'ನಿಗಮ, ಮಂಡಳಿ ನನಗೆ ಬೇಡವೇ ಬೇಡ' ಎಂದು ಸಚಿವ ಸ್ಥಾನಕ್ಕೆ ಹಂಪನಗೌಡ ಬಾದರ್ಲಿ ಪಟ್ಟು
ರಾಯಚೂರು ಜನವರಿ 27: 'ನಿಗಮ, ಮಂಡಳಿ ನನಗೆ ಬೇಡವೇ ಬೇಡ' ಎಂದು ರಾಯಚೂರಿನ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಸೇರಿದಂತೆ ಕೆಲ ಶಾಸಕರು ಪಟ್ಟು ಹಿಡಿದಿದ್ದಾರೆ.
ಜಿಲ್ಲೆಯ ಶಾಸಕರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟದಲ್ಲಿ ಸ್ಥಾನ ಕೊಡಲು ಸಾಧ್ಯವಾಗದ ಕಾರಣ ರಾಜ್ಯ ಸರ್ಕಾರ ರಾಯಚೂರು ಜಿಲ್ಲೆಯ ಮೂವರು ಶಾಸಕರನ್ನು ನಿಗಮ, ಮಂಡಳಿಗೆ ನೇಮಕ ಮಾಡಿದೆ.

ನಾಲ್ಕು ಅವಧಿಗೆ ಶಾಸಕರಾದ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜೊತೆಗೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಕರ್ನಾಟಕ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮಕ್ಕೆ ಹಾಗೂ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಅವರನ್ನು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬಸನಗೌಡ ದದ್ದಲ್ ಹಾಗೂ ಬಸನಗೌಡ ತುರುವಿಹಾಳ ಎರಡನೇ ಅವಧಿಗೆ ಶಾಸಕರಾಗಿದ್ದಾರೆ.
ರಾಜ್ಯ ಸರ್ಕಾರ ಶುಕ್ರವಾರ ಜಿಲ್ಲೆಯ ಮೂವರು ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದ್ದು ಆ ಮೂಲಕ ಸಂಪುಟದ ದರ್ಜೆಯ ಸ್ಥಾನ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆದರೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು 4 ಬಾರಿ ಶಾಸಕರಾಗಿದ್ದು, ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.
ಜಿಲ್ಲೆಯಿಂದ ಎನ್ ಎಸ್ ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಿದ್ದರಿಂದ ಹಂಪನಗೌಡ ಅವರಿಗೆ ಸಚಿವ ಸ್ಥಾನ ಕೈ ತಪ್ಪಿತ್ತು. ಆದರೆ ನಿಗಮ ಮಂಡಳಿಗೆ ನೇಮಕ ಮಾಡಿದರೆ ನಾನು ಅಧಿಕಾರ ವಹಿಸಿಕೊಳ್ಳುವುದಿಲ್ಲ ಎಂದು ಈಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಸದ್ಯ ಸಿಎಂ ಸಿದ್ದರಾಮಯ್ಯ ಅವರು ಮುಂದೆ ತಮಗೆ ಸಚಿವ ಸ್ಥಾನ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. 'ನಿಗಮ, ಮಂಡಳಿ ನನಗೆ ಬೇಡವೇ ಬೇಡ ಕೊಟ್ಟರೆ ಸಚಿವ ಸ್ಥಾನ ಕೊಡಿ. ನನ್ನ ಹಿರಿತನಕ್ಕೆ ಗೌರವ ಕೊಡಿ' ಎಂದು ರಾಯಚೂರಿನ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಪಟ್ಟು ಹಿಡಿದಿದ್ದಾರೆ.
ಅಧಿಕಾರ ಸ್ವೀಕರಿಸುವ ಮುನ್ನ ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಿ ಕೆಲ ಬೇಡಿಕೆ ಇವೆ. ಅವುಗಳು ಈಡೇರಿಸಿದ ಬಳಿಕ ನನಗೆ ನೀಡಿದ ನಿಗಮದ ಅಧಿಕಾರ ಸ್ವೀಕರಿಸುವೆ ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ನಾನು ನಿಗಮ ,ಮಂಡಳಿ ಅಧ್ಯಕ್ಷ ಸ್ಥಾನ ಕೇಳಿರಲಿಲ್ಲ. ಆದರೂ ನೀಡಿದ್ದಾರೆ ಎಂದು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಪ್ರತಿಕ್ರಿಯಿಸಿದರು. ಹೀಗಾಗಿ ಅವರು ಈ ಸ್ಥಾನವನ್ನು ಅಧಿಕಾರ ಸ್ವೀಕರಿಸುತ್ತಾರೋ ಅಥವಾ ಇಲ್ಲವೋ ಎಂಬುದು ಇನ್ನೂ ನಿಗೂಢವಾಗಿದೆ.
2ನೇ ಬಾರಿ ಶಾಸಕನಾದ ನನಗೆ ಈ ಅವಕಾಶ ದೊರೆತಿದೆ. ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವೆ ಎಂದು ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ್ ಹೇಳಿದರು.












Click it and Unblock the Notifications