ರಾಯಚೂರು: ಕೆರೆಗಳ ಅಭಿವೃಧ್ಧಿಗೆ ಸ್ಥಳೀಯ ಆಡಳಿತದ ನಕಾರ, ಒತ್ತುವರಿಗೆ ಇಲ್ಲ ಕಡಿವಾಣ

ರಾಯಚೂರು ಆಗಸ್ಟ್‌ 03: ರಾಯಚೂರು ಜಿಲ್ಲೆಯಲ್ಲಿ ಜಲಮೂಲಗಳ ಸಂರಕ್ಷಣೆ ಮಾಡುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದ್ದು, ಕೆರೆಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಖರ್ಚಾಗುತ್ತಿಲ್ಲ. ಜಿಲ್ಲೆಯಲ್ಲಿ ಕೃಷ್ಣಾ, ತುಂಗಭದ್ರಾ ನದಿಗಳು ಹರಿಯುತ್ತಿರುವ ಕಾರಣ 'ದೋ ಅಬ್ ಪ್ರದೇಶ' ಎಂದು ಕರೆಯಲಾಗುತ್ತದೆ.

ನಗರದ ಮಾವಿನಕೆರೆ, ಗೊಲ್ಲನಕುಂಟೆಕೆರೆಗಳು ನಗರದ ಸೌಂದರ್ಯ ಹೆಚ್ಚಿಸುವ ಜತೆಗೆ ಐತಿಹಾಸಿಕವಾಗಿ ಮಹತ್ವ ಪಡೆದಿವೆ. ಆದರೆ ಮಾವಿನಕೆರೆ ಸಂರಕ್ಷಣೆ ಮಾಡಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕಿರುವ ಜಿಲ್ಲಾಡಳಿತ ಕೆರೆಯ ಒತ್ತುವರಿಗೆ ಕಡಿವಾಣ ಹಾಕಲು ವಿಫಲವಾಗಿದೆ.

Raichur District Local Administration Has Failed To Conserve Water Source

ನಗರದ ಹೃದಯಭಾಗದಲ್ಲಿರುವ ಮಾವಿನಕೆರೆ ಸುಮಾರು 10 ಎಕರೆಯಷ್ಟು ಒತ್ತುವರಿಯಾಗಿದೆ. ಆಡಳಿತ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ. ಕೆರೆಯ ಒಟ್ಟು ವಿಸ್ತೀರ್ಣ 107 ಎಕರೆಯಷ್ಟಿದೆ. ಅದರಲ್ಲಿ ಈ ಮುಂಚೆಯೇ ಐದಾರು ಎಕರೆ ಒತ್ತುವರಿ ಮಾಡಲಾಗಿತ್ತು. ಈಚೆಗೆ ಇಂದಿರಾ ನಗರದಲ್ಲೂ ಘನತ್ಯಾಜ್ಯ, ಮೊರಂ ಹಾಕುವ ಮೂಲಕ ಇನ್ನೂ ಐದಾರು ಎಕರೆ ಕೆರೆಯ ಭಾಗವನ್ನೇ ಮುಚ್ಚಲಾಗಿದೆ.

ಕೆರೆ ಸಂರಕ್ಷಣೆ, ಅಭಿವೃದ್ಧಿಗಾಗಿ ₹12 ಕೋಟಿ ಮೀಸಲಿಟ್ಟಿದ್ದರೂ ಜಿಲ್ಲಾಡಳಿತ ಕೆಲಸ ಆರಂಭಿಸಿಲ್ಲ. ಕೆರೆಗೆ ನೇರವಾಗಿ ಚರಂಡಿಗಳ ಸಂಪರ್ಕ ಕಲ್ಪಿಸಿದ್ದು, ನೀರೆಲ್ಲ ಕಲುಷಿತಗೊಂಡಿದೆ. ಇದರಿಂದ ಜಲಜರಗಳಿಗೆ ಸರಿಯಾದ ಆಮ್ಲಜನಕ ಸಿಗದೆ ಸಾವನ್ನಪ್ಪುತ್ತಿವೆ. ಕೆರೆ ದಂಡೆಯ ಮೇಲೆ ಹೋಗುವವರಿಗೆ ದುರ್ನಾತ ಬೀರುವಂತಾಗಿದೆ.

