ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ರಾಯಚೂರು ಜಿಲ್ಲೆಯ ಚಲನಚಿತ್ರ ಮಂದಿರಗಳ ಮಾಲೀಕರು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಡಿಸೆಂಬರ್‌, 15: ಕೋವಿಡ್ ಹೊಡೆತಕ್ಕೆ ಚಲನಚಿತ್ರ ಮಂದಿರಗಳು ಆರ್ಥಿಕವಾಗಿ ಸಾಕಷ್ಟು ನೆಲಕಚ್ಚಿದ್ದವು. ರಾಯಚೂರಿನಲ್ಲಿ ಇದೀಗ ಮತ್ತೆ ನಿರ್ವಹಣೆ ನಷ್ಟದ ಹೊರೆ ತಾಳದೇ ಅನೇಕ ಚಿತ್ರಮಂದಿರಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದ ಚಲನಚಿತ್ರ ಮಂದಿರಗಳ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.

ಚಲನಚಿತ್ರ ಮಂದಿರಗಳು ಕೋವಿಡ್ ನಂತರ ಹಂತಹಂತವಾಗಿ ತೆರೆದುಕೊಂಡಿದ್ದವು. ಇದೀಗ ಪ್ರೇಕ್ಷಕರು ಕೂಡ ಮೊದಲಿನಂತೆ ಚಲನಚಿತ್ರ ಮಂದಿರಗಳತ್ತ ಸುಳಿಯುತ್ತಿಲ್ಲ. ಬರೀ ಕನ್ನಡ ಚಲನಚಿತ್ರಗಳಿಗೆ ಮೀಸಲಾಗಿದ್ದ ಮಂದಿರಗಳು ಅನಿವಾರ್ಯವಾಗಿ ನಷ್ಟದಿಂದ ಪಾರಾಗಲು ಎಲ್ಲ ಭಾಷೆಗಳ ಚಿತ್ರಗಳ ಪ್ರದರ್ಶನಕ್ಕೆ ಮುಂದಾಗಿವೆ. ಯಾವುದೇ ಹೊಸ ಚಲನಚಿತ್ರವಾದರೂ ಮೊದಲ ವಾರ ಮಾತ್ರ ಥಿಯೇಟರ್‌ ತುಂಬಿರುತ್ತದೆ. ನಂತರದ ದಿನಗಳಲ್ಲಿ ಗಳಿಕೆ ಇಳಿಮುಖವಾಗುತ್ತಾ ಸಾಗುವುದು ಸಹಜವಾಗಿದೆ. ಚಿತ್ರವನ್ನು ಪ್ರೇಕ್ಷಕರು ಇಷ್ಟಪಡದಿದ್ದರೆ, ಬೆರಳೆಣಿಕೆ ಪ್ರೇಕ್ಷಕರಿಗೆ ನಷ್ಟದಲ್ಲೇ ಕೆಲವು ದಿನ ಚಿತ್ರ ಪ್ರದರ್ಶನ ಮಾಡುವ ಅನಿವಾರ್ಯತೆ ಇದೆ ಎಂದು ಚಿತ್ರಮಂದಿರ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಸಾರಿಗೆ ನೌಕರರಿಗೆ ಪ್ರತಿ ತಿಂಗಳ ಮೊದಲ ದಿನವೇ ವೇತನ ಪಾವತಿಸಲಾಗುವುದು: ಶ್ರೀರಾಮುಲು ಭರವಸೆಸಾರಿಗೆ ನೌಕರರಿಗೆ ಪ್ರತಿ ತಿಂಗಳ ಮೊದಲ ದಿನವೇ ವೇತನ ಪಾವತಿಸಲಾಗುವುದು: ಶ್ರೀರಾಮುಲು ಭರವಸೆ

