Mantralaya: ಮಂತ್ರಾಲಯದಲ್ಲಿ ವಸತಿ ಗೃಹ ಬಂದ್- ಭಕ್ತರಿಗೆ ನೀರಿನ ಸಮಸ್ಯೆ!
ರಾಯಚೂರು ಜುಲೈ 27: ಕರ್ನಾಟಕ ಸರಕಾರ, ಮಂತ್ರಾಲಯದಲ್ಲಿ ನಿರ್ಮಿಸಿರುವ ಛತ್ರಕ್ಕೆ (ವಸತಿ ಗೃಹ) ಕುಡಿವ ನೀರು ಸೇರಿ ಇತರ ಮೂಲ ಸೌಲಭ್ಯಗಳನ್ನು ಕಲ್ಪಿಸಲು ನಿರ್ಲಕ್ಷ್ಯವಹಿಸಿದ ಹಿನ್ನೆಲೆ ಕಳೆದ ಮೂರು ತಿಂಗಳಿಂದ ಛತ್ರದ ಬಾಗಿಲು ಮುಚ್ಚಿದೆ.
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕರ್ನಾಟಕದ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಈ ಭಕ್ತರ ಹಿತ ಕಾಪಾಡಲು ರಾಜ್ಯ ಸರಕಾರವು ಹಲವು ವರ್ಷಗಳ ಹಿಂದೆಯೇ ಅಲ್ಲೊಂದು ಸುಸಜ್ಜಿತ ಛತ್ರ ನಿರ್ಮಿಸಿದೆ. ಛತ್ರದ ಹಳೆಯ ಕಟ್ಟಡದಲ್ಲಿ 40 ಹಾಗೂ ಹೊಸ ಕಟ್ಟಡದಲ್ಲಿ 50 ಸುಸ್ಥಿತಿಯಲ್ಲಿರುವ ಕೊಠಡಿಗಳಿವೆ.

ಭಕ್ತರ ಬೇಡಿಕೆಗೆ ತಕ್ಕಂತೆ ಎಸಿ, ಸಾಮಾನ್ಯ ಮಾದರಿಯ ಕೊಠಡಿಗಳಿವೆ. ಆದರೆ ಛತ್ರಕ್ಕೆ ಕಳೆದ ಬೇಸಿಗೆ ವೇಳೆ ಎದುರಾದ ನೀರಿನ ಸಮಸ್ಯೆ ಈಗಲೂ ಮುಂದುವರಿದಿದೆ. ಮಂತ್ರಾಲಯಕ್ಕೆ ತೆರಳುವ ರಾಜ್ಯದ ಭಕ್ತರು, ಸದ್ಯ ಶ್ರೀಮಠದ ಒಡೆತನದಲ್ಲಿರುವ ವಸತಿ ಗೃಹಗಳು ಹಾಗೂ ಖಾಸಗಿ ಲಾಡ್ಜ್‌ಗಳನ್ನೇ ವಸತಿಗಾಗಿ ನೆಚ್ಚಬೇಕಿದೆ.
ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ ಆ. 18ರಿಂದ ಪ್ರಾರಂಭವಾಗಲಿದೆ. ಈ ವೇಳೆ ರಾಜ್ಯದಿಂದ ಸಾವಿರಾರು ಜನರು ಆರಾಧನೆಯಲ್ಲಿ ಭಾಗವಹಿಸಲಿದ್ದಾರೆ. ಛತ್ರ ಬಂದ್ ಆಗಿರುವುದರಿಂದ ಮುಂಗಡ ಕಾಯ್ದಿಸುವಿಕೆಗೆ ಅಡ್ಡಿಯಾಗಿದೆ. ಇಲ್ಲಿನ ಛತ್ರಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯ ಸರಕಾರದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಶೀಘ್ರವೇ ಹೊಸ ಬೋರ್‌ವೆಲ್ ಕೊರೆಯಿಸಿ ಛತ್ರದ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಛತ್ರದ ವ್ಯವಸ್ಥಾಪಕಿ ತ್ರಿವೇಣಿ ತಿಳಿಸಿದ್ದಾರೆ.
ಮಂತ್ರಾಲಯ ಬಗ್ಗೆ-
ಮಂತ್ರಾಲಯವು ಆಂಧ್ರಪ್ರದೇಶದಲ್ಲಿ ಕರ್ನೂಲು ಜಿಲ್ಲೆಯ ಮಂತ್ರಾಲಯ ತಾಲ್ಲೂಕಿನ ಒಂದು ಊರು. ಶ್ರೀ ರಾಘವೇಂದ್ರ ಸ್ವಾಮಿ ಅವರು ನೆಲೆಸಿದ್ದರಿಂದ ಪ್ರಖ್ಯಾತಿಗೊಂಡ ಸ್ಥಳ. ತುಂಗಭದ್ರಾ ನದಿಯ ದಂಡೆಯಲ್ಲಿದೆ.

ಇಲ್ಲಿ ರಾಘವೇಂದ್ರಸ್ವಾಮಿಗಳ ಮಠ ಹಾಗೂ ಬೃಂದಾವನವಿದೆ. ರಾಘವೇಂದ್ರ ಗುರುಸಾರ್ವಭೌಮರು ಮಧ್ವಮತ ಸಂಪ್ರದಾಯವನ್ನು ಅವಲಂಬಿಸಿ ಸಶರೀರರಾಗಿ ಇಲ್ಲಿ ಬೃಂದಾವನಸ್ಥರಾದರು (ಕ್ರಿ.ಶ. 1671 ಶ್ರಾವಣ ಬಹುಳ ಬಿದಿಗೆ ಗುರುವಾರ) ಎನ್ನಲಾಗಿದೆ. ಇವರನ್ನು ಗುರುಸಾರ್ವಭೌಮರು, ರಾಯರು, ಮಂತ್ರಾಲಯ ಪ್ರಭುಗಳು ಎಂದೂ ಕರೆಯುತ್ತಾರೆ.
ಮೊದಲು ಇದಕ್ಕೆ ಮಂಚಾಲೆ ಎಂಬ ಹೆಸರಿತ್ತು. ಈ ಊರಿನ ಅಧಿದೇವತೆ ಆಗಿದ್ದವಳು ಮಂಚಾಲಮ್ಮ. ಅದಕ್ಕೆ ಇದಕ್ಕೆ ಮೊದಲು ಮಂಚಾಲೆ, ಮಂಚಾಲಯ ಎಂದು ಗ್ರಾಮಸ್ಥರು ಕರೆಯುತ್ತಿದ್ರು. ನಂತರ ಗುರು ರಾಘವೇಂದ್ರ ಅವರಿಂದ ಬಂದಂತಹ ಪವಿತ್ರವಾದ ಮಂತ್ರಗಳಿಂದಾಗಿ ಈ ಸ್ಥಳವನ್ನು ಮಂತ್ರಾಲಯ ಎಂಬ ಹೆಸರಿನಿಂದ ಕರೆಯೋಕೆ ಪ್ರಾರಂಭ ಮಾಡಿದ್ರು.
ರಾಘವೇಂದ್ರಸ್ವಾಮಿಗಳ ಬೃಂದಾವನದ ಎದುರಿಗೆ ವಾಯುದೇವರ ವಿಗ್ರಹವಿದೆ. ಮಠದ ಹೊರಗಡೆ ಎಡಭಾಗದಲ್ಲಿ ಮಂಚಾಲಾಂಬಿಕೆಯ ದೇವಸ್ಥಾನವಿದೆ. ಈ ಗ್ರಾಮ ರಾಯರ ನೆಲಸುವಿಕೆಯಿಂದ ಪುಣ್ಯಕ್ಷೇತ್ರ ಎನಿಸಿದೆ. ರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ ವೇಳೆ ದೇಶದೆಲ್ಲೆಡೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುತ್ತಾರೆ.












Click it and Unblock the Notifications