Shivaraj Patil: ರಾಜ್ಯದಲ್ಲಿ ಮತ್ತೆ ಫೋನ್ ಕದ್ದಾಲಿಕೆ ದೂರು: ಶಾಸಕ ಶಿವರಾಜ್ ಪಾಟೀಲ್ ಫೋನ್ ಟ್ಯಾಪ್
ರಾಯಚೂರು ಏಪ್ರಿಲ್ 6: ರಾಜ್ಯದಲ್ಲಿ ಮತ್ತೆ ಫೋನ್ ಕದ್ದಾಳಿಕೆ ಸದ್ದು ಮಾಡುತ್ತಿದೆ. ಶಾಸಕ ಶಿವರಾಜ್ ಪಾಟೀಲ್ ಫೋನ್ ಟ್ಯಾಪ್ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಯಚೂರು ಎಸ್‌ಪಿ ಮುಂದೆ ಶಾಸಕ ಶಿವರಾಜ್ ಪಾಟೀಲ್ ಅಳಲು ತೋಡಿಕೊಂಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ ಪ್ರಕರಣ ಹೊಸ ಸಂಚಲನವನ್ನು ಸೃಷ್ಟಿ ಮಾಡಿದೆ. ಈ ಸಂದರ್ಭದಲ್ಲಿ ಫೋನ್ ಟ್ರಾಪ್ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ರಾಯಚೂರು ನಗರ ಬಿಜೆಪಿ ಶಾಸಕ ಡಾ ಶಿವರಾಜ್ ಪಾಟೀಲ್ ತಮ್ಮ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಎಸ್‌ಪಿ ಮುಂದೆ ಹೇಳಿಕೊಂಡಿದ್ದಾರೆ.

'ನನ್ನ ಹಿಂದೆ ಗೂಢಾಚಾರ ನಡೆದಿದ್ದು. ತಿಂಗಳಿಗೆ 70 ಸಲ ನನ್ನ ಲೋಕೆಷನ್ ತೆಗೆಸುತ್ತಾರೆ. ಯಾಕೆ ತೆಗೆಸುತ್ತಿದ್ದಾರೆ ಗೊತ್ತಿಲ್ಲ. ಶಾಸಕರ ಚಲನವಲನಗಳ ಬಗ್ಗೆ ಗೂಢಚರ್ಯ ಮಾಡಲಾಗುತ್ತಿದೆ' ಎಂದು ರಾಯಚೂರು ಎಸ್‌ಪಿ ಎಂ.ಪುಟ್ಟಮಾದಯ್ಯ ಬಳಿ ಶಾಸಕ ಶಿವರಾಜ್ ಪಾಟೀಲ್ ದೂರಿದ್ದಾರೆ.
ಅಲ್ಲದೆ ಪೊಲೀಸ್ ಸ್ಟೇಷನ್‌ನಿಂದಲೇ ನನ್ನ ಲೊಕೇಷನ್ ಟ್ರ್ಯಾಕ್ ಮಾಡುತ್ತಾರೆ. ಯಾಕ್ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ಆಡಳಿತ ಪಕ್ಷದ ವಿರುದ್ಧ ಶಿವರಾಜ್ ಪಾಟೀಲ್ ಕಿಡಿ ಕಾರಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಪಾಟೀಲ್, 'ಸರ್ಕಾರ ಯಾರದ್ದು ಇರುತ್ತೋ ಸಹಜವಾಗಿ ಪೊಲೀಸರು ಅವರ ಮಾತು ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಎಲ್ಲರೂ ಟ್ಯಾಪ್ ಮಾಡಲು ಆಗಲ್ಲ. ಅದನ್ನು ಪೊಲೀಸರು ಮಾತ್ರ ಮಾಡಲು ಸಾಧ್ಯ. ಪೊಲೀಸ್ ಸ್ಟೇಷನ್‌ನಿಂದ ಲೊಕೆಷನ್ ಕೊಡುತ್ತಿದ್ದಾರೆ ಅಂದರೆ ಅವರ ಹಿಂದೆ ಯಾರೋ ಪ್ರಭಾವಿ ವ್ಯಕ್ತಿ ಇರಬೇಕು. ಇತ್ತೀಚಿನ ದಿನಗಳಲ್ಲಿ ಯಾರಾದರೂ ಪ್ರಭಾವಿ ವ್ಯಕ್ತಿಗಳು ಸ್ಟೇಷನ್‌ಗೆ ಕರೆ ಮಾಡಿದರೆ ಸಾಕು ಅವರಿಗೆ ಲೊಕೇಷನ್ ಮಾಹಿತಿ ನೀಡುತ್ತಾರೆ. ಈ ರೀತಿ ಅನೇಕ ಬಾರಿ ಆಗಿದೆ. ಆದರೆ ಇಂಥಹವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕ್ರಮ ಕೈಗೊಳ್ಳುವುದಿಲ್ಲ ಅನ್ನೋದಕ್ಕೆ ಇಂಥಹ ಘಟನೆಗಳು ಪದೇ ಪದೇ ನಡೆಯುತ್ತಿವೆ' ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಬಗ್ಗೆ ಮಾತನಾಡಿದ ರಾಯಚೂರು ಎಸ್‌ಪಿ, 'ಶಾಸಕ ಶಿವರಾಜ್ ಪಾಟೀಲ್ ಅವರು ತಮ್ಮ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ ಅಷ್ಟೇ. ಆದರೆ ಅವರು ನಮಗೆ ಇದರ ಬಗ್ಗೆ ದೂರು ಕೊಟ್ಟಿಲ್ಲ. ದೂರು ಕೊಟ್ಟರೆ ಖಂಡಿತ ಇದರ ಬಗ್ಗೆ ತನಿಖೆ ಮಾಡುತ್ತೇವೆ' ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ ಪರಮೆಶ್ವರ್ ಅವರು, 'ನಾನು ಈ ಬಗ್ಗೆ ಎಸ್‌ಪಿ ಅವರೊಂದಿಗೆ ಮಾತನಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಂಥಹ ಘಟನೆ ನಡೆದಿದ್ದರೆ ಯಾರು ಅದಕ್ಕೆ ಅನುಮತಿ ನೀಡಿದ್ದಾರೆ, ಎಲ್ಲಿ ಆಗಿದೆ ಎಲ್ಲವನ್ನೂ ವಿಚಾರಣೆ ಮಾಡುತ್ತೇವೆ' ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಶಾಸಕರ ಆರೋಪವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆದರೆ ದೂರನ್ನು ಲಿಖಿತ ರೂಪದಲ್ಲಿ ನೀಡಿದರೆ ತನಿಖೆಯನ್ನು ಆರಂಭಿಸುತ್ತೇವೆ ಎಂದು ರಾಯಚೂರು ಎಸ್‌ಪಿ ತಿಳಿಸಿದ್ದಾರೆ. ಮುಂದಿನ ದಿನದಲ್ಲಿ ಶಾಸಕರು ದೂರು ನೀಡುತ್ತಾರಾ ಕಾದು ನೊಡಬೇಕಿದೆ.












Click it and Unblock the Notifications