ಜನರು ಮೊದಲಿನಂತೆ ಚಿತ್ರಮಂದಿರಗಳಿಗೆ ಬರುತ್ತಿಲ್ಲ.‌ ಗುಣಮಟ್ಟದ ದೃಶ್ಯ ಹಾಗೂ ಗುಣಮಟ್ಟದ ಸಂಗೀತ ಕೇಳಬೇಕು ಎಂದು ಬಯಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಮಲ್ಟಿಪ್ಲೆಕ್ಸ್‌ ಥೇಟರ್‌ಗಳ ದರಕ್ಕೆ ಹೋಲಿಸಿದರೆ, ಚಲನಚಿತ್ರ ಮಂದಿರಗಳಲ್ಲಿ ದರವೂ ಕಡಿಮೆ ಇದೆ. ಆದರೂ ಪ್ರೇಕ್ಷಕರು ಇತ್ತೀಚೆಗೆ ಬದಲಾಗುತ್ತಿದ್ದಾರೆ ಎನ್ನುವುದು ಮಾಲೀಕರ ಅಳಲಾಗಿದೆ.

ಆದಾಯವೇ ಬರುತ್ತಿಲ್ಲ ಎನ್ನುತ್ತಿರುವ ಮಾಲೀಕರು

ಆದಾಯವೇ ಬರುತ್ತಿಲ್ಲ ಎನ್ನುತ್ತಿರುವ ಮಾಲೀಕರು

ರಾಯಚೂರಿನಲ್ಲಿ ಶ್ರೀ ನೀಲಕಂಠೇಶ್ವರ ಟಾಕೀಜ್‌ (ಎಸ್‌ಎನ್‌ಟಿ), ಮಿನಿ ಎಸ್‌ಎನ್‌ಟಿ, ಪದ್ಮನಾಭ ಥಿಯೇಟರ್‌, ಪೂರ್ಣಿಮಾ ಥಿಯೇಟರ್‌ಗಳಿವೆ. ನಾಲ್ಕು ಪರದೆಗಳು ಇರುವ ಮಿರಾಜ್‌ ಮಲ್ಟಿಪ್ಲೆಕ್ಸ್ ಇತ್ತೀಚೆಗೆ ತೆರೆದುಕೊಂಡಿದೆ. ಇವುಗಳ ಪೈಕಿ ಮಿನಿ ಎಸ್‌ಎನ್‌ಟಿ ಥಿಯೇಟರ ಅನ್ನು ಕೋವಿಡ್ ನಂತರದಲ್ಲಿ ಸ್ಥಗಿತಗೊಳಿಸಿದ್ದಾರೆ. ಎಸ್‌ಎನ್‌ಟಿಯಲ್ಲಿ 800 ಆಸನಗಳಿದ್ದು, ಕೋವಿಡ್‌ ನಂತರದಲ್ಲಿ ಕಾಂತಾರ ಚಲನಚಿತ್ರ ಪ್ರದರ್ಶನ ಶುರು ಮಾಡಿದಾಗ ಮೊದಲ ವಾರ ಸಂಪೂರ್ಣ ತುಂಬಿತ್ತು. ನಂತರ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುತ್ತಾ ಬಂದಿದೆ.

