Get Updates
Get notified of breaking news, exclusive insights, and must-see stories!

Raichur Elections : ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಜೆಪಿ - ಕಾಂಗ್ರೆಸ್‌ ಫೈಟ್‌; ಮತ್ತೊಮ್ಮೆ ಆಯ್ಕೆ ಆಗ್ತಾರಾ ಶಿವರಾಜ್‌

ಬಿಸಿಲ ನಾಡು, ಎಡೆದೊರೆಗಳ ನಾಡು ರಾಯಚೂರು ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ. ರಾಯಚೂರಿನ ಜಿಲ್ಲಾ ಕೇಂದ್ರವನ್ನು ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಹೊಂದಿದೆ. 35 ವಾರ್ಡ್‌ ಮತ್ತು 14 ಗ್ರಾಮಗಳನ್ನು ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಜಿಲ್ಲಾ ಕೇಂದ್ರವಾದರೂ ತಾಲೂಕು ಕೇಂದ್ರದಷ್ಟು ಕೂಡ ಅಭಿವೃದ್ಧಿ ಆಗಿಲ್ಲ ಎನ್ನುವುದು ಇಲ್ಲಿನ ಜನರ ಆರೋಪ.

ರಾಯಚೂರು ವಿಶ್ವವಿದ್ಯಾಲಯ, ರಾಯಚೂರು ಕೃಷಿ ವಿಶ್ವವಿದ್ಯಾಲಯ, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಹಾಗೂ ಮೆಡಿಕಲ್‌ ಕಾಲೇಜು ಕೂಡ ಇದೇ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿವೆ. ಇಲ್ಲಿಯೇ ಏಮ್ಸ್‌ ಆಸ್ಪತ್ರೆಯನ್ನು ಸ್ಥಾಪಿಸಬೇಕು ಎಂದು ಹೋರಾಟ ನಡೆಯುತ್ತಲೇ ಇದೆ. ನಗರ ಪ್ರದೇಶವನ್ನೇ ಹೆಚ್ಚು ಹೊಂದಿರುವ ಕ್ಷೇತ್ರ ಇದಾಗಿದ್ದು, ನಗರಕ್ಕೆ ಹೊಂದಿಕೊಂಡ ಕೆಲವು ಗ್ರಾಮಗಳು ಕ್ಷೇತ್ರಕ್ಕೆ ಒಳಪಡುವುದರಿಂದ ಕೃಷಿಗೆ ಪ್ರಾಮುಖ್ಯತೆ ಅಷ್ಟಕ್ಕಷ್ಟೆ. ತೆಲಂಗಾಣ ಪಕ್ಕದಲ್ಲೇ ಇರುವುದರಿಂದ ತೆಲುಗು ಭಾಷಿಕರು ಹೆಚ್ಚಿದ್ದು ಮತ್ತು ಉರ್ದು ಮಿಶ್ರಿತ ಕನ್ನಡ ಮಾತನಾಡುವವರು ಇದ್ದಾರೆ.

raichur constituency map

ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಇದ್ದು, ಪ್ರಮುಖವಾಗಿ ಭತ್ತ, ಈರುಳ್ಳಿ, ಹತ್ತಿ, ಶೇಂಗಾ, ಸೂರ್ಯಕಾಂತಿ ಉತ್ಪನ್ನಗಳ ವಹಿವಾಟು ಜೋರಾಗಿ ನಡೆಯುತ್ತದೆ. ಕೇವಲ ಕ್ಷೇತ್ರ, ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ರೈತರು ತಮ್ಮ ಉತ್ಪನ್ನಗಳನ್ನು ಇಲ್ಲಿಗೆ ತರುತ್ತಾರೆ. ರಾಯಚೂರಿನಲ್ಲಿ ಹತ್ತಿ ಜಿನ್ನಿಂಗ್‌ ಮತ್ತು ಕಂಪ್ರೆಸರ್‌ ಫ್ಯಾಕ್ಟರಿಗಳಿದ್ದು, ಜಿನ್ನಿಂಗ್‌ ಮಾಡಿದ ಬಹುತೇಕ ಹತ್ತಿ ತಮಿಳುನಾಡಿಗೆ ರವಾನೆಯಾಗುತ್ತದೆ. ಇಷ್ಟೆಲ್ಲಾ ವೈರುಧ್ಯಗಳಿರುವ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೈಪೋಟಿ ಇದ್ದು, ಜೆಡಿಎಸ್‌ ಅನ್ನು ಕಡೆಗಣಿಸುವಂತಿಲ್ಲ.

