ರಾಯಚೂರು ನಗರಸಭೆ ನಿರ್ಲಕ್ಷ್ಯ: 7 ತಿಂಗಳಿನಿಂದ ಸಂಬಳವಿಲ್ಲದೆ ಪೌರಕಾರ್ಮಿಕರ ಪರದಾಟ
ರಾಯಚೂರು, ಡಿಸೆಂಬರ್, 10: ನಗರದ ಬಡಾವಣೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ತ್ಯಾಜ್ಯವನ್ನು ತೆಗೆದುಕೊಂಡು ಹೋಗುವ ನಗರಸಭೆ ವಾಹನ ಚಾಲಕರಿಗೆ ಸುಮಾರು ಏಳು ತಿಂಗಳಿನಿಂದ ವೇತನ ನೀಡಿಲ್ಲ. ಇದರ ಪರಿಣಾಮ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೋವಿಡ್ ನಂತರದಲ್ಲಿ ರಾಯಚೂರು ನಗರಸಭೆಯು ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಲೇ ಇದೆ. ಇದೀಗ ಸುಮಾರು ಏಳು ತಿಂಗಳಿನಿಂದ ವೇತನ ಸಿಗದೇ ನಗರಸಭೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದಲ್ಲಿ ಸಂಗ್ರಹವಾಗುವ ಒಣ ಹಾಗೂ ಹಸಿ ಕಸವನ್ನು ವಿಂಗಡಿಸಿ ಹೊರವಲಯದ ಪ್ರದೇಶಗಳಿಗೆ ಸಾಗಿಸುತ್ತಿರುವ ವಾಹನ ಚಾಲಕರಿಗೆ ಸಂಬಳ ಬಾರದ ಪರಿಣಾಮ ಕುಟುಂಬ ನಿರ್ವಹಣೆಗೆ ತುಂಬಾ ತೊಂದರೆ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಲಲಿತಾ ಕಡಗೋಲ್ ಆಂಜನೇಯ ಅವರು ನಗರಸಭೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಬಡಾವಣೆಗಳ ಸ್ವಚ್ಛತೆಗಾಗಿ ನಗರಸಭೆ ರಾಯಚೂರು ಕಚೇರಿಯಿಂದ ಹೊಸ ವಾಹನಗಳನ್ನು ಖರೀದಿಸಿದ್ದಾರೆ. 5 ಟ್ರ್ಯಾಕ್ಟರ್, 36 ಆಟೋ ಟಿಪ್ಪರ್, 16 ಬ್ಯಾಟರಿ ಚಾಲಿತ ವಾಹನ ಹಾಗೂ ಒಂದು ಹಿಟಾಚಿ ಖರೀದಿಸಲಾಗಿದೆ. ಈ ವಾಹನಗಳನ್ನು ಚಲಾಯಿಸಲು 47 ಚಾಲಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ ನೇಮಿಸಿಕೊಂಡಿರುವ ಚಾಲಕರಿಗೆ ನೇಮಕದ ಆದೇಶ ನೀಡಿಲ್ಲ. ಅಲ್ಲದೇ ನೇಮಕ ಮಾಡಿಕೊಂಡು ಏಳು ತಿಂಗಳು ಕಳೆದರೂ ಸಂಬಳ ನೀಡಿಲ್ಲ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಸಂಬಳವಿಲ್ಲದೆ ವಾಹನ ಚಾಲಕರ ಪರದಾಟ
ಸಂಬಳ ಸಿಗದೇ ವಾಹನ ಚಾಲಕರು ಪ್ರತಿನಿತ್ಯ ಕುಟುಂಬದ ನಿರ್ವಹಣೆಗೆ ಪರದಾಡುವಂತಾಗಿದೆ. 35 ವಾರ್ಡ್‌ಗಳಿಂದ ನಗರಸಭೆ ವಾಹನ ಚಾಲಕರು, ಕಸವನ್ನು ತೆಗೆದುಕೊಂಡು ನಿತ್ಯ ನಗರದ ಹೊರವಲಯದ ತ್ಯಾಜ್ಯ ವಿಂಗಡನೆ ಘಟಕಗಳಿಗೆ ಸಾಗಿಸುತ್ತಾರೆ. ಆದರೆ ವೇತನ ನೀಡದಿರುವುದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ. ಚಾಲಕರ ನೇಮಕಾತಿ ಟೆಂಡರ್ ಪ್ರಾರಂಭವಾಗಲಿದ್ದು, ಇನ್ಮುಂದೆ ಸಂಬಳ ನೀಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ 7 ತಿಂಗಳ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಮಗೆ 7 ತಿಂಗಳ ವೇತನವನ್ನು ಕೊಡದಿದ್ದರೆ ತ್ಯಾಜ್ಯವನ್ನು ಸಾಗಿಸದೆ ಧರಣಿ ಮಾಡಲಾಗುತ್ತದೆ ಎಂದು ಚಾಲಕರು ಎಚ್ಚರಿಕೆ ನೀಡಿದ್ದಾರೆ. ಇದರಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಸಮಸ್ಯೆ ಎದುರಾಗಬಹುದು ಎಂಬುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ.