ಸಾಮಾಜಿಕ ಜಾಲತಾಣಗಳದ್ದೇ ದರ್ಬಾರ್‌

ಸಾಮಾಜಿಕ ಜಾಲತಾಣಗಳದ್ದೇ ದರ್ಬಾರ್‌

ಲಿಂಗಸುಗೂರು ತಾಲೂಕಿನಲ್ಲಿ ಅಧುನಿಕತೆ ಭರಾಟೆ, ಸಾಮಾಜಿಕ ಜಾಲತಾಣದ ಅರ್ಭಟ, ಅಂಗೈಯಲ್ಲಿ ಅರಮನೆ ನೋಡುವ ಮೊಬೈಲ್‍ ಬಳಕೆಯಿಂದ ಬಹುತೇಕ ಚಿತ್ರಮಂದಿರಗಳ ಮಾಲೀಕರು ಕನಿಷ್ಟ ಆದಾಯವನ್ನೂ ನಿರೀಕ್ಷಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಂಬತ್ತರ ದಶಕದಲ್ಲಿದ್ದ ಕಾಡಪ್ಪ ಹೆಸರೂರು ಚಿತ್ರಮಂದಿರ ಸ್ಥಳದ ವ್ಯಾಜ್ಯದಿಂದ ಮೂರು ದಶಕದ ಹಿಂದೆಯೇ ಸ್ಥಗಿತ ಆಗಿದೆ. 1994ರಲ್ಲಿ ಅಫ್ಜಲ್‍ ಕುಟುಂಬಸ್ಥರು ಸಂತೆ ಬಜಾರದಲ್ಲಿ ಹೊಸ ತಂತ್ರಜ್ಞಾನ ಮಾದರಿಯಲ್ಲಿ ಕೆಕೆಎಸ್‍ಆರ್‌ ಚಿತ್ರಮಂದಿರವೊಂದನ್ನು ನಿರ್ಮಿಸಿ ಸಿನಿಮಾ ಪ್ರಿಯರಿಗೆ ಅನುಕೂಲ ಮಾಡಿಕೊಟ್ಟಿದ್ದರು.

2000ನೇ ಇಸವಿಯಲ್ಲಿ ಹೈಟೆಕ್‍ ಚಿತ್ರಮಂದಿರ ನಿರ್ಮಾಣಕ್ಕೆ ಮುಂದಾಗಿದ್ದು, 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್‍ ಮತ್ತು ಹವಾನಿಯಂತ್ರಿತ ಎಂಪಾಯರ್‌ ಚಿತ್ರಮಂದಿರವನ್ನು ಬಸ್‍ ನಿಲ್ದಾಣದ ಬಳಿ ನಿರ್ಮಿಸಲಾಗಿತ್ತು. ಆರ್ಥಿಕ ಸಮಸ್ಯೆಯಿಂದ ವರ್ಷದಿಂದ ವರ್ಷಕ್ಕೆ ಚಿತ್ರಮಂದಿರ ನಡೆಸುವುದು ಕಷ್ಟಕರವಾಗುತ್ತಾ ಬಂದಿತ್ತು. ಆದ್ದರಿಂದ ಕೂಲಿಕಾರರಿಗೆ ಕೂಲಿ ನೀಡುವಷ್ಟು ಆದಾಯಕ್ಕೂ ಸಂಕಷ್ಟ ಬಂದೊದಗಿತ್ತು. ಸಿನಿಮಾ ಖರೀದಿಸಿ ತಂದು ಪ್ರದರ್ಶಿಸುವ, ವಿದ್ಯುತ್‍, ಕೂಲಿಕಾರರ ಕೂಲಿ ಹಣ ಸೇರಿದಂತೆ ಇತರೆ ಖರ್ಚು ವೆಚ್ಚ ಭರಿಸಲು ಆಗದೆ ಸಂಕಷ್ಟಕ್ಕೆ ಸಿಲುಕಿದೆವು. ಅಂತೆಯೇ 2014ರಲ್ಲಿ ಕೆಕೆಎಸ್‍ಆರ್‌ ಚಿತ್ರಮಂದಿರನ್ನು ಕೆಕೆಎಸ್‍ಆರ್‌ ಫಂಕ್ಷನ್‍ ಹಾಲ್‍ ಎಂದು ಪರಿವರ್ತಿಸಿ ಮದುವೆ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡಲು ಆರಂಭಿಸಿದೆವು ಎಂದು ಹೇಳಿದರು.