ಕ್ಷೇತ್ರದ ರಾಜಕೀಯ ಹಿನ್ನೆಲೆ!

ರಾಯಚೂರು ಜಿಲ್ಲಾ ಕೇಂದ್ರವಾಗಿರುವ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಬಿಜೆಪಿಯ ಡಾ ಶಿವರಾಜ್‌ ಪಾಟೀಲ್‌ ಶಾಸಕರಾಗಿದ್ದಾರೆ. ಅವರೇ 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ ಶಾಸಕರಾಗಿ ಆಯ್ಕೆಯಾಗಿದ್ದರು. ಮುಸ್ಲಿಮರ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೈಯದ್‌ ಯಾಸಿನ್‌ ಇದುವರೆಗೂ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೆ, 1972ರಿಂದ ಇಲ್ಲಿವರೆಗೂ 5 ಬಾರಿ ಮುಸ್ಲಿಮರೇ ಶಾಸಕರಾಗಿ ಆಯ್ಕೆಯಾಗಿರುವುದು ಕ್ಷೇತ್ರದ ವಿಶೇಷ.

s shivaraj patil mla

1994ರಿಂದಲೂ ಕಾಂಗ್ರೆಸ್‌ನಿಂದ ಸೈಯದ್‌ ಯಾಸಿನ್‌ ಅವರು ಸತತವಾಗಿ ಸ್ಪರ್ಧಿಸುತ್ತಾ ಬಂದಿದ್ದು, 1999 ಮತ್ತು 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2004ರಲ್ಲಿ ಬಿಜೆಪಿ ಇಲ್ಲಿ ಅಹುಜಾ ಪಾಪರೆಡ್ಡಿ ಅವರ ಮೂಲಕ ಖಾತೆ ತೆರೆಯಿತು. 1989 ಹಾಗೂ 1984ರಲ್ಲಿ ಜನತಾ ದಳದ ಎಂಎಸ್‌ ಪಾಟೀಲ್‌ ಅವರು ಇಲ್ಲಿಂದ ಶಾಸಕರಾಗಿ ಆಯ್ಕೆಯಾದರೆ, 2013ರಲ್ಲಿ ಡಾ ಶಿವರಾಜ್‌ ಪಾಟೀಲ್‌ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾದರು. ಆದರೆ, 2018ರಲ್ಲಿ ಬಿಜೆಪಿಗೆ ಬಂದ ಶಿವರಾಜ್‌ ಪಾಟೀಲ್‌ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

Raichur Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಡಾ. ಶಿವರಾಜ್ ಪಾಟೀಲ (ಬಿಜೆಪಿ) 56,511 ಸಯ್ಯದ್ ಯಾಸೀನ್ (ಕಾಂಗ್ರೆಸ್) 45,520
2013 ಡಾ.ಶಿವರಾಜ ಪಾಟೀಲ್ (ಜೆಡಿಎಸ್) 45,263 ಸೈಯದ್ ಯಾಸಿನ್(ಕಾಂಗ್ರೆಸ್) 37,392
2008 ಸೈಯದ್ ಯಾಸಿನ್ (ಕಾಂಗ್ರೆಸ್ ) 28,801 ಎಂ.ಈರಣ್ಣ ( ಜೆಡಿಎಸ್) 20,440

