Hatti Gold Mine: ರಾಯಚೂರು ಹಟ್ಟಿ ಚಿನ್ನದ ಗಣಿ ನೈರ್ಮಲ್ಯ ಕಾಪಾಡಿಕೊಂಡು ಬಂದಿದ್ದು ಹೇಗೆ? ಇಲ್ಲಿದೆ ಮಾಹಿತಿ
ರಾಯಚೂರು ಜನವರಿ 26: ರಾಜ್ಯದ ಹಲವಡೆ ಗಣಿಗಾರಿಕೆ ಪ್ರದೇಶಗಳಲ್ಲಿ ತ್ಯಾಜ್ಯ ಸುರಿದು ಭೂಮಿ ಬರಡು ಮಾಡಲಾಗಿದೆ ಎಂಬ ದೂರುಗಳು ಕೇಳಿಬರುತ್ತವೆ. ಆದರೆ ಇದರ ನಡವೆಯೇ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿ 76 ವರ್ಷಗಳಿಂದ ನೈರ್ಮಲ್ಯ ಕಾಪಾಡಿಕೊಂಡು ಬಂದಿರುವುದು ವಿಶೇಷ.
ಹಟ್ಟಿ ಚಿನ್ನದ ಗಣಿಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ಮೌರ್ಯರ ಕಾಲದಲ್ಲಿ ಗುರುತಿಸಿಕೊಂಡ ಈ ಗಣಿಯಿಂದ ಹೈದರಾಬಾದ್ ನಿಜಾಮರು ಹಾಗೂ ಬ್ರಿಟಿಷರೂ ಚಿನ್ನ ತೆಗೆದಿದ್ದಾರೆ. ಈ ಗಣಿಯು ಕರ್ನಾಟಕ ಸರ್ಕಾರದ ಅಧೀನಕ್ಕೆ ಬಂದ ನಂತರವೂ ಇಲ್ಲಿ ಗಣಿ ತ್ಯಾಜ್ಯವನ್ನು ವ್ಯವಸ್ಥಿತವಾಗಿಯೇ ವಿಲೇವಾರಿ ಮಾಡಲಾಗುತ್ತಿದೆ.

ಹಟ್ಟಿ ಪ್ರದೇಶದಲ್ಲಿ 2800 ಅಡಿ ಆಳದಲ್ಲಿ ಗಣಿಗಾರಿಕೆ ನಡೆದಿದೆ. ನೆಲದಾಳದಲ್ಲೇ ಎರಡೂವರೆ ಕಿ.ಮೀ ದೂರದವರೆಗೆ ಕ್ರಮಿಸಬಹುದಾದ ಮೂರು ಗುಹೆಗಳಿವೆ. ಇಲ್ಲಿಂದ ನಿತ್ಯ ನೂರಾರು ಟನ್ ಅದಿರು ತೆಗೆದರೂ ಕಂಪನಿ ಭೂಮಿಯ ಮೇಲ್ಮೈಯಲ್ಲಿ ಗಣಿತ್ಯಾಜ್ಯ ಸುರಿದಿಲ್ಲ.
ಚಿನ್ನದ ನಿಕ್ಷೇಪವನ್ನು ಸಂಪೂರ್ಣವಾಗಿ ಬಳಿಸಿದ ನಂತರ ಭೂಮಿ ಆಳದಲ್ಲಿ ತಗ್ಗುಬಿದ್ದ ಪ್ರದೇಶದಲ್ಲಿ ತ್ಯಾಜ್ಯ ಹಾಕಿ ಮುಚ್ಚುವ ಪ್ರಕ್ರಿಯೆ ಈಗಲೂ ಮುಂದುವರಿದಿದೆ. ಹೊರಗಿನ ಜನರಿಗೆ ಇಂತಹದೊಂದು ಗಣಿಗಾರಿಕೆ ನಡೆಯುತ್ತಿದೆ ಎಂಬುದೂ ತಿಳಿಯುತ್ತಿಲ್ಲ. ಚಿನ್ನಕ್ಕಾಗಿ ನೆಲ ಅಗೆದಾಗ ನೀರು ಒಸರುವುದು ಸಹಜ. ಭೂವಿಜ್ಞಾನಿಗಳು ಯಂತ್ರಗಳ ಸಹಾಯದಿಂದ ಭೂಮಿ ಅಗೆದು ಒಳಪದರ ಮಾದರಿ ಪಡೆದ ನಂತರವೇ ಗಣಿಗಾರಿಕೆ ಆರಂಭವಾಗುತ್ತದೆ.

