ಬಸ್ ನಿಲ್ದಾಣ, ಸಿಗ್ನಲ್‌ಗಳಲ್ಲಿ ಮಂಗಳ ಮುಖಿಯರ ಹಾವಳಿ: ನಿಯಂತ್ರಣಕ್ಕೆ ಕ್ರಮ ಎಲ್ಲಿ?
ರಾಯಚೂರು, ಜೂನ್ 29: ಜಿಲ್ಲೆಯ ರೈಲು ನಿಲ್ದಾಣ, ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು, ಪ್ರಮುಖ ಬೀದಿಗಳು ಹಾಗೂ ಸಿಗ್ನಲ್ ಲೈಟ್ ಸ್ಟಾಪ್‌ಗಳಲ್ಲಿ ಮಂಗಳ ಮುಖಿಯರು ಭಿಕ್ಷಾಟನೆ ಹೆಸರಲ್ಲಿ ಜನರಿಗೆ ಹೆದರಿಸಿ ದೌರ್ಜನ್ಯ ಮಾಡುತ್ತಿದ್ದು ಪೊಲೀಸ್ ಇಲಾಖೆ ಕಡಿವಾಣಕ್ಕೆ ಮುಂದಾಗದಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ.
ಆರೋಗ್ಯವಂತ ಮಂಗಳಮುಖಿಯರು ಉದ್ಯೋಗ ಕೈಗೊಂಡು ಬದುಕು ಕಟ್ಟಿಕೊಳ್ಳುವ ಬದಲು ಭಿಕ್ಷಾಟನೆ ಹೆಸರಲ್ಲಿ ಜನರಿಂದ ಹಣ ಕೀಳುತ್ತಿದ್ದಾರೆ. ಒಂದು ವೇಳೆ ಹಣ ಕೊಡದೇ ಇದ್ದಲ್ಲಿ ಅಶ್ಲೀಲವಾಗಿ ನಿಂದಿಸುವುದು ಹಲ್ಲೆ ಮಾಡಲು ಮುಂದಾಗುವುದು ಅಂಗಡಿ ಹೋಟೆಲ್‌ಗಳ ಕ್ಯಾಶ್‌ಗೆ ಕೈಗೆ ಹಾಕುವುದು ಮಾಡುತ್ತಿದ್ದು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಜಿಲ್ಲಾದ್ಯಂತ ಇವೆ.

ರಾಜ್ಯವನ್ನು ಭಿಕ್ಷಾಟನೆ ಮುಕ್ತ ಮಾಡಲು ಸರಕಾರ ಆದೇಶ ಹೊರಡಿಸಿದ್ದು ನೆಪಕ್ಕೆ ಎಂಬಂತಾಗಿದೆ. ಮಂಗಳ ಮುಖಿಯವರಿಗೆ ಹಣ ಕೊಟ್ಟರೆ ತಮ್ಮ ಕೆಲಸ ಸರಳವಾಗಿ ನೆರವೇರಲಿದೆ ಎಂಬ ನಂಬಿಕೆಗೆ ಜನರು ಮಾರು ಹೋಗಿದ್ದಾರೆ. ಆದರೆ ಮಂಗಳ ಮುಖಿಯರು ಇದರ ಲಾಭ ಪಡೆದು ಜನರಿಂದ ಬೆದರಿಸಿ ಹಣ ಕೀಳುತ್ತಿದ್ದಾರೆ ಎನ್ನಲಾಗಿದೆ.
ಭಿಕ್ಷಾಟನೆ ಸಂದರ್ಭದಲ್ಲಿ ಹಣ ನೀಡದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂಬ ಭಯದಿಂದ ಜನ ಹಣ ನೀಡಿ ಹೋಗುತ್ತಿರುವುದು ಕಂಡು ಬಂದಿದೆ. ಮಂಗಳ ಮುಖಿಯರ ಗುಂಪು ಜಿಲ್ಲೆಗೆ ಬಂದಿದ್ದು ಸುಮಾರು 300ಕ್ಕೂ ಹೆಚ್ಚು ಮಂಗಳ ಮುಖಿಯರಿದ್ದು ನಗರ ಸೇರಿ ಜಿಲ್ಲೆಯ ಏಳು ತಾಲೂಕಿನಲ್ಲಿ ಭಿಕ್ಷಾಟನೆ ಯಲ್ಲಿ ತೊಡಗಿದ್ದು ಇವರೆಲ್ಲರೂ ಅನ್ಯ ಜಿಲ್ಲೆಯವರಾಗಿದ್ದು, ಇದೂವರೆಗೂ ಜಿಲ್ಲೆಯಲ್ಲಿ 262 ಜನ ಮಂಗಳ ಮುಖಿಯವರಿದ್ದು ಇವರೆಲ್ಲ ಸರ್ಕಾರಿ ಸೌಲಭ್ಯ ಪಡೆದು ತಮ್ಮ ತಮ್ಮ ಕೆಲಸದಲ್ಲಿ ಭಾಗಿಯಾಗಿ ಭವಿಷ್ಯ ಕಂಡು ಕೊಂಡಿದ್ದಾರೆ. ಆದರೆ ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ಮಂಗಳ ಮುಖಿಯರು ಜನರಲ್ಲಿ ಭಯ ಹುಟ್ಟಿಸುತ್ತಿರುವುದು ಕಂಡು ಬಂದಿದೆ.
