ಲಿಂಗಸುಗೂರು ವಿಧಾನಸಭಾ ಕ್ಷೇತ್ರ: ಅನುಕಂಪದ ಅಲೆಯಲ್ಲಿ ಗೆಲ್ಲುವುದೇ ಜೆಡಿಎಸ್..?
ರಾಯಚೂರು ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ ಮೀಸಲು ವಿಧಾನಸಭೆ ಕ್ಷೇತ್ರವಾಗಿರುವ ಲಿಂಗಸುಗೂರಿನಲ್ಲಿ ಈ ಸಲ ಜನರು ಜೆಡಿಎಸ್ ಅಭ್ಯರ್ಥಿ ಪರ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಶಾಸಕ ಮತ್ತು ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸುವುದು ಸುಲಭವಿಲ್ಲ.
ರಾಯಚೂರು ಫೆಬ್ರವರಿ 6: ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ ಮೀಸಲು ವಿಧಾನಸಭೆ ಕ್ಷೇತ್ರವಾಗಿರುವ ಲಿಂಗಸುಗೂರಿನಲ್ಲಿ ಈ ಸಲ ಜನರು ಜೆಡಿಎಸ್ ಅಭ್ಯರ್ಥಿ ಪರ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಹಾಲಿ ಕಾಂಗ್ರೆಸ್ ಶಾಸಕ ಮತ್ತು ಬಿಜೆಪಿಯ ಅಭ್ಯರ್ಥಿಗಳಾಗುವ ಪ್ರಬಲರನ್ನು ಸೋಲಿಸುವುದು ಸುಲಭವಿಲ್ಲ.
ಜೆಡಿಎಸ್‌ನಿಂದ ಸಿದ್ದು ಬಂಡಿ ಸ್ಪರ್ಧಿಸುವುದು ಖಚಿತವಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ನಡೆಸಿದ ಪಂಚರತ್ನ ರಥಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎರಡು ಬಾರಿ ಸೋಲು ಅನುಭವಿಸಿರುವ ಸಿದ್ದು ಬಂಡಿ ಅವರಿಗೆ ಜನರು ಶಕ್ತಿ ತುಂಬಲಿದ್ದಾರೆ ಎನ್ನುವುದು ಮೇಲ್ನೊಟಕ್ಕೆ ಕಂಡುಬರುತ್ತಿದೆ. ಜೆಡಿಎಸ್ ಅಭ್ಯರ್ಥಿ ಅನುಕಂಪ ಕಾಯ್ದುಕೊಂಡು ಮುನ್ನಡೆಯಬೇಕಿದೆ. ಅನುಕಂಪದ ಅಲೆ ಇರಲಿ, ಇಲ್ಲದಿರಲಿ ಗೆಲ್ಲುವುದಕ್ಕೆ ತೀವ್ರ ಪೈಪೋಟಿ ನಡೆಸುವುದು ಅನಿವಾರ್ಯವಾಗಿದೆ.
ಹಾಲಿ ಕಾಂಗ್ರೆಸ್ ಶಾಸಕ ಡಿ.ಎಸ್.ಹೂಲಗೇರಿ ಅವರು ಮತ್ತೊಮ್ಮೆ ಗೆಲ್ಲುವ ವಿಶ್ವಾಸದಲ್ಲಿದ್ದು, ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಿರೋಧ ಪಕ್ಷದ ಶಾಸಕನಾಗಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಕೆಲಸ ಮಾಡಿರುವ ತೃಪ್ತಿ ಅವರಲ್ಲಿದೆ. ಜನರು ಮತ್ತೊಮ್ಮೆ ಆಶೀರ್ವಾದ ಮಾಡಿ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ತರುವುದಕ್ಕಾಗಿ ಮತ ನೀಡುತ್ತಾರೆ ಎನ್ನುವುದು ಅವರ ನಂಬಿಕೆಯಾಗಿದೆ.

ವಾಸ್ತವದಲ್ಲಿ ಡಿ.ಎಸ್.ಹೂಲಗೇರಿ ಅವರಿಗೆ ಟಿಕೆಟ್ ನೀಡದಂತೆ ಕಾಂಗ್ರೆಸ್‌ನಲ್ಲಿಯೇ ಕೂಗು ಶುರುವಾಗಿದೆ. ಸ್ಪೃಶ್ಯ ಜಾತಿಯವರಿಗೆ ಟಿಕೆಟ್ ಕೊಡಬೇಕು ಎನ್ನುವ ಒತ್ತಾಯ ಪ್ರಬಲವಾಗಿದೆ. ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದು ಕ್ಷೇತ್ರದಲ್ಲಿ ಮುನ್ನೆಲೆಯಲ್ಲಿ ಚರ್ಚೆಯಾಗುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ಎದುರಾಳಿಗಳನ್ನು ಎದುರಿಸುವ ತಯಾರಿಗಿಂತಲೂ ಟಿಕೆಟ್ ಪಡೆದುಕೊಳ್ಳುವುದು ಕಾಂಗ್ರೆಸ್‌ನಲ್ಲಿ ಸದ್ಯ ಮುಖ್ಯವಾಗಿದೆ.
ಹಾಲಿ ಶಾಸಕರನ್ನು ಹೊರತುಪಡಿಸಿ ನಿವೃತ್ತ ಎಂಜಿನಿಯರ್ ಆರ್.ರುದ್ರಯ್ಯ, ಎಚ್.ಬಿ.ಮುರಾರಿ ಹಾಗೂ ಹನುಮಂತಪ್ಪ ಆಲ್ಕೋಡ್ ಸೇರಿದಂತೆ ಒಟ್ಟು ಆರು ಅರ್ಜಿದಾರರು ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ರುದ್ರಯ್ಯ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಕ್ಷೇತ್ರದ ಜನರಿಗೆ ಚಿರಪರಿಚಿತರಾಗಿರುವ ಎಚ್.ಬಿ.ಮುರಾರಿ ಮತ್ತು ಹನುಮಂತಪ್ಪ ಆಲ್ಕೋಡ್ ಟಿಕೆಟ್ ಪಡೆಯುವುದಕ್ಕೆ ತಮ್ಮದೇ ಆದ ನೆಲೆಯಲ್ಲಿ ಪ್ರಯತ್ನ ಪಡುತ್ತಿದ್ದಾರೆ. ಹೈಕಮಾಂಡ್ ಯಾರ ಪರ ಒಲವು ಹೊಂದಿದೆ ಎಂಬುದು ತಿಳಿಯಬೇಕಿದೆ.
ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಶಾಸಕ ಮಾನಪ್ಪ ವಜ್ಜಲ ಕಾದು ಕುಳಿತಿದ್ದಾರೆ. 2008ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗುತ್ತಿದ್ದಂತೆ ಸತತ ಎರಡು ಬಾರಿ ಬೇರೆಬೇರೆ ಪಕ್ಷಗಳಿಂದ ಗೆಲುವು ಸಾಧಿಸಿದ್ದರು. ಕಳೆದ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ತಪ್ಪಿದ್ದರಿಂದ ಈ ಬಾರಿ ಗೆಲ್ಲಲೇಬೇಕು ಎನ್ನುವ ಛಲದಲ್ಲಿದ್ದಾರೆ. ಹಟ್ಟಿ ಚಿನ್ನದಗಣಿ ಕಂಪನಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದಾದ್ಯಂತ ಸಂಚಲನ ಹುಟ್ಟುಹಾಕಿದ್ದು, ಬೆಂಬಲಿಗರು ಈಗಾಗಲೇ ತಯಾರಿ ಮಾಡಿಕೊಂಡಂತಿದೆ.












Click it and Unblock the Notifications