ಒಂದು ಕಡೆ ಗಣಿಗಾರಿಕೆ ಮುಗಿದ ಮೇಲೆ ಇನ್ನೊಂದು ಕಡೆ ಅಗೆದ ಕಲ್ಲು, ಮಣ್ಣು ಒಳಗೊಂಡ ಗಣಿ ತ್ಯಾಜ್ಯವನ್ನು ಗಣಿಯಲ್ಲೇ ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುತ್ತದೆ. ಹೀಗಾಗಿ ಗಣಿಪ್ರದೇಶದ ಗುಹೆಗಳಲ್ಲೂ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಟ್ಟಿನ ಗಣಿ ವಿಜ್ಞಾನಿಗಳು ವಿವರಣೆ ನೀಡುತ್ತಾರೆ.
ಹಟ್ಟಿ ಚಿನ್ನದ ಕಂಪನಿಯ ಆವರಣದಲ್ಲಿ ಒಂದು ಕೋರ್ ಗ್ರಂಥಾಲಯವೇ ಇದೆ. ಅಲ್ಲಿ ಟ್ರೇಗಳ ರೂಪದಲ್ಲಿರುವ ಡಬ್ಬಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿ ಇಡಲಾಗಿದೆ. ಭೂಮಿಯ ಆಳದಲ್ಲಿನ ಶಿಲಾಪದರ ಹಾಗೂ ಮಣ್ಣು ಇತ್ಯಾದಿಗಳ ಮಾಹಿತಿ ಗೋಪ್ಯವಾಗಿ ಇಡಲಾಗಿದೆ. ಭೂವಿಜ್ಞಾನಿಗಳ ನಿರ್ದೇಶನದಂತೆಯೇ ಗಣಿಯಲ್ಲಿನ ಆಳವಾದ ಗುಂಡಿಗಳಲ್ಲಿ ಗಣಿತ್ಯಾಜ್ಯ ಸುರಿಯಲಾಗುತ್ತಿದೆ. ಹೀಗಾಗಿ ಗಣಿ ಪ್ರದೇಶದಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಭೂಮಿ ಮೇಲ್ಮೈ ಮೇಲೆಯೂ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.
ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಮಲ್ಲಪ್ಪ ಶಾಫ್ಟ್, ವಿಲೇಜ್ ಶಾಫ್ಟ್, ಸೆಂಟ್ರಲ್ ಶಾಫ್ಟ್ ಹಾಗೂ ಸರ್ಕುಲರ್ ಶಾಫ್ಟ್‌ನಲ್ಲಿ ಚಿನ್ನದ ಅದಿರು ತೆಗೆಯುವ ಕಾರ್ಯನಡೆಯುತ್ತಿದೆ. ಲಿಂಗಸುಗೂರು ತಾಲ್ಲೂಕಿನ ಹಟ್ಟಿ, ಸಿರವಾರ ತಾಲ್ಲೂಕಿನ ಹಿರಾಬುದ್ದಿನ್ನಿ ಹಾಗೂ ದೇವದುರ್ಗ ತಾಲ್ಲೂಕಿನ ಊಟಿ ಗ್ರಾಮದ ವ್ಯಾಪ್ತಿಯಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ. ಕಂಪನಿಯು ಅಲ್ಲಿಯೂ ಪರಿಸರ ಕಾಳಜಿ ತೋರಿದೆ.
'ಕಂಪನಿ ಇನ್ನೂ ಒಂದು ಹೆಜ್ಚೆ ಮುಂದೆ ಹೋಗಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಣಿ ಪ್ರದೇಶಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ಆಗಾಗ ಇಲ್ಲಿಗೆ ಬಂದು ವೀಕ್ಷಣೆ ಮಾಡಿ ಹೋಗುತ್ತಾರೆ. ಗಣಿಗಾರಿಕೆ ಪ್ರದೇಶದಲ್ಲಿ ನೈರ್ಮಲ್ಯ ಕಾಯ್ದುಕೊಂಡು ಬಂದ ಹಿರಿಮೆಯೂ ನಮ್ಮದಾಗಿದೆ' ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂಜಯ ಶೆಟ್ಟೆಣ್ಣನವರ ಹೇಳುತ್ತಾರೆ.
ಅದಿರು ಸಂಸ್ಕರಣೆ ಬೂದಿಗೆ ಬೇಡಿಕೆ
ಚಿನ್ನದ ಅದಿರಿನ ಸಂಸ್ಕರಣೆ ನಂತರ ಹೊರ ಬರುವ ಬೂದಿಯನ್ನು ಕಂಪನಿಯ ಪರಿಸರದಲ್ಲಿ ವೈಜ್ಞಾನಿಕವಾಗಿ ಸಂಗ್ರಹಿಸಲಾಗಿದೆ. ಇದಕ್ಕೂ ಅಪಾರ ಬೇಡಿಕೆ ಇರುವ ಕಾರಣ ಇದನ್ನು ಗಣಿಗಳಲ್ಲಿ ಸುರಿದಿಲ್ಲ.
ಚಿನ್ನದ ಅದಿರಿನ ಸಂಸ್ಕರಣೆ ನಂತರದ ತ್ಯಾಜ್ಯದಲ್ಲಿ ಟಂಗಸ್ಟ್‌ನ ಅಂಶಗಳು ಇವೆ. ಆಸ್ಟ್ರೇಲಿಯಾದ ಕಂಪನಿಯೊಂದು ಇದನ್ನು ಖರೀದಿಸಲು ಆಸಕ್ತಿ ತೋರಿಸಿದೆ. ಅದು ಅತ್ಯಂತ ಕಡಿಮೆ ಬೆಲೆಗೆ ಕೇಳುತ್ತಿರುವ ಕಾರಣ ಕಂಪನಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.
ಸಂಸ್ಕರಣೆ ನಂತರದ ತ್ಯಾಜ್ಯ ವಿಲೇವಾರಿಯ ಬಗೆಗಿನ ಸೂಕ್ಷ್ಮ ವಿಷಯಗಳನ್ನು ಹಟ್ಟಿ ಚಿನ್ನದ ಗಣಿ ಕಂಪನಿಯ ಅಧಿಕಾರಿಗಳು ಬಹಿರಂಗಪಡಿಸಲು ಬಯಸುತ್ತಿಲ್ಲ. ಅದನ್ನೂ ಪುನರ್ ಬಳಕೆ ಮಾಡುವ ದಿಸೆಯಲ್ಲಿ ಪ್ರಯತ್ನಗಳು ನಡೆದಿವೆ ಎಂದು ಕಂಪನಿ ಮೂಲಗಳು ತಿಳಿಸಿವೆ.











Click it and Unblock the Notifications