ನಮ್ಮ ಬಳಿ ಚಿಲ್ಲರೆ ಇಲ್ಲ ಎಂದರೂ ಬಿಡುವುದಿಲ್ಲ. ನಾವು ಚಿಲ್ಲರೆ ಕೊಡುತ್ತೇವೆ ಎಂದು ಬಲವಂತವಾಗಿ ಹಣವನ್ನು ಕಸಿದುಕೊಂಡು ಹಾಗೆಯೇ ಹೋಗುತ್ತಿದ್ದಾರೆ. ಪ್ರತಿನಿತ್ಯ ನಗರದ ಹೊರ ವಲಯದ ರೋಡ್ ಬ್ರೇಕ್‌ನಲ್ಲಿ ಒಂದು ಗುಂಪು ನಗರದಲ್ಲೊಂದು ಗುಂಪು ಬಂದು ಭಿಕ್ಷಾಟನೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ದಿನೇ ದಿನೇ ಮಂಗಳ ಮುಖಿಯರು ಹೆಚ್ಚು ಕಂಡು ಬರುತ್ತಿದ್ದು ಪೊಲೀಸರು ನಿಯಂತ್ರಿಸಬೇಕು . ಅಂಗಡಿ, ಹೋಟಲ್, ಮತ್ತಿತರೆ ಚಿಲ್ಲರೆ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ. ನಗರ ಹಾಗೂ ನಾನಾ ತಾಲೂಕಿನ ಅಂಗಡಿ ಮುಂಗಟ್ಟು ಮತ್ತಿತರ ಕಡೆ ಮಂಗಳ ಮುಖಿಯರು ಗುಂಪು ಗುಂಪಾಗಿ ಹೋಗಿ ಭಿಕ್ಷೆ ಬೇಡುತ್ತಾರೆ. ಹಣ ಕೊಡದಿದ್ದರೆ ಅಂಗಡಿಯೊಳಗೆ ನುಗ್ಗಿ ದಾಂಧಲೆ ನಡೆಸುತ್ತಾರೆ. ಗ್ರಾಹಕರ ಮುಂದೆಯೇ ನಿಂದಿಸುತ್ತಾರೆ. ಇವರ ಉಸಾಬರಿ ನಮಗೇಕೆ ಎಂದು ಅಂಗಡಿ, ಹೊಟೇಲ್‌ಗಳ ಮಾಲೀಕರು ಹಣ ನೀಡುತ್ತಿದ್ದಾರೆ. ನಿತ್ಯವೂ ಜಿಲ್ಲೆಯ ಜನರು ಕಿರಿಕಿರಿ ಅನುಭವಿಸುವ ಸ್ಥಿತಿ ಇದೆ ಎಂದು ವರದಿಯಾಗಿದೆ.
ಮಂಗಳ ಮುಖಿಯರಿಗೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಿದೆ. ನಮ್ಮ ಇಲಾಖೆಯಿಂದ ಸ್ವಾವಲಂಬಿ ಜೀವನ ನಡೆಸಲು 30 ಸಾವಿರ ಪ್ರೋತ್ಸಾಹ ಧನ ನೀಡುತ್ತೇವೆ. ಜಿಲ್ಲೆಯ ಮಂಗಳ ಮುಖಿಯರು ಯೋಜನೆಯ ಸದುಪಯೋಗ ಪಡೆದಿದ್ದಾರೆ. ಆದರೆ ಇತ್ತೀಚೆಗೆ ಹೊರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಂಗಳ ಮುಖಿಯರು ಬಂದಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತರುವೆ ಎಂದು ರಾಯಚೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಂಗಳ ಮುಖಿಯರು ಸಿಗ್ನಲ್‌ಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮಕ್ಕೆ ಮುಂದಾಗುವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದ್ದಾರೆ.












Click it and Unblock the Notifications