ಚಿತ್ರಮಂದಿರಗಳ ಮಾಲೀಕರ ಕಣ್ಣೀರು

ಚಿತ್ರಮಂದಿರಗಳ ಮಾಲೀಕರ ಕಣ್ಣೀರು

ಇನ್ನು ಮಾನ್ವಿ ಪಟ್ಟಣದ ಚಿತ್ರ ಮಂದಿರಗಳ ಮಾಲೀಕರು ನಷ್ಟದಲ್ಲಿದ್ದಾರೆ. ಪಟ್ಟಣದ ನಾಲ್ಕು ಚಿತ್ರ ಮಂದಿರಗಳ ಪೈಕಿ ದಶಕದ ಹಿಂದೆ ಎರಡು ಪ್ರದರ್ಶನ ಸ್ಥಗಿತಗೊಳಿಸಿವೆ. ಫೈವ್ ಸ್ಟಾರ್ ಚಿತ್ರ ಮಂದಿರವು ಫಂಕ್ಷನ್ ಹಾಲ್ ಆಗಿ ಪರಿವರ್ತನೆಯಾಗಿದೆ. ಈ ಚಿತ್ರ ಮಂದಿರದ ಮಳಿಗೆಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಹಾಗೆಯೇ ಪ್ರೇಮ ಚಿತ್ರಮಂದಿರ ಪ್ರದರ್ಶನ ಸ್ಥಗಿತಗೊಳಿಸಿ ಹಲವು ವರ್ಷಗಳು ಕಳೆದಿದ್ದು, ಕಟ್ಟಡ ಪುರಾತನ ಸ್ಮಾರಕದಂತೆ ಕಾಣುತ್ತದೆ. ಅಪರ್ಣಾ ಮತ್ತು ಮಲ್ಲಿಕಾರ್ಜುನ ಚಿತ್ರಮಂದಿರಗಳಲ್ಲಿ ಮಾತ್ರ ಈಗ ಚಲನಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಬೆರಳೆಣಿಕೆಯಷ್ಟು ಪ್ರೇಕ್ಷಕರು ಸಿನಿಮಾ ವೀಕ್ಷಣೆಗೆ ಬರುವ ಕಾರಣ ಚಿತ್ರ ಮಂದಿರಗಳ ತಿಂಗಳ ವಿದ್ಯುತ್ ಬಿಲ್ ಹಾಗೂ ಕಾರ್ಮಿಕರ ಸಂಬಳ ಪಾವತಿಗೆ ತೊಂದರೆಯಾಗುತ್ತಿದೆ. "ಮಾಸಿಕ ವಿದ್ಯುತ್ ಬಿಲ್ ಸುಮಾರು 30 ಸಾವಿರ ರೂಪಾಯಿ, ಕಾರ್ಮಿಕರ ಸಂಬಳ ಸುಮಾರು 77 ಸಾವಿರ ರೂಪಾಯಿ ನೀಡಲು ಸಾಧ್ಯವಾಗುತ್ತಿಲ್ಲ. ಮಾಲೀಕರು ಸ್ವಂತ ಹಣದಿಂದಲೇ ಕಾರ್ಮಿಕರಿಗೆ ವೇತನ ನೀಡುತ್ತಿದ್ದಾರೆ," ಎಂದು ಅಪರ್ಣಾ ಚಿತ್ರಮಂದಿರದ ವ್ಯವಸ್ಥಾಪಕ ಮುಜಾಹಿದ್ ನಾಯ್ಕ್ ಆತಂಕ ವ್ಯಕ್ತಪಡಿಸಿದರು.

