Food Poisoning: ರಾಯಚೂರಿನಲ್ಲಿ ವಿಷಹಾರ ಸೇವಿಸಿ ಮಕ್ಕಳು ಸಾವು, ಪೋಷಕರು ಅಸ್ವಸ್ಥ
ರಾಯಚೂರು, ಏಪ್ರಿಲ್ 28: ವಿಷಹಾರ ಸೇವಿಸಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ವಡ್ಲೂರು ಗ್ರಾಮದಲ್ಲಿ ನಡೆದಿದೆ. ಲಿಂಗಸೂಗೂರು ತಾಲೂಕಿನ ಕಮಲದಿನ್ನಿ ಗ್ರಾಮದ ಆರತಿ (7) ಮತ್ತು ಪ್ರಿಯಾಂಕ (9) ಮೃತಪಟ್ಟ ಮಕ್ಕಳು ಎಂದು ಗುರುತಿಸಲಾಗಿದೆ.
ಮೃತ ಮಕ್ಕಳ ಕುಟುಂಬಸ್ಥರಾದ ಹುಸೇನಮ್ಮ (35) , ಮಾರುತಿ (40) ಮತ್ತು ಲಕ್ಷ್ಮಣ್ (60) ತೀವ್ರ ಅಸ್ವಸ್ಥಗೊಂಡಿದ್ದಾರೆ. ಸದ್ಯ ಅಸ್ವಸ್ಥಗೊಂಡಿರುವವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಮಕ್ಕಳು ಹಾಗೂ ಪೋಷಕರು ರಾಯಚೂರು ತಾಲೂಕಿನ ವಡ್ಲೂರು ಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ಬಂದಿದ್ದರು. ವಡ್ಲೂರಿನ ಬ್ರಿಕ್ಸ್ ತಯಾರಿಕೆ ಘಟಕದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ (ಏಪ್ರಿಲ್ 27) ಶನಿವಾರ ರಾತ್ರಿ ಊಟ ಸಮಯದಲ್ಲಿ ಚಪಾತಿ , ಹೆಸರಕಾಳು, ಅನ್ನ ಸಾಂಬರು ಸೇವಿಸಿದ್ದ ಮಕ್ಕಳು ಸೇರಿ ಕುಟುಂಬಸ್ಥರು ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದೆ.
ಕೂಡಲೇ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತರಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ರಾಯಚೂರಿನ ಗ್ರಾಮೀಣ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸ್ಟೆಲ್ ಆಹಾರ ಸೇವಿಸಿ ವಿದ್ಯಾರ್ಥಿನಿಯರು ಅಸ್ವಸ್ಥ
ಇನ್ನು ನಿನ್ನೆ ಸಿಂಧನೂರು ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ಪದವಿ ವಸತಿ ನಿಲಯದ 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಹಾಸ್ಟೆಲ್ ಆಹಾರ ಸೇವಿಸಿ ವಾಂತಿ-ಬೇಧಿಯಿಂದ ಬಳಲಿ ಅಸ್ವಸ್ಥಗೊಂಡಿದ್ದರು.
ಈ ವಸತಿ ನಿಲಯದಲ್ಲಿ ಒಟ್ಟು 350 ವಿದ್ಯಾರ್ಥಿನಿಯರು ಇದ್ದು, ಪರೀಕ್ಷೆ ಮುಗಿದ ಕಾರಣ ಬಹಳಷ್ಟು ವಿದ್ಯಾರ್ಥಿನಿಯರು ತಮ್ಮ ಊರುಗಳಿಗೆ ತೆರಳಿದ್ದಾರೆ. ಶುಕ್ರವಾರದಂದು 120 ವಿದ್ಯಾರ್ಥಿನಿಯರು ಮಾತ್ರ ಹಾಸ್ಟೆಲ್‍ನಲ್ಲಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ಅನ್ನ, ಸಾಂಬಾರು, ರೊಟ್ಟಿ, ಹುರಳಿ ಕಾಳು ಊಟ ಮಾಡಿದ್ದಾರೆ. ಮೂರ್ನಾಲ್ಕು ವಿದ್ಯಾರ್ಥಿನಿಯರು ಸುಸ್ತಾಗುತ್ತಿದೆಂದು ಸಂಜೆ 6.30ರ ಸುಮಾರಿಗೆ ಸಾರ್ವಜನಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು.
ತದನಂತರ ಹಾಸ್ಟೆಲ್‍ನಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ತಲೆನೋವು, ವಾಂತಿ-ಬೇಧಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಆಟೋಗಳಲ್ಲಿ ರಾತ್ರಿ 8 ಗಂಟೆಗೆ ಸುಮಾರಿಗೆ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾದರು. ಪ್ರಾರಂಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ, ಚಿಕಿತ್ಸೆ ಸಿಗದೆ ವಿದ್ಯಾರ್ಥಿನಿಯರು ಪರದಾಟ ನಡೆಸಿದರು. ಈ ವಿಷಯ ತಿಳಿದಾಗ್ಯೂ ಸಹ ಹಾಸ್ಟೆಲ್ ಮೇಲ್ವಿಚಾರಕಿ ರಶ್ಮಿ ಆಸ್ಪತ್ರೆಗೆ ಬಂದಿರಲಿಲ್ಲ. ಮೊಬೈಲ್ ಕರೆ ಮಾಡಿದರೆ ಬೇರೆ ಊರಿನಲ್ಲಿ ಇದ್ದೇನೆಂದು ತಮ್ಮ ಸಿಬ್ಬಂದಿಗೆ ಹೇಳಿದ್ದರು. ಹೀಗಾಗಿ ಕಿರಿಯ ವಾರ್ಡನ್ ಚಂದ್ರಕಲಾ ಹಾಗೂ ಅಡುಗೆ ಸಿಬ್ಬಂದಿ ಆಸ್ಪತ್ರೆಗೆ ಬಂದು ವಿದ್ಯಾರ್ಥಿನಿಯರ ಜೊತೆಗಿದ್ದರು. ಸದ್ಯ ವಿದ್ಯಾರ್ಥಿನಿಯರ ಆರೋಗ್ಯ ಸುಧಾರಿಸಿದೆ ಎಂದು ತಿಳಿದುಬಂದಿದೆ.












Click it and Unblock the Notifications