೋದರ ಸಂಭಂದಿ ರವೀಂದ್ರ ಯಾದವ್ ಸಹಾಯ ಪಡೆದಿದ್ದ.
ಸೋಮವಾರ ಎಂದಿನಂತೆ ರಘುರಾಜನ್ ವಿಲ್ಲಾಗೆ ಕೆಲಸಕ್ಕೆ ಬಂದ ಜೋಗಿಂದರ್ ಟೆರೇಸ್ ಮೇಲಿಂದ ಮನೆ ಒಳಗೆ ಪ್ರವೇಶ ಮಾಡುವ ಬಾಗಿಲು ಲಾಕ್ ಒಪನ್ ಮಾಡಿಟ್ಟು, ಸುಮಾರು ಮಧ್ಯಾಹ್ನ 12 ಗಂಟೆಗೆ ಕೆಲಸ ಮುಗಿದಿದೆ ನಾನು ಹೊರಡುತ್ತೇನೆ ಎಂದು ತಿಳಿಸಿ ಮನೆಯಿಂದ ಹೊರ ಬಂದಿದ್ದಾನೆ.
ನಂತರ ತನ್ನ ಅಣ್ಣನೊಂದಿಗೆ ಮೊದಲೇ ಲಾಕ್ ಒಪನ್ ಮಾಡಿದ್ದ ಬಾಗಿಲಿನಿಂದ ಮನೆ ಒಳಗೆ ಪ್ರವೇಶ ಮಾಡಿದ ಆರೋಪಿಗಳು ಮಧ್ಯರಾತ್ರಿಯ ತನಕ ಗೆಸ್ಟ್ ರೂಂ ನಲ್ಲಿ ಕಾಲ ಕಳೆದಿದ್ದಾರೆ. ತಡರಾತ್ರಿ ಮನೆಯಲ್ಲೇ ಇದ್ದ ಸುತ್ತಿಗೆಯನ್ನು ತೆಗೆದುಕೊಂಡು ರಘುರಾಜನ್ ಮಲಗಿದ್ದ ಕೊಠಡಿಗೆ ಹೋಗಿದ್ದಾರೆ. ರವೀಂದ್ರ ಯಾದವ್, ರಘುರಾಜನ್ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಜೋಗಿಂದರ್ ಸುತ್ತಿಗೆಯಿಂದ ರಘುರಾಜನ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದಾಗ ಹೆದರಿದ ಆರೋಪಿಗಳಲ್ಲಿ ಒಬ್ಬ ಶವದ ಪಕ್ಕ ವಾಂತಿ ಮಾಡಿಕೊಂಡಿದ್ದಾನೆ. ನಂತರ ಪಕ್ಕದ ರೂಂಗೆ ಹೋಗಿ ಇಬ್ಬರು ವಿಸ್ಕಿ ಕುಡಿದು, ಬೆಳಿಗಿನ ಜಾವದ ವರೆಗೆ ಕಾಲ ಕಳೆದಿದ್ದಾರೆ ನಂತರ ಕೆಳಗಿನ ರೂಂ ನಲ್ಲಿ ಮಲಗಿದ್ದ ಆಶಾ ರಾಜನ್ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.
ನಂತರ ರಘುರಾಜನ್ ಮೊಬೈಲ್‌ನಿಂದ ಹಣ ವರ್ಗಾವಣೆ ಮಾಡಿಕೊಳ್ಳಲು ಸತತವಾಗಿ ಪ್ರಯತ್ನ ಮಾಡಿದರು ಸಾಧ್ಯವಾಗಿಲ್ಲ, ನಂತರ ಮನೆಯಲ್ಲಿದ್ದ ಸುಮಾರು 50 ಸಾವಿರ ಹಣ ಹಾಗೂ ಚಿನ್ನಾಭರಣಗಳನ್ನು ಕದಿಯಲು ಮುಂದಾಗಿದ್ದಾರೆ.
ಅದೇ ವೇಳೆಗೆ ರೆಸಾರ್ಟ್ ಸೆಕ್ಯುರಿಟಿಗಳು ಮನೆ ಒಳಗೆ ಬಂದುದ್ದು ನೋಡಿ ಗಾಬರಿಯಾದ ಆರೋಪಿಗಳಾದ ಜೋಗಿಂದರ್ ಕುಮಾರ್ ಯಾದವ್ ಮತ್ತು ರವೀಂದ್ರ ಯಾದವ್ ಚಿನ್ನಾಭರಣ ಬಿಟ್ಟು 50 ಸಾವಿರ ಹಣದೊಂದಿಗೆ ಮನೆಯಿಂದ ಪರಾರಿಯಾಗಿದ್ದಾರೆ.












Click it and Unblock the Notifications