ನಗರಸಭೆ ವಿರುದ್ಧ ವಾಹನ ಚಾಲಕರ ಆಕ್ರೋಶ
ನಗರಸಭೆಯಿಂದ ಖರೀದಿಸಿದ ನೂತನ ವಾಹನಗಳಿಗೆ ಚಾಲಕರ ನೇಮಕಾತಿಯಲ್ಲಿ ಪರಿಸರ ಅಭಿಯಂತರರ ಯಡವಟ್ಟು ಎದ್ದು ಕಾಣುತ್ತಿದೆ. ಚಾಲಕರ ಸಮಸ್ಯೆಯನ್ನು ಮನಗಂಡು ನಗರಸಭೆಯ ಪರಿಸರ ಅಭಿಯಂತರರಾದ ಮಲ್ಲಿಕಾರ್ಜುನ ಅವರು ಮೇ 19ರಂದು ಚಾಲಕರನ್ನು ನೇಮಿಸಿಕೊಂಡಿದ್ದಾರೆ. ಆದರೆ ಯಾವುದೇ ದಾಖಲಾತಿ ಇಲ್ಲದೇ 47 ವಾಹನ ಚಾಲಕರನ್ನು ನೇಮಕ ಮಾಡಿಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ. ನೇಮಿಸಿಕೊಂಡ ಚಾಲಕರಿಗೆ ಇದುವರೆಗೂ ಸಂಬಳ ನೀಡಿಲ್ಲ. ಇದೀಗ ವಾಹನ ಚಾಲಕರು ಸಂಬಳಕ್ಕಾಗಿ ಅಲೆದಾಡಿಸುತ್ತಿದ್ದು, ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆದೇಶ ನೀಡದೆ 47 ಚಾಲಕರ ನೇಮಕ
ಕಳೆದ ಏಳು ತಿಂಗಳ ಹಿಂದೆ ನಗರಸಭೆಯಲ್ಲಿ ನೂತನ ವಾಹನಗಳನ್ನು ಖರೀದಿಸಲಾಗಿದೆ. ನಮಗೆ ಆದೇಶ ನೀಡದೆ 47 ಚಾಲಕರನ್ನು ಪರಿಸರ ಅಭಿಯಂತರರು ನೇಮಕ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿವರೆಗೂ ಆದೇಶ ಹಾಗೂ ಸಂಬಳ ನೀಡದೆ ಅಲೆದಾಡಿಸುತ್ತಿದ್ದಾರೆ. ಹೀಗಾಗಿ ನಾವು ಮುಂದಿನ ವಾರದಿಂದ ಕಸ ವಿಲೇವಾರಿ ಮಾಡುವುದಿಲ್ಲ ಎಂದು ವಾಹನ ಚಾಲಕ ನಾಗರಾಜ್ ಕುಮಾರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಗರಸಭೆ ಪೌರಾಯುಕ್ತ ಹೇಳಿದ್ದೇನು?
ಬಳಿಕ ನಗರಸಭೆ ವಾಹನಗಳ ಚಾಲಕರಿಗೆ 3 ತಿಂಗಳ ವೇತನ ನೀಡಲು ಆದೇಶ ಮಾಡಿದ್ದಾರೆ. ಆದರೆ ಕಳೆದ 7 ತಿಂಗಳಿನಿಂದ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದು, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಮಾಹಿತಿಯನ್ನು ಪಡೆದುಕೊಂಡು ವೇತನ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ಭರವಸೆ ನೀಡಿದರು.












Click it and Unblock the Notifications