ಕೆರೆಯ ಸಂರಕ್ಷಣೆಯ ಬಗ್ಗೆ ಕೇವಲ ಭಾಷಣಗಳು ಆಗುತ್ತವೆ ಉದುರುತ್ತದೆ ಅಭಿವೃದ್ಧಿ ಶೂನ್ಯ. ಮತ್ತೊಂದೆಡೆ ಮಾವಿನ ಕೆರೆಯ ನಾಲ್ಕು ದಿಕ್ಕುಗಳಿಂದ ಪ್ರಭಾವಿ ನಾಯಕರು ನಗರಸಭೆಯ ಅಧಿಕಾರಿಗಳ ಪರೋಕ್ಷ ಬೆಂಬಲದಿಂದ ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡಗಳು, ಮನೆಗಳ ನಿರ್ಮಾಣ ಮಾಡುತ್ತಿದ್ದು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡ ಉದಾಹರಣೆಯಿಲ್ಲ ಎಂದು ಪರಿಸರವಾದಿ ಚನ್ನಬಸವ ಅವರ ಆರೋಪವಾಗಿದೆ.

Raichur District Local Administration Has Failed To Conserve Water Source

ರಾಯಚೂರು ತಾಲೂಕಿನ ಮನ್ಸಲಾಪುರ, ಮರ್ಚೆಡ್ ಕೆರೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಈ ಕೆರೆಗಳ ನೀರು ಕೃಷಿಗೆ ಬಳಕೆಯಾಗುತ್ತಿದ್ದು, ನಗರದಿಂದ ಹೊರಬರುವ ಚರಂಡಿಗಳನ್ನು ಇಲ್ಲಿಗೆ ಸಂಪರ್ಕ ನೀಡಲಾಗಿದೆ. ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳ ಕೆಮಿಕಲ್ ಮಿಶ್ರಿತ ನೀರು ಕೆರೆಗೆ ಬಿಡಲಾಗುತ್ತಿದೆ. ವೈಜ್ಞಾನಿಕವಾಗಿ ಕೆಮಿಕಲ್ ನೀರು ವಿಲೇವಾರಿ ಮಾಡದಿದ್ದರೂ ಕಾರ್ಖಾನೆ ಮಾಲೀಕರಿಗೆ ಕನಿಷ್ಟ ಕ್ರಮವೂ ಆಗಿಲ್ಲ.

ಕೆಮಿಕಲ್ ಮಿಶ್ರಿತ ನೀರು ಟ್ಯಾಂಕರ್ ಗಳ ಮೂಲಕ ಕೆರೆಗೆ ಸುರಿಸುವ ಕಾರಣ ಕೆರೆಯಲ್ಲಿನ ಜಲಚರಗಳು, ಸುತ್ತಮುತ್ತಲಿನ ದನಕರುಗಳು ಕಲುಷಿತ ನೀರು ಸೇವಿಸಿ ಸಾವಿಗೀಡಾಗಿವೆ. ಮಾಲಿನ್ಯ ನಿಯಂತ್ರಣ ಮಂಡಳಿ ಹೆಸರಿಗೆ ಮಾತ್ರ ಇರುವಂತಿದೆ ಎಂದು ಕನ್ನಡಿಗರ ರಕ್ಷಣಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಇಮ್ರಾನ್ ಬಡೆಸಾಬ್ ದೂರಿದ್ದಾರೆ.

ಬರದ ನಾಡಿಗೆ ನೀರುಣಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ಕೆರೆಗಳಿಗೆ ಈಗ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಜಿಲ್ಲೆಯಲ್ಲಿ ಶೇ 30-40 ಕೆರೆಗಳು ಒತ್ತುವರಿಗೆ ಒಳಪಟ್ಟಿದ್ದು, ಅವುಗಳ ರಕ್ಷಣೆಗೆ ತುರ್ತು ಕ್ರಮವಾಗಬೇಕಿದೆ.

ಜಿಲ್ಲೆಯಲ್ಲಿ ಸುಮಾರು 230ಕ್ಕೂ ಅಧಿಕ ಸಣ್ಣ ದೊಡ್ಡ ಪ್ರಮಾಣದ ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸುಮಾರು 67 ಕೆರೆಗಳು ಒಳಪಡುತ್ತಿದ್ದರೆ, ಉಳಿದವು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧೀನದಲ್ಲಿದ್ದವು. ಆದರೆ, ಈಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಕೆರೆಗಳನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ. ನಾಲ್ಕು ಹೆಕ್ಟೇರ್ ಗಿಂತ ಕಡಿಮೆ ವಿಸ್ತೀರ್ಣದ ಕೆರೆಗಳನ್ನು ನಿರ್ವಹಣೆ ಮಾಡುತ್ತಿದ್ದ ಗ್ರಾಮ ಪಂಚಾಯಿತಿಗಳು ಈಗ 40 ಹೆಕ್ಟೇರ್ ವಿಸ್ತೀರ್ಣದ ಕೆರೆಗಳ ಹೊಣೆಯನ್ನು ಹೊತ್ತಿವೆ.

ನರೇಗಾದಡಿ ಕೆರೆ ಹೂಳು ತೆರವು, ಫೆನ್ಸಿಂಗ್ ನಿರ್ಮಾಣ, ಬದು ನಿರ್ಮಾಣದಂತ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಪುನರುಜ್ಜೀವನಕ್ಕೆ ಆದ್ಯತೆ ನೀಡಲಾಗಿದೆ. ಅಲ್ಲದೇ, ಕೆರೆಗಳಿಗೆ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳ, ಜಾನುವಾರು, ಪ್ರಾಣಿ ಪಕ್ಷಿಗಳಿಗೆ ಕುಡಿಯಲು, ಕೃಷಿಗೆ ಬಳಕೆಯಾಗಲಿದೆ. ಆದರೆ, ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಇಂದು ಕೆಲವೊಂದು ಕೆರೆಗಳು ಒತ್ತುವರಿಗೆ ಒಳಪಡುತ್ತಿದ್ದು, ಕೆರೆ ಅಂಗಳದಲ್ಲೇ ಸಾಗು ಮಾಡುತ್ತಿದ್ದರೂ ಕೇಳುವವರಿಲ್ಲದ ಸ್ಥಿತಿ ಇದೆ.

ಕೆಲ ದುಷ್ಕರ್ಮಿಗಳು ಕೆರೆಯಲ್ಲಿ ನೀರು ನಿಲ್ಲದಂತೆ ಮಾಡಲು ಕೋಡಿ ಒಡೆದು ನೀರು ಹರಿಬಿಡುತ್ತಿದ್ದಾರೆ ಎಂಬ ದೂರುಗಳಿವೆ. ಈ ಕುರಿತು ಕೆರೆ ಬಳಕೆದಾರರ ಸಂಘದಿಂದ ಸಂಬಂಧಪಟ್ಟವರಿಗೆ ದೂರು ನೀಡಿದರೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಜಿಲ್ಲೆಯಲ್ಲಿ 100 ಕೆರೆಗಳ ಹೂಳು ತೆರವುಗೊಳಿಸಿ ಕೆರೆ ಪುನಶ್ಚೇತನ ಕಾರ್ಯಕ್ರಮ ನಡೆಸಲಾಯಿತು. ಅದು ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ.

