ರಾಯಚೂರು ಜಿಲ್ಲೆಗೆ ಕೊನೆಗೂ ಬಂತು ಸೈನ್ಸ್ ಪಾರ್ಕ್
ರಾಯಚೂರು, ಜುಲೈ 12: ಜಿಲ್ಲೆಗೆ ಕೊನೆಗೂ ಸೈನ್ಸ್ ಪಾರ್ಕ ಮಂಜೂರಾಗಿದ್ದು ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆ ಹಾಗೂ ಕನಸು ಈಡೇರಿದಂತಾಗಿದೆ. ಕಳೆದ ವರ್ಷ ಜಿಲ್ಲಾಧಿಕಾರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಇತ್ತೀಚೆಗೆ ಗ್ರೀನ್ ಸಿಗ್ನಲ್ ನೀಡಿದೆ.
ನಗರದ ಮಂತ್ರಾಲಯ ರಸ್ತೆಗೆ ಹೊಂದಿಕೊಂಡಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿವಿಧ ವ್ಶೆಜ್ಞಾನಿಕ ಮನೋಭಾವ ಮೂಡಿಸುವ ಕನಸಿಗೆ ಹಾಲಿ ಜಿಲ್ಲಾಧಿಕಾರಿ ಪ್ರೋತ್ಸಾಹಕ್ಕೆ ಅಲ್ಲಿನ ಸಿಬ್ಬಂದಿಯಲ್ಲಿ ಹುಮ್ಮಸ್ಸು ಹೆಚ್ಚಿಸಿದೆ. ವಿಜ್ಞಾನ ಕೇಂದ್ರಕ್ಕೆ ಬರುವ ವಿದ್ಯಾರ್ಥಿ ಮತ್ತು ಮಕ್ಕಳಿಗೆ ವೈಜ್ಞಾನಿಕ ಮನಸ್ಥಿತಿ ಬಲ ಪಡಿಸಲು ಸಾಧಾರಣ ಉದ್ಯಾನ ನಿರ್ಮಾನ ಮಾಡುವುದಕ್ಕಿಂತ ವಿನೂತನವಾಗಿ ಪ್ರಯತ್ನ ಮಾಡಲು ಮುಂದಾಗಿದ್ದಾರೆ.

ಕಳೆದ ಎಂಟು ತಿಂಗಳ ಹಿಂದೆ ರಾಜ್ಯ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಒಟ್ಟು 1 ಕೋಟಿ 60 ಲಕ್ಷದ 16 ಸಾವಿರ ರೂಪಾಯಿ ಮೊತ್ತದ ಸೈನ್ಸ್ ಪಾರ್ಕ್‌ಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಈಗ ಅನುಮೋದನೆ ಸಿಕ್ಕಿದ್ದು ಅದರ ನಿರ್ಮಾಣಕ್ಕೆ ಚಟುವಟಿಕೆಗಳು ಗರಿಗೆದರಿವೆ.
ಎನ್.ಎಸ್. ಬೋಸರಾಜ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಅಧಿಕಾರ ಸ್ವೀಕರಿಸಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದಾಗ ಜಿಲ್ಲಾಧಿಕಾರಿ ಮತ್ತು ಅಲ್ಲಿನ ಸಿಬ್ಬಂದಿ ಇಲಾಖೆಗೆ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ಗಮನ ಸೆಳೆದರು. ಭೇಟಿ ಮಾಡಿ 10 ದಿನದಲ್ಲೇ ಇಲಾಖೆಯಿಂದ ಜಿಲ್ಲಾಡಳಿತದ ಪ್ರಸ್ತಾವನೆಗೆ ಅನುಮೋದನೆ ಕೊಡಿಸುವ ಮೂಲಕ ಮಕ್ಕಳ ವಿಜ್ಞಾನ ಮನೋಭಾವಕ್ಕೆ ಮತ್ತು ಸಿಬ್ಬಂದಿಯ ಆಸೆ ಈಡೇರಿಸಿದ್ದಾರೆ.
