Raichur: ಗ್ರಾಮೀಣ ಭಾಗದ ರೈತರಿಗೆ ನೆರವಾದ ನರೇಗಾ
ರಾಯಚೂರು ಫೆಬ್ರವರಿ 9: ಗ್ರಾಮೀಣ ಭಾಗದ ರೈತರ ಕೃಷಿ ಕೆಲಸಕ್ಕೆ ಮಾತ್ರವಲ್ಲದೆ ಕೃಷಿ ಪೂರಕ ಚಟುವಟಿಕೆ, ಜಾನುವಾರು ಸಾಕಣೆ, ದನದ ಶೆಡ್ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಆಸರೆಯಾಗಿದೆ.
4 ಎಕರೆ ಜಮೀನು ಹೊಂದಿದ ಬಿ.ಹನುಮಾಪೂರು ಗ್ರಾಮದ ರೈತ ಬಸಪ್ಪ ಅವರು ಎರಡು ಆಕಳು, ಎರಡು ಎತ್ತುಗಳನ್ನು ಸಾಕಿದ್ದಾರೆ. ಅವುಗಳನ್ನು ಮನೆ ಮುಂದಿನ ಖಾಲಿ ಜಾಗದಲ್ಲಿ ಕಟ್ಟುತ್ತಿದ್ದರು. ತನ್ನ ಜಾನುವಾರುಗಳಿಗೆ ಸೂರು ಒದಗಿಸಬೇಕು ಎಂದುಕೊಂಡಿದ್ದರೂ ಆರ್ಥಿಕ ಪರಿಸ್ಥಿತಿಯಿಂದ ಸಾಧ್ಯವಾಗಿರಲಿಲ್ಲ.

ಜಾನುವಾರುಗಳ ರಕ್ಷಣೆಗಾಗಿ ನರೇಗಾ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ಈ ಮೊದಲು ₹19,500 ಸಹಾಯಧನ ಸಿಗುತ್ತಿತ್ತು. ಈಗ ಪರಿಷ್ಕೃತ ಆದೇಶದಂತೆ ಎಲ್ಲ ವರ್ಗದವರಿಗೆ ₹57 ಸಾವಿರ ಸಹಾಯಧನ ನೀಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ರಾಯಚೂರು ತಾಲ್ಲೂಕಿನ ಹೀರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಹನುಮಾಪೂರು ಗ್ರಾಮದ ಬಸಪ್ಪ ಮತ್ತು ಗೋವಿಂದ ಅವರು ದನದ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ.
10 ಅಡಿ ಅಗಲ, 18 ಅಡಿ ಉದ್ದ, 5 ಅಡಿ ಎತ್ತರದ ಗೋಡೆ ಸೇರಿದಂತೆ ಜಾನುವಾರುಗಳಿಗೆ ಮೇವು ತಿನ್ನಲು ಗೋದಲಿ, ಕಾಂಕ್ರೀಟ್ ಬೆಡ್, ತಗಡಿನ ಶೀಟ್ ಹಾಕಿ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡಿದ್ದಾರೆ.

'ಉದ್ಯೋಗ ಖಾತರಿ ಯೋಜನೆಯಡಿ ದನಗಳಿಗೆ ಕೊಟ್ಟಿಗೆ ನಿರ್ಮಿಸಿಕೊಂಡಿದ್ದೇವೆ. ಈಗಾಗಲೇ ಕೂಲಿ ಮೊತ್ತ ತಲಾ ₹7 ಸಾವಿರ ಬಂದಿದೆ. ಸಾಮಾಗ್ರಿ ಮೊತ್ತ ತಲಾ ₹50 ಸಾವಿರ ಬರಬೇಕು' ಎಂದು ರೈತರಾದ ಬಸಪ್ಪ ಮತ್ತು ಗೋವಿಂದ ಹೇಳಿದರು. 'ವೈಯಕ್ತಿಕ ಕಾಮಗಾರಿಗಳ ಅನುದಾನದಡಿ ಉತ್ತಮವಾದ ಜಾನುವಾರು ಕೊಟ್ಟಿಗೆ ನಿರ್ಮಾಣದಿಂದ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ' ಎಂದು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಪವಾರ್ ಹೇಳಿದರು.
ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆ ಎಂಬ ಹೆಗ್ಗಳಿಕೆಗೆ ಭಾರತ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಪಾತ್ರವಾಗಿದೆ. ದೇಶದ ಎಲ್ಲ ರಾಜ್ಯಗಳ ಎಲ್ಲ ವಯಸ್ಕ ಜನರಿಗೆ ಉದ್ಯೋಗ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.
ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ದಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಈ ಯೋಜನೆಯನ್ನು 2005ರ ಸೆಪ್ಟೆಂಬರ್ 5ರಂದು ಜಾರಿಗೆ ತರಲಾಯಿತು. ಆರಂಭದಲ್ಲಿ ಈ ಯೋಜನೆಗೆ 'ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' (NREGA) ಎಂದು ಹೆಸರಿಸಲಾಯಿತು. ಆದರೆ 2009ರ ಅಕ್ಟೋಬರ್ 2ರಂದು ಈ ಯೋಜನೆಯ ಹೆಸರನ್ನು 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA)' ಎಂದು ಬದಲಾಯಿಸಲಾಯಿತು. ಇದು ಬೇರೆಲ್ಲ ಯೋಜನೆಗಳಿಗಿಂತ ಭಿನ್ನವಾಗಿದ್ದು, ಉದ್ಯೋಗ ಖಾತರಿ ಒದಗಿಸುವುದರಿಂದ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.












Click it and Unblock the Notifications