ಚಿತ್ರಮಂದಿರದ ಕಡೆ ಬಾರದ ಪ್ರೇಕ್ಷಕರು

ಚಿತ್ರಮಂದಿರದ ಕಡೆ ಬಾರದ ಪ್ರೇಕ್ಷಕರು

ಸಿರವಾರ ಪಟ್ಟಣದಲ್ಲಿದ್ದ ಮೂರು ಚಿತ್ರಮಂದಿರಗಳಲ್ಲಿ ಒಂದು ಚಿತ್ರಮಂದಿರ ಕಲ್ಯಾಣ ಮಂಟಪವಾಗಿ ಮಾರ್ಪಾಟ್ಟಿದೆ. ಇನ್ನು ಎರಡು ಚಿತ್ರಮಂದಿರಗಳು ಹೊಸ ಚಲನಚಿತ್ರಗಳ ಪ್ರದರ್ಶನಗಳನ್ನು ಮಾಡುತ್ತಾ ನಷ್ಟದಲ್ಲಿಯೇ ಸಾಗಿವೆ. ಇಂದಿನ ಆನ್‌ಲೈನ್ ಆ್ಯಪ್‌ಗಳ ಮೂಲಕ ಚಿತ್ರ ಬಿಡುಗಡೆಯಾದ ಎರಡು ದಿನದಲ್ಲಿ ಉಚಿತವಾಗಿ ಸಿಗುವುದರಿಂದ ವೀಕ್ಷಕರು ಚಿತ್ರಮಂದಿರಗಳಿಂದ ದೂರ ಆಗುತ್ತಿದ್ದಾರೆ. ದೊಡ್ಡ ನಟರ ಚಿತ್ರಗಳ ಬಿಡುಗಡೆಯಾದಾಗ ಮಾತ್ರ ವಾರಕ್ಕೂ ಹೆಚ್ಚು ಕಾಲ ಚಿತ್ರಗಳನ್ನು ನೋಡಲು ಚಿತ್ರ ಮಂದಿರಗಳಿಗೆ ವೀಕ್ಷಕರು ಬರುತ್ತಾರೆ. ನಂತರದ ದಿನಗಳಲ್ಲಿ ಸಣ್ಣ ಚಿತ್ರಗಳು ಎರಡು ಮೂರು ದಿನಗಳಿಗೆ ಮಾತ್ರ ಸೀಮಿತವಾಗುತ್ತಿವೆ.

ಅಳಲು ತೋಡಿಕೊಂಡ ಮಾಲೀಕರು

ಅಳಲು ತೋಡಿಕೊಂಡ ಮಾಲೀಕರು

ಸಿಂಧನೂರಿನಲ್ಲಿ ನಾಲ್ಕು ದಶಕಗಳಿಂದ ಕನ್ನಡ ಚಲನಚಿತ್ರಗಳನ್ನೇ ಪ್ರದರ್ಶಿಸುತ್ತಾ ಬಂದಿದ್ದೇವೆ. ನಮಗೆ ಇತ್ತೀಚಿನ ವರ್ಷಗಳಲ್ಲಿ ಆದಾಯವೇ ಇಲ್ಲದಂತಾಗಿದೆ. ಇದರಿಂದ ಚಿತ್ರಮಂದಿರವನ್ನು ಬಂದ್ ಮಾಡುವುದು ಅನಿವಾರ್ಯವಾಯಿತು ಎಂದು ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ರಾಜೇಂದ್ರ ಕುಮಾರ ಬಾದರ್ಲಿ ಹೇಳಿದರು. ಪ್ರತಿದಿನ 3 ಸಾವಿರ ರೂಪಾಯಿ ತೆರಿಗೆ ಕಟ್ಟಬೇಕಾಗಿತ್ತು. ಕೆಲಸಗಾರರು, ವಿದ್ಯುತ್ ಬಿಲ್, ನಿರ್ವಹಣೆ ಸೇರಿದಂತೆ ದಿನವೊಂದಕ್ಕೆ ಕನಿಷ್ಠ 8 ಸಾವಿರ ರೂಪಾಯಿ ಖರ್ಚು ಬರುತ್ತಿತ್ತು. ಸರ್ಕಾರದಿಂದಲೂ ಯಾವುದೇ ರೀತಿಯ ಬೆಂಬಲ ದೊರೆಯಲಿಲ್ಲ. ಆದ್ದರಿಂದ ಐದಾರು ವರ್ಷಗಳಿಂದ ಚಿತ್ರಮಂದಿರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು. ನಗರದಲ್ಲಿ ಮಂಜುನಾಥ, ಸಂಗಮೇಶ್ವರ, ಶರಣಬಸವೇಶ್ವರ ಮತ್ತು ಕೂಡಲ ಸಂಗಮ ಚಿತ್ರಮಂದಿರಗಳಿವೆ. ಇದರಲ್ಲಿ ಯಾವ ಚಿತ್ರಮಂದಿರಗಳು ಸಹ ಲಾಭವನ್ನು ಗಳಿಸಿಲ್ಲ ಎಂದರು.

English summary
No revenue for cinema theaters of Raichur district, theaters owners worried. Theaters Owners in financial trouble, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X