Bengaluru-Mysuru expressway: ಆಗಸ್ಟ್ 1ರಿಂದ ಈ ವಾಹನಗಳಿಗೆ ಎಂಟ್ರಿ ಕ್ಲೋಸ್, ನಿಯಮ ಮೀರಿದ್ರೆ 500 ರೂ. ದಂಡ
ರಾಮನಗರ, ಜುಲೈ, 31: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಆದ್ದರಿಂದ ಈ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್, ಆಟೋ, ಬೈಕ್ ಸೇರಿದಂತೆ ಇನ್ನಿತರ ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ನಿಯಮ ಆಗಸ್ಟ್ 1ರಿಂದ ಅಂದರೆ ನಾಳೆಯಿಂದಲೇ ಜಾರಿಯಾಗಲಿದೆ ಎಂದು ರಾಮನಗರ ಎಸ್‌ಪಿ ತಿಳಿಸಿದ್ದಾರೆ.
ಮಂಗಳವಾರದಿಂದಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಸಂಚಾರಕ್ಕೆ ನಿರ್ಬಂಧ ವಿಧಿಸಲು ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ. ಹೆದ್ದಾರಿ ಮೇಲೆ ಅಪಘಾತ ನಿಗ್ರಹಕ್ಕೆ ಹೊಸ ನಿಯಮ ಜಾರಿಗೆ ತರಲಾಗಿದ್ದು, ಆಟೋ, ಟ್ರಾಕ್ಟರ್ ಚಾಲಕರು ಟೋಲ್ ಕಟ್ಟಿಯೂ ಹೆದ್ದಾರಿಯನ್ನು ಬಳಸುವ ಹಾಗಿಲ್ಲ ಎಂದು ಆದೇಶ ನೀಡಲಾಗಿದೆ.

ಒಂದು ವೇಳೆ ನಿಯಮ ಮೀರಿ ಬೈಕ್, ಟ್ರ್ಯಾಕ್ಟರ್ ಹಾಗೂ ಆಟೋ ಸವಾರರು ಬೆಂಗಳೂರು-ಮೈಸೂರು ಹೆದ್ದಾರಿ ಬಳಸಿದರೆ 500 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. 9 ಕಡೆಗಳಲ್ಲಿ ಪೊಲೀಸರು ತಪಾಸಣೆ ನಡೆಸಲಿದ್ದು, ಹೆದ್ದಾರಿಯ ಎಂಟ್ರಿ ಅಂಡ್ ಎಕ್ಸಿಟ್ ಪಾಯಿಂಟ್‌ಗಳಲ್ಲಿ ಚೆಕಿಂಗ್ ಮಾಡಲಾಗುತ್ತದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಬೆಂಗಳೂರು ನಗರದ ಕೆಂಗೇರಿ- ನೈಸ್ ರಸ್ತೆಯ ಬಳಿ ಇರುವ ಪಂಚಮುಖಿ ಗಣಪತಿ ದೇವಸ್ಥಾನದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಸಮೀಪದ ವರೆಗಿನ NH-275 ಎಕ್ಸ್‌ಪ್ರೆಸ್ ವೇನಲ್ಲಿ ಈ ಕೆಳಕಂಡ ನಿರ್ಧಿಷ್ಟ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಯಾವೆಲ್ಲ ವಾಹನಗಳಿಗೆ ನಿಷೇಧ?
1. ಮೋಟಾರ್ ಸೈಕಲ್ (ಸ್ಕೂಟರ್ ಮತ್ತು ಇತರೆ ದ್ವಿಚಕ್ರ ವಾಹನಗಳು ಸೇರಿದಂತೆ)
2. ತ್ರಿಚಕ್ರ ವಾಹನಗಳು (ಆಟೋ ರಿಕ್ಷಾ, ಇ-ಕಾರ್ಟ್, ಇ-ರಿಕ್ಷಾ ಸೇರಿದಂತೆ)
3. ಮೋಟಾರು ಅಲ್ಲದ ವಾಹನಗಳು
4. ಟ್ರ್ಯಾಕ್ಟರ್‌ಗಳು
5. ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು
6. ಕ್ಯಾಡ್ರಿ ಸೈಕಲ್‌ಗಳು.












Click it and Unblock the Notifications