ರಾಯಚೂರು: ನಾರಾಯಣಪುರ ಬಲದಂಡೆ ನಾಲೆಗಳ ಅಪೂರ್ಣ ಕಾಮಗಾರಿ, ರೈತರಿಗೆ ಸಂಕಷ್ಟ
ರಾಯಚೂರು, ಜೂನ್ 14: ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ನಿಯಮಾನುಸಾರ ಪೂರ್ಣಗೊಳಿಸುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಅಲ್ಲಲ್ಲಿ ಕಾಮಗಾರಿ ಅಪೂರ್ಣವಾಗಿ ಬಿಟ್ಟಿದ್ದು, ಜಮೀನಿಗೆ ನೀರು ಹರಿಸಿಕೊಳ್ಳಲಾಗದ ಸಂಕಷ್ಟ ತಂದೊಡ್ಡಿದೆ ಎನ್ನುವುದು ರೈತರ ಸಾಮೂಹಿಕ ಆರೋಪವಾಗಿದೆ.
ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಆಧುನೀಕರಣ ಕಾಮಗಾರಿ ಆರಂಭದ ದಿನಗಳಿಂದ ಒಂದಲ್ಲ ಒಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತ ಸಾಗಿದೆ. ವಿತರಣಾ ಮತ್ತು ಹೊಲಗಾಲುವೆ ಆಧುನೀಕರಣದ ಕಾಮಗಾರಿ ಆರಂಭದಲ್ಲಿ ಅಹೋರಾತ್ರಿ ನಡೆದು ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಆಶಾಭಾವನೆಯಲ್ಲಿದ್ದ ರೈತರಿಗೆ ಆಮೆಗತಿ ಹಾಗೂ ಅಲ್ಲಿಷ್ಟು ಇಲ್ಲಿಷ್ಟು ಕೆಲಸ ಬಿಟ್ಟು ಹೋಗಿರುವುದು ಸಮರ್ಪಕ ನೀರು ಹರಿಸುವಿಕೆಗೆ ತೊಂದರೆಯಾಗಿದೆ.

7ನೇ ವಿತರಣಾ ನಾಲೆ ಕಾಮಗಾರಿ ಈಗ ಆರಂಭಗೊಂಡಿದ್ದು ಕಾಮಗಾರಿ ಚಾಲ್ತಿಯಲ್ಲಿದೆ. 7(ಎ) ವಿತರಣಾ ನಾಲೆ ಗಲಗಿನವರ ದೊಡ್ಡಿ ಪ್ರದೇಶದಿಂದ ರಾಮಲೂಟಿ ಸೀಮಾಂತರದವರೆಗೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಪರಾಂಪುರ ತಾಂಡಾ ಬಳಿ ನಾಲೆ ಕೊಚ್ಚಿ ಸುತ್ತಮುತ್ತ ರೈತರ ಜಮೀನು ಬೆಳೆ ಹಾಳಾಗಿದ್ದರೂ ಕೂಡ ಇಂದಿಗೂ ದುರಸ್ತಿಗೊಳಿಸಿಲ್ಲ.
ರೈತರಿಗೆ ಪರಿಹಾರ ನೀಡುವವರಾರು ಎಂಬ ಗೊಂದಲದಲ್ಲಿ ರೈತರು ಪರದಾಡುತ್ತಿದ್ದಾರೆ. ಪರಾಂಪುರ ಕ್ರಾಸ್‌ನ ನಂತರದಲ್ಲಿ ರಾಮಲೂಟಿ ವರೆಗಿನ ವಿತರಣಾ ನಾಲೆ ಆದನಗೌಡರ ಜಮೀನು, ಸಖ್ಯಪ್ಪ ಲಮಾಣೇರದೊಡ್ಡಿ, ಭೀಮನಗೌಡ, ಹನುಮಂತಪ್ಪ ಪರಾಂಪುರ ಸೇರಿದಂತೆ ಬಹುತೇಕ ಜಮೀನುಗಳ ಬಳಿ ಅಲ್ಲಲ್ಲಿ 5,10,300 ಮೀಟರ್ ಕಾಮಗಾರಿ ಮಾಡದೆ ಅಗೆದು ಬಿಟ್ಟು ಹೋಗಿದ್ದಾರೆ. ಬಹುತೇಕ ಡ್ರಾಪ್ ಔಟ್‌ಗಳ ದುರಸ್ತಿ ಕಾರ್ಯ ಕೈಗೊಳ್ಳದೆ ಕೇವಲ ಸಿಮೆಂಟ್ ಪ್ಲಾಸ್ಟರ್ ಮಾಡಿದ್ದರಿಂದ ಅದು ಕೂಡ ಕೆಲವಡೆ ಕಿತ್ತು ಹೋಗಿದೆ.