2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಡಾ ಶಿವರಾಜ್‌ ಪಾಟೀಲ್‌ 56,511 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಸೈಯದ್‌ ಯಾಸಿನ್‌ 45,520 ಮತಗಳನ್ನು ಪಡೆದು ಸುಮಾರು 11 ಸಾವಿರ ಮತಗಳಿಂದ ಸೋಲು ಅನುಭವಿಸಬೇಕಾಯಿತು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಹಾಂತೇಶ್‌ ಪಾಟೀಲ್‌ 7796 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈ ಸಲ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಫೈಟ್‌ ಇದ್ದು, ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ ಹಾಗೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ್‌ ರಾವ್‌ ಅವರ ಬಿಆರ್‌ಎಸ್‌ ಕೂಡ ಇಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

bjp jds congress logos

ಆಕಾಂಕ್ಷಿಗಳು ಯಾರಾರು?

ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಬಹುತೇಕ ಹಾಲಿ ಶಾಸಕ ಡಾ ಶಿವರಾಜ್‌ ಪಾಟೀಲ್‌ ಅವರಿಗೆ ಖಚಿತವಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡೇ ಇದ್ದು, ಮಾಜಿ ಶಾಸಕ ಸೈಯದ್ ಯಾಸಿನ್ ಅವರ ಪುತ್ರ ಸೈಯದ್ ಸೋಹೆಲ್, ಮಾಜಿ ಶಾಸಕ ಎನ್‌ಎಸ್ ಬೋಸರಾಜು ಅವರ ಪುತ್ರ ರವಿ ಬೋಸರಾಜು, ಮಾಜಿ ಶಾಸಕ ಬಸವರಾಜ್ ಪಾಟೀಲ್ ಇಟಗಿ ಸೇರಿ ಅನೇಕರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮುಸ್ಲಿಮರ ಪ್ರಾಬಲ್ಯ ಇರುವ ಕ್ಷೇತ್ರವಾದ್ದರಿಂದ ಮುಸ್ಲಿಮರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡುವ ಸಾಧ್ಯತೆ ಇದೆ. ರಾಯಚೂರು ನಗರದ ಜೆಡಿಎಸ್ ಟಿಕೆಟ್‌ಗಾಗಿ ರಾಮನಗೌಡ ಎಗನೂರು ಕಳೆದ ಒಂದು ವರ್ಷದಿಂದ ಸತತ ಪ್ರಯತ್ನ ಮಾಡುತ್ತಿದ್ದಾರೆ. ನಾನೇ ಜೆಡಿಎಸ್ ಅಭ್ಯರ್ಥಿ ಅಂತಾ ಹೇಳುತ್ತಾ ಓಡಾಡುತ್ತಿದ್ದಾರೆ.

ಜಾತಿ ಲೆಕ್ಕಾಚಾರ!

ರಾಯಚೂರು ನಗರ ಕ್ಷೇತ್ರದಲ್ಲಿ 90 ಸಾವಿರಕ್ಕೂ ಅಧಿಕ ಮುಸ್ಲಿಂ ಮತಗಳು ಇದ್ದು, ಗೆಲ್ಲಲು ಅವರೇ ನಿರ್ಣಾಯಕವಾಗಿದ್ದಾರೆ. ಬಳಿಕ ದಲಿತರ ಮತಗಳು, ಲಿಂಗಾಯತರು, ವೈಶ್ಯರು, ಮುನ್ನೂರು ಕಾಪು ಸಮುದಾಯದ ಮತಗಳು ಅಧಿಕವಾಗಿವೆ. ಈ ಹಿನ್ನೆಲೆ ಕಾಂಗ್ರೆಸ್‌ 1994ರಿಂದಲೂ ಸೈಯದ್‌ ಯಾಸಿನ್‌ ಅವರಿಗೆ ಟಿಕೆಟ್‌ ನೀಡುತ್ತಾ ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+