ಜಿಲ್ಲೆಯಲ್ಲಿರುವ ಕೆರೆಗಳನ್ನು ಗುರುತಿಸಿ ಸರ್ವೆ ಮಾಡುವಂತೆ ಮನವಿ ಮಾಡಿದರೂ ಅದಕ್ಕೆ ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೆಪ ಹೇಳಲಾಗುತ್ತಿದೆ. ಸರ್ವೆ ಮಾಡಿದಲ್ಲಿ ಮೂಲ ದಾಖಲೆಗಳ ಪ್ರಕಾರ ಕೆರೆ ಒತ್ತುವರಿ ತೆರವು ಮಾಡಲು ನೆರವಾಗಲಿದೆ.

ಇನ್ನು ಈ ಬಗ್ಗೆ ಕೆರೆ ಬಳಕೆದಾರರ ಸಂಘ ರಾಜ್ಯ ಕಾರ್ಯದರ್ಶಿ ಕೆ.ಶರಣಬವಸ ಪಾಟೀಲ್ ಮಾತನಾಡಿದ್ದು, 'ಕಾಂಗ್ರೆಸ್ ಸರ್ಕಾರ ಕೆರೆಗಳ ರಕ್ಷಣೆಗೆ ವಿಶೇಷ ಯೋಜನೆ ರೂಪಿಸುವುದಾಗಿ ಪ್ರಣಾಳಿಕೆಯಲ್ಲಿ ಸೇರಿಸಿತ್ತು. ನಾವು ಕೂಡ ಹಿಂದಿನಿಂದಲೂ ಈ ಬಗ್ಗೆ ಹೋರಾಡುತ್ತಲೇ ಬಂದಿದ್ದೇವೆ. ಕೆರೆಗಳ ಒತ್ತುವರಿ ಬಗ್ಗೆ ಸಾಕ್ಷಿ ಸಮೇತ ದೂರು ನೀಡಿದ್ದೇವೆ.

ಜಿಲ್ಲೆಯಲ್ಲಿ ಕೆರೆಗಳಲ್ಲಿ ಅಕ್ರಮ ಮರಂ ಗಣಿಗಾರಿಕೆ ಕೂಡ ನಡೆಯುತ್ತಿದೆ. ಕೆರೆಗಳ ನಿರ್ವಹಣೆಯನ್ನು ಕೆರೆ ಬಳಕೆದಾರರ ಸಂಘಕ್ಕೆ ವಹಿಸಿ ಸರ್ಕಾರ ಅನುದಾನ ನೀಡಿದರೆ ಕೆರೆಗಳನ್ನು ಉಳಿಸಿಕೊಳ್ಳಬಹುದು. ಕೂಡಲೇ ಸರ್ವೆ ನಡೆಸಿ, ಕೆರೆಗಳನ್ನು ಸರ್ಕಾರ ಪಟ್ಟಾ ಮಾಡಿಸಿಕೊಳ್ಳಬೇಕಿದೆ. ಇಲ್ಲವಾದರೆ ಕೆರೆಗಳು ಉಳಿಯವುದು ಕಷ್ಟ ಎಂದರು.

ಈ ಮುಂಚೆ ಕೆರೆಗಳ ನಿರ್ವಹಣೆ ಜಿಲ್ಲಾ ಪಂಚಾಯಿತಿಗೆ ಇತ್ತು. ಆದರೆ, ಈಚೆಗೆ 40 ಹೆಕ್ಟೇರ್ ಒಳಗಿನ ಎಲ್ಲ ಕೆರೆಗಳನ್ನು ಗ್ರಾಪಂಗಳಿಗೆ ಹಸ್ತಾಂತರಿಸಲಾಗಿದೆ. ಇದಕ್ಕೂ ಮುನ್ನ ಸರ್ಕಾರದಿಂದ ಒತ್ತುವರಿ ತೆರವಿಗೆ ಕ್ರಮವಾಗಲಿ, ನಿರ್ವಹಣೆ, ಸಂರಕ್ಷಣೆಗೆ ವಿಶೇಷ ಕ್ರಮ ಕೈಗೊಂಡಿಲ್ಲ ಎಂದು ರಾಯಚೂರು ಜಿಲ್ಲಾ ಪಂಚಾಯತ್‌ ಎಇಇ ಹೀರಾಲಾಲ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+