ಜಿಲ್ಲೆಯ ವಿಜ್ಞಾನ ಕೇಂದ್ರದ ಮುಂಭಾಗದ ಎಡಭಾಗದ ಒಂದು ಬಯಲಿನಲ್ಲಿ ವಿಜ್ಞಾನ ಪಾರ್ಕ್‌ಗೆ ಸ್ಥಳ ಗುರುತಿಸಲಾಗಿದೆ. ಅಲ್ಲಿ ಸಂವಾದತ್ಮಕ ವಿಜ್ಞಾನ ಪರಿಕರ , ಕೃತಕ ನೀರಿನ ಕೊಳ, ಮಿನಿ ಬರ್ಡ ಎವಿಯರ್, ಸರೀಸೃಪಗಳ ವಾಸದ ಆನಿಮೆಲಿರಿಯಮ್, ಪ್ರಾಣಿ , ಪಕ್ಷಿಗಳ ಚಿಕಿತ್ಸಾ ಕೊಠಡಿ ಮಾದರಿ , ಪೂರ್ವ ಪ್ರಾಣಿಗಳ ಐತಿಹಾಸಿಕ ಸ್ಕೆಲ್ಡ್ ಮಾದರಿ , ಔಷಧಿ ಗಿಡಮೂಲಿಕೆಗಳ ಸಂಗ್ರಹದ ಪ್ರತ್ಯೇಕ ಉದ್ಯಾನ ಪರಿಸರ ನೈಸರ್ಗಿಕ ಭೂ ವಿನ್ಯಾಸ ಮಾದರಿ ವಿವಿಧ ವಿಭಾಗಗಳಿಗೆ ತೆರಳುವ ಮಾರ್ಗಗಳ ನಿರ್ಮಾಣ ಹೀಗೆ ಹತ್ತಾರು ನೈಸರ್ಗಿಕ ವೈಜ್ಞಾನಿಕ ಸಾಮಾಗ್ರಿಗಳ ಮಾಡೆಲ್‌ಗಳ ಜೊತೆ ಸುಮಾರು 10ಕ್ಕೂ ಅಧಿಕ ವಿಭಾಗದ ಉದ್ಯಾನ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಸಚಿವರ ಭೇಟಿ ನಂತರ ತಾಂತ್ರಿಕ ತಂಡವೊಂದು ವಿಜ್ಞಾನ ಪಾರ್ಕ್ ಸ್ಥಳ ಪರಿಶೀಲನೆ ಮಾಡಿ ತೆರಳಿದ್ದು, ಪ್ರಸ್ತಾವನೆಗೆ ಪೂರಕವಾದ ಮಾಹಿತಿ ಇಲಾಖೆ ಹಿರಿಯ ಅಧಿಕಾರಿಗಳು ಪಡೆದಿದ್ದಾರೆ. ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದಲ್ಲಿ ಕಾಮಗಾರಿಗೆ ಟೆಂಡರ್ ಕರೆಯುವ ಸಾಧ್ಯತೆ ಇದ್ದು ಈ ಬಗ್ಗೆ ಜಿಲ್ಲೆಗೆ ಆಗಮಿಸಲಿರುವ ಸಚಿವ ಎನ್.ಎಸ್.ಬೋಸರಾಜ್ ಅವರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಒಂದೊಮ್ಮೆ ವಿಜ್ಞಾನ ಕೇಂದ್ರದ ಆವರಣದಲ್ಲಿ ಈ ಸೈನ್ಸ್ ಪಾರ್ಕ್ ತಲೆ ಎತ್ತಿದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಜೊತೆಗೆ ನಗರ ಪ್ರದೇಶದ ಚಿಕ್ಕ ಮಕ್ಕಳಿಗೂ ವೈಜ್ಞಾನಿಕ ಅಂಶಗಳ ಮನವರಿಕೆ ಮಾಡಿ ಕೊಡಲು ಪಾರ್ಕ್ ಪುಷ್ಠಿ ನೀಡಿದಂತಾಗಲಿದೆ. ಜಿಲ್ಲೆಯಲ್ಲಿ ವಿಜ್ಞಾನ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಸರಕಾರ ಮಂಜೂರಾತಿ ನೀಡಿದೆ. ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಸೈನ್ಸ್ ಪಾರ್ಕ್‌ನಿಂದ ವೈಜ್ಞಾನಿಕ ಮಾಹಿತಿ ಅರಿತುಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಹೇಳಿದರು.












Click it and Unblock the Notifications