ಅನಿತಾ ಕುಮಾರಸ್ವಾಮಿ ಚುನಾವಣೆಯಿಂದ ದೂರ ಸರಿದಿದ್ದಾರೆ, ಸುಖಾಸುಮ್ಮನೆ ಅವರ ಹೆಸರು ತರಬೇಡಿ: ನಿಖಿಲ್ ಹೀಗೆ ಹೇಳಿದ್ದು ಯಾರಿಗೆ?
ರಾಮನಗರ, ಏಪ್ರಿಲ್, 05: ಜೆಡಿಎಸ್‌ನಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವ ಸಮಯದಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಗಳು ಹರಡಿದ್ದವು. ನಂತರ ಶಾಸಕಿ ಅನಿತಾ ಕುಮಾರಸ್ವಾಮಿ ಟ್ವೀಟ್ ಮೂಲಕ ತಮ್ಮ ಮೇಲಿನ ವದಂತಿಗಳನ್ನು ತಳ್ಳಿಹಾಕಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಪಂಚರತ್ನ ರಥಯಾತ್ರೆಯ ವೇಳೆ ನನ್ನನ್ನು ರಾಮನಗರದ ಅಭ್ಯರ್ಥಿ ಎಂದು ಘೋಷಣೆ ಮಾಡಿದ ದಿನದಿಂದ ಅನಿತಾ ಕುಮಾರಸ್ವಾಮಿಯವರು ಚುನಾವಣಾ ರಾಜಕೀಯದಿಂದ ದೂರ ಆಗಿದ್ದಾರೆಂದು ಸ್ಪಷ್ಟನೆ ನೀಡಿದರು.
ನಗರದ ಹಲವು ಬಡಾವಣೆಗಳಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಯಲ್ಲಿ ನನ್ನನ್ನು ಕ್ಷೇತ್ರ ಅಭ್ಯರ್ಥಿ ಎಂದು ಘೋಷಣೆ ಮಾಡಿ ಚುನಾವಣೆಯಿಂದ ಹಿಂದೆ ಸರಿದ್ದಿದ್ದಾರೆ. ಆದ್ದರಿಂದ ಸುಖಾಸುಮ್ಮನೆ ನಮ್ಮ ತಾಯಿಯವರ ಹೆಸರು ತರಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.

ಈ ಹಿಂದೆ ಮಧುಗಿರಿ ಕ್ಷೇತ್ರದ ಚುನಾವಣೆ ಸಮಯದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ವೀರಭ್ರದಸ್ವಾಮಿ ಅವರನ್ನು ಸರ್ಕಾರ ಸರ್ಕಾರಿ ಸೇವೆಯಿಂದ ಬಿಡುಗಡೆ ಮಾಡದ ಹಿನ್ನೆಲೆ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಲು ಸಾಧ್ಯ ಆಗಲಿಲ್ಲ. ಆದ್ದರಿಂದ ಸೂಕ್ತ ಅಭ್ಯರ್ಥಿ ಕೊರತೆಯಿಂದಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮಧುಗಿರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು ಎಂದರು.
ಚುನಾವಣಾ ಕಣದಲ್ಲಿ ಸೊಸೆಯಂದಿರ ಜಟಾಪಟಿ : ಎಲ್ಲಾ ಚರ್ಚೆಗೂ ತೆರೆ ಎಳೆದ ಅನಿತಾ ಕುಮಾರಸ್ವಾಮಿ
ಅನಿತಾ ಕುಮಾರಸ್ವಾಮಿ ಸ್ಪರ್ಧೆ ಅನಿರೀಕ್ಷಿತವಾಗಿದೆ
ಇನ್ನು ರಾಮನಗರದಲ್ಲೂ ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆ ಅನಿರೀಕ್ಷಿತವಾಗಿದೆ. ಈ ಹಿಂದೆ ಪಕ್ಷ ಸಾಮಾನ್ಯ ಕಾರ್ಯಕರ್ತರಾಗಿದ್ದ ಕೆ.ರಾಜು ಅವರನ್ನಯ ಕಣಕ್ಕಿಳಿಸಲಾಯಿತು. ಆಗ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ನಂತರ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ, ಜೆಡಿಎಸ್ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಚುನಾವಣೆಯಲ್ಲಿ ತಮ್ಮ ಕುಟುಂಬದಿಂದಲೇ ಅಭ್ಯರ್ಥಿ ಮಾಡಬೇಕು ಎಂದು ಕಾರ್ಯಕರ್ತರು ಒತ್ತಡ ಹಾಕಿದಾಗ ಅನಿತಾ ಕುಮಾರಸ್ವಾಮಿಯವರು ಸ್ಪರ್ಧೆ ಮಾಡಿದ್ದರು ಎಂದರು.
ಕಳೆದ ಬಾರಿಯ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧೆ ಮಾಡುವಂತೆ ನನಗೂ ಒತ್ತಡ ಬಂದಿತ್ತು. ಆದರೆ ಆಗ ನಾನು ಸಿನಿಮಾದಲ್ಲಿ ಬ್ಯುಸಿ ಆಗಿದ್ದೆ. ಹಾಗಾಗಿ ಅನಿವಾರ್ಯ ಕಾರಣಗಳಿಂದ ನಮ್ಮ ತಾಯಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ನಂತರದ ದಿನಗಳಲ್ಲಿ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದಾರೆ. ಮತ್ತೆ ಅವರು ಟಿಕೆಟ್ ಆಕಾಂಕ್ಷಿಗಳಲ್ಲ, ಅವರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ ಎಂದು ನಿಕಿಲ್ ಕುಮಾರಸ್ವಾಮಿ ತಿಳಿಸಿದರು.

ಪಕ್ಷ ಬಯಸಿದರೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ
ಎಲ್ಲಾ ಪಕ್ಷದಲ್ಲೂ ಗೊಂದಲಗಳು ಇದ್ದೇ ಇರುತ್ತವೆ. ಅಂತಿಮವಾಗಿ ವರಿಷ್ಠರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ದೇವೇಗೌಡರು ಪಕ್ಷವನ್ನು ಕಟ್ಟಿ ಬೆಳೆಸಿದವರಾಗಿದ್ದಾರೆ. ಜೆಡಿಎಸ್ ಹೋರಾಟದ ಹಿನ್ನೆಲೆಯಲ್ಲಿ ಬಂದ ಪಕ್ಷ ಆಗಿದೆ. ಪಕ್ಷ ಉಳಿಸಿಕೊಳ್ಳಲು ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಪಕ್ಷ ಹೇಳಿದ್ದರೆ ನಾನೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ. ಕಾರ್ಯಕರ್ತರು, ಮುಖಂಡರು ತೀರ್ಮಾನ ಮಾಡಿದರೆ ನಾನೇ ಬ್ಯಾಕ್ ಆಫ್ ಆಗುತ್ತೇನೆ ಎಂದು ಹೇಳುವ ಮೂಲಕ ವಂದಂತಿಗಳಿಗೆ ತೆರೆ ಎಳೆದಿದ್ದಾರೆ.
ಹೀಗೆ ಅನಿತಾ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿಯವರು ಪ್ರತಿಕ್ರಿಯೆ ನೀಡುವ ಮೂಲಕ ಬಂದಂತಹ ವದಂತಿಗಳಿಗೆ ತೆರೆ ಎಳೆದಿದ್ದಾರೆ.












Click it and Unblock the Notifications