ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಲೂ ಯೋಗ್ಯತೆ ಇಲ್ಲದ ಸರ್ಕಾರ- ಆರ್ ಅಶೋಕ್ ಕಿಡಿ
ರಾಯಚೂರು ಜನವರಿ 24: ರಾಯಚೂರಿನ ಕೆಲ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಬಾಡಿಗೆ ಬಾಕಿ ಉಳಿಸಿಕೊಂಡಿದ್ದರಿಂದ ಕಾರ್ಯಕರ್ತೆಯರು ತಾವೇ ಹಣವನ್ನು ಹೊಂದಿಸಿ ಬಾಡಿಗೆ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ ಕಾರಿದೆ.
ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ 'X' (ಹಿಂದಿನ ಟ್ವಿಟ್ಟರ್)ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಚೀಮಾರಿ ಹಾಕಿದ್ದಾರೆ.

'ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ, ಅಂಗನವಾಡಿ ಕಾರ್ಯಕರ್ತೆಯರು ಬಡ್ಡಿಗೆ ಸಾಲ ತಂದು ಕಟ್ಟಡದ ಬಾಡಿಗೆ ಕಟ್ಟುವ ಪರಿಸ್ಥಿತಿ ತಂದಿಟ್ಟಿದೆ. ಗ್ರಾಮೀಣ ಭಾಗದ ಬಡ ಕುಟುಂಬದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಅಂಗನವಾಡಿಯಲ್ಲಿ ಸಿಗುವ ಬಿಸಿಯೂಟ, ಪೌಷ್ಠಿಕ ಆಹಾರವೇ ಜೀವನಾಧಾರ. ಬಡವರ ಪಾಲಿನ ಆಸರೆಯಾದ ಅಂಗನವಾಡಿಗಳಿಗೆ ಬಾಡಿಗೆ ಕಟ್ಟಲೂ ಯೋಗ್ಯತೆ ಇಲ್ಲದ ನಿಮ್ಮ ಸರ್ಕಾರ ಇದ್ದರೆಷ್ಟು ಸತ್ತರೆಷ್ಟು ಸಿಎಂ ಸಿದ್ದರಾಮಯ್ಯ ನವರೇ' ಎಂದು ಆಕ್ರೋಶಗೊಂಡರು.
ರಾಯಚೂರಿನಲ್ಲಿ 2856 ಅಂಗನವಾಡಿ ಕೇಂದ್ರಗಳ ಪೈಕಿ ಒಟ್ಟು 808 ಬಾಡಿಗೆ ಕಟ್ಟಡಗಳ ಹಣ ಬಾಕಿ ಇರಿಸಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗೆ ಎಷ್ಟೇ ಗಮನ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೆ ಇಲ್ಲಿನ ಕಾರ್ಯಕರ್ತೆಯರೇ ಹಣವನ್ನು ಹೊಂದಿಸಿ ಬಾಡಿಗೆ ಕಟ್ಟಿತ್ತಿದ್ದಾರೆ. ರಾಜ್ಯ ಸರ್ಕಾರ ಇದಕ್ಕೆ ಹಣ ಪಾವತಿಸದ ಬೆನ್ನಲ್ಲೆ ಕಾರ್ಯಕರ್ತೆಯರು ಅಧಿಕಾರಿಗಳು ಸಾಲ ಮಾಡಿ ಬಾಡಿಗೆ ಕಟ್ಟಿತ್ತಿರುವುದು ವರದಿಯಾಗಿದೆ.
ಕೆಲವರು ಪತಿ ದುಡಿದ ಹಣದಲ್ಲಿ ಬಾಡಿಗೆ ತೀರುಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ನಗರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ತಿಂಗಳಿಗೆ 4000 ರೂ. ಬಾಡಿಗೆ ಕಟ್ಟಬೇಕು. ಇನ್ನೂ ಗ್ರಾಮೀಣ ಭಾಗದಲ್ಲಿರುವ ಅಂಗನವಾಡಿ ಕಟ್ಟಡಕ್ಕೆ 2000 ರೂ. ಬಾಡಿಗೆ ನೀಡಬೇಕು. ಆದರೆ ಕಳೆದ 6-8 ತಿಂಗಳಿಂದ ರಾಜ್ಯ ಸರ್ಕಾರ ಬಾಡಿಗೆ ಹಣ ನೀಡದೆ ಬಾಕಿ ಉಳಿಸಿಕೊಂಡಿದೆ. ಸರ್ಕಾರದ ಮೇಲೆ ಎಷ್ಟೇ ಒತ್ತಡ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಕಾರ್ಯಕರ್ತೆಯರು ಸಂಕಷ್ಟದಲ್ಲಿ ಇದ್ದಾರೆ.












Click it and Unblock the Notifications