
ಬಿಜೆಪಿ ಜೊತೆ ಮೈತ್ರಿ ಅಂತ್ಯ :ರಾಜ್ಯಪಾಲ ಫಾಗು ಚೌಹಾಣ್ ಭೇಟಿ ಮಾಡಲಿರುವ ನಿತೀಶ್ ಕುಮಾರ್
ಪಾಟ್ನಾ, ಆಗಸ್ಟ್ 9: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದು ಮೈತ್ರಿ ಸರ್ಕಾರವನ್ನು ಅಂತ್ಯಗೊಳಿಸಲಿದ್ದಾರೆ. ಅದರಂತೆ ಸಂಜೆ 4 ಗಂಟೆಗೆ ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಬಿಹಾರ ಸಿಎಂ ಭೇಟಿ ಮಾಡುವುದು ಖಚಿತವಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಶಾಸಕರೊಂದಿಗೆ ಸಭೆ ನಡೆಸಿ ಮೈತ್ರಿ ಮುಂದುವರಿಸಬೇಕೆ ಬೇಡವೆ ಎಂದು ನಿರ್ಧರಿಸಿದ್ದಾರೆ. ಸಭೆಯಲ್ಲಿ ಮೈತ್ರಿಯನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಸಂಯುಕ್ತ ಜನತಾ ದಳವನ್ನು ವಿಭಜಿಸಲು ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ ಎಂಬ ನಿತೀಶ್ ಕುಮಾರ್ ಅವರ ಆತಂಕದಲ್ಲೇ ಎರಡು ಪಕ್ಷಗಳ ನಡುವಿನ ಉದ್ವಿಗ್ನತೆ ಏರ್ಪಟ್ಟಿತ್ತು. ಈಗ ಬಿಜೆಪಿ ಜೊತೆಗಿನ ಸಂಬಂಧಕ್ಕೆ ಎಳ್ಳು-ನೀರು ಬಿಟ್ಟು ಪಕ್ಷ ಉಳಿಸಿಕೊಳ್ಳಲು ನಿತೀಶ್ ಕುಮಾರ್ ಮುಂದಾಗಿದ್ದಾರೆ.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ನಿತೀಶ್ ಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಆರ್‌ಜೆಡಿ-ಜೆಡಿಯು ನಾಯಕರು ಒಟ್ಟಾಗಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರನ್ನು ಮನವಿ ಮಾಡುವ ಸಾಧ್ಯತೆ ಇದೆ.

ಆರ್‌ಸಿಪಿ ಸಿಂಗ್ ವಿರುದ್ಧಆರೋಪ
ಜೆಡಿಯು ಪಕ್ಷದ ಮಾಜಿ ನಾಯಕ ಆರ್‌ಸಿಪಿ ಸಿಂಗ್ ಅಮಿತ್ ಶಾ ಅವರ ಪ್ರತಿನಿಧಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಆರೋಪಿಸಿದ್ದಾರೆ. ಭ್ರಷ್ಟಾಚಾರದ ಆರೋಪದ ಬಗ್ಗೆ ಜೆಡಿಯು ವಿವರಣೆ ಕೇಳಿದ ನಂತರ ಆರ್‌ಸಿಪಿ ಸಿಂಗ್ ಜೆಡಿಯು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದರು.
2017 ರಲ್ಲಿ, ಆರ್‌ಸಿಪಿ ಸಿಂಗ್ ನಿತೀಶ್ ಕುಮಾರ್ ಅವರ ಪಕ್ಷದ ಪ್ರತಿನಿಧಿಯಾಗಿ ಕೇಂದ್ರ ಸಂಪುಟಕ್ಕೆ ಸೇರಿದರು. ಒಂದೇ ಒಂದು ಕ್ಯಾಬಿನೆಟ್ ಸ್ಥಾನ ನೀಡಿದ್ದಕ್ಕೆ ನಿತೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಸಚಿವ ಸಂಪುಟದಲ್ಲಿ ಜೆಡಿಯು ಪ್ರತಿನಿಧಿಯಾಗಿ ಸಚಿವನಾಗಲು ನನಗೆ ಮಾತ್ರ ಅರ್ಹತೆ ಇದೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ನಿತೀಶ್ ಕುಮಾರ್ ಅವರಿಗೆ ಆರ್‌ಸಿಪಿ ಸಿಂಗ್ ತಿಳಿಸಿದ್ದಾರೆ ಎಂದು ಅವರ ಹತ್ತಿರದ ಸಹಾಯಕರು ಹೇಳಿದ್ದಾರೆ. "ನಮ್ಮ ಪಕ್ಷದ ವಿಷಯಗಳನ್ನು ಅಮಿತ್ ಶಾ ನಿರ್ಧರಿಸುತ್ತಾರೆಯೇ?" ಎಂದು ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಕಾ ಲಲನ್ ಸಿಂಗ್ ಕೋಪಗೊಂಡಿದ್ದರು.

