ಜಾನುವಾರುಗಳಿಗೆ ನೀರು ತರಲು ಹೋಗಿದ್ದ ಮೂರು ಮಕ್ಕಳ ಸಾವು
ರಾಯಚೂರು, ಏಪ್ರಿಲ್ 09: ಜಾನುವಾರುಗಳಿಗೆ ಕುಡಿಯಲು ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ನಡೆದಿದೆ.
ನಾಗರಾಜ್ (10), ಕಾರ್ತಿಕ್ (8) ಹಾಗೂ ರವಿಕುಮಾರ್ (7) ಮೃತ ಬಾಲಕರಾಗಿದ್ದಾರೆ. ಮೂರು ಮೃತ ಬಾಲಕರು ಒಂದೇ ಕುಟುಂಬದವರಾಗಿದ್ದು, ಇಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಜಾನುವಾರಗಳಿಗೆ ಕುಡಿಯಲು ನೀರು ತರಲು ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ಹೋಗಿದ್ದರು.
ಈ ವೇಳೆ ಒಬ್ಬ ಬಾಲಕನ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ಮತ್ತೊಬ್ಬ ಬಾಲಕ ಆತನನ್ನು ಕಾಪಾಡಲು ಹೋಗಿ ಆತನೂ ಕೆರೆಯಲ್ಲಿ ಮುಳುಗಿದ್ದಾನೆ. ಈ ರೀತಿ ಮೂರು ಮಕ್ಕಳು ಒಬ್ಬರನ್ನ ಕಾಪಾಡಲು ಒಬ್ಬರು ಹೋಗಿ ಮೂವರು ನೀರುಪಾಲಾಗಿದ್ದಾರೆ.

ಸ್ಥಳಿಯರು ಕೆರೆಯ ಬಳಿ ಹೋಗಿ ನೋಡಿದಾಗ ಬಾಲಕರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications