Raichur: ಹೋಳಿ ಬಣ್ಣ ತೊಳೆಯಲು ಹೋದ ಯುವಕನಿಗಾಗಿ ಕಾದು ಕುಳಿತಿದ್ದ ಯಮ
ರಾಯಚೂರು ಮಾರ್ಚ್ 15: ರಾಜ್ಯದೆಲ್ಲೆಡೆ ಕಳೆದ ದಿನ ಹೋಳಿ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗಿದೆ. ಈ ದಿನ ರಾಯಚೂರಿನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಹೋಳಿ ಹಬ್ಬವನ್ನು ಆಚರಿಸಿ ಮೈಮೇಲಿದ್ದ ಬಣ್ಣವನ್ನು ತೊಳೆಯಲು ಹೋದ ಯುವಕನನ್ನು ಜವರಾಯ ಮತ್ತೆ ಮನೆಗೆ ವಾಪಾಸ್ ಕಳುಹಿಸಲಿಲ್ಲ. ಬಣ್ಣ ತೊಳೆಯಲು ಕಾಲುವೆಗೆ ಇಳಿದ ಯುವಕ ನೀರಿನ ರಬಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ.
ಹೌದು... ರಾಯಚೂರು ತಾಲೂಕಿನ ಗಿಲ್ಲೆಸುಗೂರು ಕ್ಯಾಂಪ್ ಬಳಿ ಈ ಘಟನೆ ನಡೆದಿದೆ. 30 ವರ್ಷದ ಯರಗೇರ ಗ್ರಾಮದ ಮಹಾದೇವ್ ಮೃತ ದುರ್ದೈವಿ. ಇವರು ಕಿರಾಣಿ ಅಂಗಡಿ ವ್ಯಾಪಾರಿ ಆಗಿದ್ದರು. ಶುಕ್ರವಾರ ಸ್ನೇಹಿತರೊಂದಿಗೆ ಖುಷಿ ಖುಷಿಯಾಗಿ ಹೋಳಿ ಆಡಿದ್ದರು. ಬೇಡ ಅಂದವರಿಗೆಲ್ಲಾ ಬಣ್ಣ ಹಚ್ಚುತ್ತಾ ತಮಗೂ ಬಣ್ಣ ಹಾಕಿಸಿಕೊಳ್ಳುತ್ತಾ ಸಂತೋಷದಿಂದ ದಿನ ಕಳೆದಿದ್ದರು. ಆದರೆ ಇದೇ ಅವರಿಗೆ ಕೊನೆಯ ಹೋಳಿ ಹಬ್ಬ ಆಗುತ್ತೆ ಅಂತ ಯಾರೂ ಕೂಡ ಊಹೆ ಮಾಡಿರಲಿಲ್ಲ.

ಸ್ನೇಹಿತರೊಂದಿಗೆ ಬಣ್ಣ ಆಡಿದ ಬಳಿಕ ಮಹದೇವ್ ಗಿಲ್ಲೆಸುಗೂರು ಕ್ಯಾಂಪ್ ಬಳಿ ಇರುವ ಕಾಲುವೆಯಲ್ಲಿ ಸ್ನಾನ ಮಾಡಲು ಇಳಿದಿದ್ದರು. ಆದರೆ ಅದೇ ನೀರಿನಲ್ಲಿ ಕಾದು ಕುಳಿತಿದ್ದ ಯಮರಾಜ ಬಾಳಿ ಬದುಕಬೇಕಿದ್ದ ಮಹದೇವನನ್ನ ಹೊರಬರಲು ಬಿಡಲೇ ಇಲ್ಲ. ದುರಾದೃಷ್ಟ ಅಂದರೆ ಇದೇ ಇರಬೇಕು ನೋಡಿ.. ಮಹಾದೇವ ನೀರಿಗೆ ಇಳಿದಾಗಲೇ ಕಾಲುವೆಗೆ ನೀರು ಬಿಡಲಾಗಿದೆ. ನೀರಿನ ರಬಸಕ್ಕೆ ಮಹದೇವ ಕೊಚ್ಚಿ ಹೋಗಿದ್ದಾರೆ.
ಸಂಜೆಯಾದರೂ ಮಗ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆದರೆ ಮಹದೇವ ಎಲ್ಲೂ ಕೂಡ ಪತ್ತೆಯಾಗಿಲ್ಲ. ಕೊನೆಗೆ ಪೊಲೀಸ್ ಠಾಣೆಯಲ್ಲಿ ಪೋಷಕರು ಮಗನನ್ನು ಹುಡುಕಿ ಕೊಡಲು ಮನವಿ ಮಾಡಿದ್ದಾರೆ. ಮಹದೇವ ಪತ್ತೆ ಕಾರ್ಯ ಶುರು ಮಾಡಿದ ಪೊಲೀಸರಿಗೆ ನೆರೆಯ ತೆಲಂಗಾಣ ರಾಜ್ಯದ ಗ್ರಾಮವೊಂದರಲ್ಲಿ ಶವ ಪತ್ತೆಯಾಗಿದೆ.
ಶವವನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದ್ದು, ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೀವನಕ್ಕೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications