ಸಾಹಿತ್ಯ ಜಾತ್ರೆ ಹೆಸರಿನಲ್ಲಿ ಅಂಗಡಿಗಳ ತೆರವು: ಕಣ್ಣೀರಿಟ್ಟ ಬೀದಿಬದಿ ವ್ಯಾಪರಸ್ಥರು
ರಾಯಚೂರು ಡಿಸೆಂಬರ್ 9: ಜಿಲ್ಲೆಯ ಲಿಂಗಸುಗೂರು ತಾಲೂಕು ಕೇಂದ್ರದ ಬಸ್ ನಿಲ್ದಾಣದಿಂದ ಅಂಚೆಕಚೇರಿ ಮುಖ್ಯ ರಸ್ತೆಯವರೆಗೆ ಬೀದಿಬದಿ ವ್ಯಾಪಾರಸ್ಥರು ಹಾಕಿಕೊಂಡಿರುವ ಶೆಡ್, ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಪುರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಪೆಟ್ಟಿ ಅಂಗಡಿಗಳು ಹಾಗೂ ಶೆಡ್ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ವ್ಯಾಪಾರಸ್ಥರು ಕಣ್ಣೀರು ಹಾಕಿದ್ದಾರೆ.
ಹಿರಿಯ ಅಧಿಕಾರಿಗಳು, ಪ್ರತಿನಿಧಿಗಳ ಸೂಚನೆ ಮೇರೆಗೆ ಅಂಡಿಗಳನ್ನು ತೆರವುಗೊಳಿಸಲಾಗುತ್ತಿದೆ ಎನ್ನುವ ಅಧಿಕಾರಿಗಳ ಮಾತಿಗೆ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದಿಬದಿ ವ್ಯಾಪಾರಸ್ಥರಿಗೆ ಸ್ಪಂದಿಸದ ಸಚಿವರು
ಜಿಲ್ಲೆಯಲ್ಲಿ ದಶಕದಿಂದ ಮುಖ್ಯ ರಸ್ತೆ ಅಗಲೀಕರಣ, ಅಭಿವೃದ್ಧಿ ಹೆಸರಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಎರಡರಿಂದ ಮೂರು ಬಾರಿ ಒಕ್ಕಲೆಬ್ಬಿಸುತ್ತ ಬರಲಾಗುತ್ತಿದೆ. ಆದರೆ ಪ್ರತಿಷ್ಠಿತರು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು ಕ್ಯಾರೆ ಎನ್ನದ ಆಡಳಿತ ಬೀದಿ ವ್ಯಾಪಾರಸ್ಥರನ್ನು ಮಾತ್ರ ಗಂಟು ಮೂಟೆ ಸಮೇತ ಹೊತ್ತೊಯ್ಯುವ ಸಂಪ್ರದಾಯಕ್ಕೆ ಕೊನೆ ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿದೆ.
ಮುಖ್ಯ ರಸ್ತೆ ಅಗಲೀಕರಣ ರಸ್ತೆ ಮಧ್ಯದಿಂದ 50 ಅಡಿ ಅಥವಾ 40 ಅಡಿ ಗೊಂದಲದಲ್ಲಿದೆ. ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಸಮಾವೇಶ ಹೆಸರಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಸಚಿವರು ಸಾಕಷ್ಟು ಬಾರಿ ಇದೇ ರಸ್ತೆಯಲ್ಲಿ ಬಂದು ಹೋಗಿದ್ದರು ನಮ್ಮ ಸಮಸ್ಯೆ ಸ್ಪಂದಿಸುತ್ತಿಲ್ಲ ಎಂದು ವ್ಯಾಪರಸ್ಥರು ಅಳಲು ತೋಡಿಕೊಂಡಿದ್ದಾರೆ.

ಹೆಚ್ಚಿನ ವ್ಯಾಪಾರ ನಿರೀಕ್ಷೆಯಲ್ಲಿದ್ದ ವ್ಯಾಪರಸ್ಥರಿಗೆ ನೋವು
ಜಿಲ್ಲಾ ಮಟ್ಟದ ಸಾಹಿತ್ಯ ಪರಿಷತ್ತು ಸಮಾವೇಶವನ್ನು ಹಬ್ಬದ ಮಾದರಿಯಲ್ಲಿ ಆಚರಿಸಲು ನಾವುಗಳೆಲ್ಲಾ ಬೆಂಬಲಿಸಿದ್ದೇವೆ. ಜಾತ್ರೆಗೆ ಬರುವ ಜನರಿಂದ ಹೆಚ್ಚಿನ ವ್ಯಾಪಾರ ನಿರೀಕ್ಷೆಯಲ್ಲಿದ್ದ ನಮಗೆ, ಸಾಹಿತ್ಯ ಜಾತ್ರೆ ಕಂಟಕವಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಕುಣಿದು ಕುಪ್ಪಳಿಸಬೇಕಾದ ಜಾತ್ರೆಯಲ್ಲಿ ಕಣ್ಣೀರಿಡುವ ಸ್ಥಿತಿ ಬಂದಿದೆ ಎಂದು ವ್ಯಾಪರಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೀದಿಬದಿ ವ್ಯಾಪರಸ್ಥರ ಮೇಲೆ ಸಾಹಿತ್ಯ ಜಾತ್ರೆಯ ಕರಿನೆರಳು
ಸ್ಥಳೀಯ ಪುರಸಭೆ ಆಡಳಿತ ವ್ಯವಸ್ಥೆ ಬೀದಿ ಬದಿ ವ್ಯಾಪಾರ ಮಾಡಿಕೊಳ್ಳಲು ನೋಂದಣಿ ಮಾಡಿಕೊಂಡು ಕಾರ್ಡ್ ಕೂಡ ನೀಡಿದೆ. ಆದರೆ, ರಸ್ತೆ ಅಗಲೀಕರಣ, ಸಮಾವೇಶಗಳ ಹೆಸರಲ್ಲಿ ಮೇಲಿಂದ ಮೇಲೆ ಒಕ್ಕಲೆಬ್ಬಿಸುತ್ತಿರುವುದು ಸಂಕಷ್ಟಕ್ಕೆ ಸಿಲುಕಿಸಿದೆ. ಸಾಹಿತ್ಯ ಜಾತ್ರೆ ಕರಿನೆರಳಿಗೆ ವ್ಯಾಪಾರಸ್ಥರು ಬಸವಳಿದಿದ್ದಾರೆ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹಿಬೂಬ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ ಸಮಾವೇಶ ನಿಮಿತ್ತ ಬೀದಿಬದಿ ಅಂಗಡಿ ತೆರವು
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಮಾತನಾಡಿ, 'ಸಂಘ ಸಂಸ್ಥೆಗಳ ದೂರು ಪ್ರತಿನಿಧಿಗಳ ಸೂಚನೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಆಧರಿಸಿ ಬೀದಿ ಬದಿ ಅಂಗಡಿ ಮುಗ್ಗಟ್ಟು ತೆರವುಗೊಳಿಸುತ್ತಿದ್ದೇವೆ. ಈ ಹಿಂದೆ ಏನಾಗಿದೆಯೊ ನಮಗೆ ಮಾಹಿತಿ ಇಲ್ಲ. ರಸ್ತೆ ಅಗಲೀಕರಣ, ಸಾಹಿತ್ಯ ಸಮಾವೇಶ ನಿಮಿತ್ತ ತೆರವು ಕಾರ್ಯ ನಡೆಸಿದ್ದೇವೆ' ಎಂದು ಹೇಳಿದರು.












Click it and Unblock the Notifications