ಜೆಡಿಯುಗೆ ಬೆಂಬಲ ಎಂದ ಆರ್‌ಜೆಡಿ
ನಿತೀಶ್ ಕುಮಾರ್ ಅವರು ಬಿಜೆಪಿಯಿಂದ ಹೊರನಡೆದರೆ ನಮ್ಮ ಬೆಂಬಲವಿದೆ ಎಂದು ಆರ್‌ಜೆಡಿ ಹೇಳಿದೆ. ಬಿಹಾರದ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ರಾಷ್ಟ್ರೀಯ ಜನತಾ ದಳ ಅಥವಾ ಆರ್‌ಜೆಡಿ ಬಿಹಾರ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಮಂಗಳವಾರ ಸಭೆ ನಡೆಸಿದೆ. ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಪಕ್ಷದ ನೇತೃತ್ವ ವಹಿಸಿದ್ದಾರೆ.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ನಿತೀಶ್ ಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲಿದ್ದಾರೆ. ನಂತರ 160 ಶಾಸಕರು ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಸಂಜೆ ಬಿಜೆಪಿ ನಾಯಕರ ಸಭೆ
ಮಂಗಳವಾರ ಸಂಜೆ ಪಾಟ್ನಾದಲ್ಲಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕೋರ್ ಸಭೆ ಕರೆಯಲಾಗಿದೆ ಜೆಡಿಯು ಮತ್ತು ಆರ್‌ಜೆಡಿ ಸಮಾನಾಂತರ ಸಭೆಗಳು ನಡೆಯುತ್ತಿದ್ದು, ಸಂಜೆ 5 ಗಂಟೆಗೆ ಪಾಟ್ನಾದ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದೆ.
ಬಿಹಾರ ಬಿಜೆಪಿ ನಾಯಕ ಬಿಹಾರದಲ್ಲಿ ಜೆಡಿಯು ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ಸಾಧ್ಯತೆಯ ವರದಿಗಳ ಮೇಲೆ ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ, ಬಿಹಾರದ ಬಿಜೆಪಿ ನಾಯಕರೊಬ್ಬರು ನಿತೀಶ್ ಕುಮಾರ್ ನಿರ್ಧಾರಕ್ಕಾಗಿ ಪಕ್ಷವು ಕಾಯುತ್ತಿದೆ ಎಂದು ಹೇಳಿದರು. "ನಾನೇಕೆ ರಾಜೀನಾಮೆ ನೀಡಬೇಕು? ನಿತೀಶ್ ಕುಮಾರ್ ಮೊದಲ ಹೆಜ್ಜೆ ಇಡಲು ನಾವು ಕಾಯುತ್ತಿದ್ದೇವೆ, ನಂತರ ನಾವು ಒಂದು ಹೆಜ್ಜೆ ಇಡುತ್ತೇವೆ" ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ನಿತೀಶ್ ಕುಮಾರ್ ಗೆ ಬೆಂಬಲ ಕೊಡ್ತೀವಿ ಎಂದ ಕಾಂಗ್ರೆಸ್
ನಿತೀಶ್ ಕುಮಾರ್ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಆದರೆ ಮಹಾಘಟಬಂಧನ್ ಸಭೆ ಮುಗಿದ ನಂತರ ಉಳಿದದ್ದನ್ನು ಖಚಿತಪಡಿಸಬಹುದು ಎಂದು ಬಿಹಾರ ಕಾಂಗ್ರೆಸ್ ನಾಯಕ ಅಜಿತ್ ಶರ್ಮಾ ಹೇಳಿದ್ದಾರೆ.
"ನಿತೀಶ್ ಕುಮಾರ್ ಬಂದರೆ ನಾವು ಅವರನ್ನು ಸ್ವಾಗತಿಸುತ್ತೇವೆ, ಅವರು ಬಂದರೆ ನಾವು ಬೆಂಬಲಿಸುತ್ತೇವೆ. ಮಹಾಘಟಬಂಧನ್ ಸಭೆ ನಡೆಸಲಾಗುತ್ತಿದೆ. ನಿತೀಶ್ ಕುಮಾರ್ ಅವರನ್ನು ಸಿಎಂ ಎಂದು ಪರಿಗಣಿಸಿ ಬೆಂಬಲಿಸುವ ನಿರ್ಧಾರ ತೆಗೆದುಕೊಳ್ಳಬೇಕು. ಸಭೆಯ ನಂತರವಷ್ಟೇ ಎಲ್ಲವನ್ನೂ ಹೇಳಬಹುದು" ಎಂದು ಅಜಿತ್ ಶರ್ಮಾ ಹೇಳಿದ್ದಾರೆ.