ಕಾಮಗಾರಿ ಗುಣಮಟ್ಟ ಬಗ್ಗೆ ತಮಗೆ ಏನೂ ತಿಳಿಯದು. ಕೆಲವಡೆ ಕಾಮಗಾರಿ ಪೂರ್ಣಗೊಳಿಸದೆ ಹೋಗಿದ್ದಾರೆ. ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳುವ ಅವಧಿಗೆ ಮುಂಚೆಯೇ ಕೆಲವಡೆ ಹೂಳು ತುಂಬಿದೆ. ಮುಳ್ಳುಕಂಟಿ ಬೆಳೆದು ಕಾಲುವೆ ಮುಚ್ಚಿ ಹೋಗಿವೆ. ಜಮೀನಿಗೆ ಹೋಗಿ ಬರಲು ಸಿಡಿ ನಿರ್ಮಾಣ ಮಾಡಿಲ್ಲ. ಜಮೀನಿಗೆ ನೀರು ಹರಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ ಎಂದು ರೈತರಾದ ಬಸವಲಿಂಗಪ್ಪ , ಲಚಮಪ್ಪ , ನಾಗನಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಮತ್ತು ವಿತರಣಾ ಹಾಗೂ ಹೊಲಗಾಲುವೆ ಕಾಮಗಾರಿ ಪ್ರಗತಿಯಲ್ಲಿವೆ. ಅವಧಿ ಪೂರ್ಣಗೊಳ್ಳುತ್ತ ಬಂದಿದ್ದರೂ ಕೂಡ ಅಲ್ಲಿಲ್ಲಿ ಕಾಮಗಾರಿಗಳು ಬಾಕಿ ಉಳಿದಿವೆ. ಕಾಮಗಾರಿ ನಡೆಯುತ್ತಿರುವಾಗಲೇ ಹೂಳು ತುಂಬಿಕೊಂಡಿದ್ದು, ಗಿಡ, ಮರ , ಮುಳ್ಳುಕಂಟಿ ಬೆಳೆದಿವೆ. ಉಳಿದ ಕೆಲಸ ಪೂರ್ಣಗೊಳಿಸಿ ಹೂಳು, ಮುಳ್ಳುಕಂಟಿ ಸ್ವಚ್ಛಗೊಳಿಸಿ ಎಂದು ಗುತ್ತಿಗೆದಾರರಿಗೆ ಹೇಳುವುದೇ ಸವಾಲಾಗಿದೆ ಎಂದು ಅಧಿಕಾರಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ್ ಮಾತನಾಡಿದ್ದು, 'ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲ ತಾಂತ್ರಿಕ ಕಾರಣದಿಂದ ಅಲ್ಲಲ್ಲಿ ಕೆಲವಷ್ಟು ಕಾಮಗಾರಿ ಮಾಡಬೇಕಿದೆ. 2023ರ ಡಿಸೆಂಬರ್ ಅಂತ್ಯದವರೆಗೆ ಗುತ್ತಿಗೆದಾರರಿಗೆ ಅವಕಾಶಗಳಿವೆ. ಈ ಅವಧಿಯಲ್ಲಿ ಪೂರ್ಣ ಪ್ರಮಾಣದ ಕಾಮಗಾರಿ ಮಾಡಿಸಿಕೊಳ್ಳಲಾಗುವುದು. ರೈತರು ಕೂಡ ತಮಗೆ ದೂರು ನೀಡಿದ್ದಾರೆ. ಗುತ್ತಿಗೆದಾರರ ಗಮನಕ್ಕೆ ತಂದು ಕೆಲಸ ಮಾಡಿಸುತ್ತೇವೆ' ಎಂದು ಹೇಳಿದರು.












Click it and Unblock the Notifications