ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಕ್ಯಾಪ್ಟನ್ ಸತೀಶ್ ಶರ್ಮಾ ನಿಧನ
ಪಣಜಿ, ಫೆಬ್ರವರಿ 18: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಕ್ಯಾಪ್ಟನ್ ಸತೀಶ್ ಶರ್ಮಾ (73) ಅವರು ಬುಧವಾರ ಗೋವಾದಲ್ಲಿ ನಿಧನರಾದರು. ಮೂರು ಬಾರಿ ಲೋಕಸಭೆ ಸಂಸದರಾಗಿದ್ದ ಅವರು ರಾಯ್ ಬರೇಲಿ ಮತ್ತು ಅಮೇಥಿಯಿಂದ ಸ್ಪರ್ಧಿಸಿದ್ದರು. ಕೆಲವು ಸಮಯದಿಂದ ಕ್ಯಾನ್ಸರ್ ಹಾಗೂ ಇತರೆ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. ಪತ್ನಿ, ಮಗ ಹಾಗೂ ಮಗಳನ್ನು ಅವರು ಅಗಲಿದ್ದಾರೆ.
ಗಾಂಧಿ ಕುಟುಂಬಕ್ಕೆ ಬಹಳ ನಿಷ್ಠರಾಗಿದ್ದ ಶರ್ಮಾ ಅವರು, 1993 ರಿಂದ 1996ರ ಅವಧಿಯಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾಗಿದ್ದರು.
ನಿವೃತ್ತ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್ ನಿಧನ
ಆಂಧ್ರಪ್ರದೇಶದ ಸಿಕಂದರಾಬಾದ್‌ನಲ್ಲಿ 1947ರ ಅಕ್ಟೋಬರ್ 11ರಂದು ಜನಿಸಿದ ಶರ್ಮಾ, ರಾಜೀವ್ ಗಾಂಧಿ ಅವರ ಒತ್ತಾಸೆಯಂತೆ 1983ರಲ್ಲಿ ರಾಜಕೀಯ ಸೇರ್ಪಡೆಯಾಗುವ ಮುನ್ನ ವೃತ್ತಿಪರ ಕಮರ್ಷಿಯಲ್ ಪೈಲಟ್ ಆಗಿದ್ದರು. ರಾಜೀವ್ ಗಾಂಧಿ ಹತ್ಯೆ ಬಳಿಕ 1991ರಲ್ಲಿ ಅಮೇಥಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
1998ರಿಂದ 2004ರವರೆಗೂ ಅವರು ರಾಯ್ ಬರೇಲಿ ಸಂಸದರಾಗಿದ್ದರು. ಬಳಿಕ ತಮ್ಮ ಕ್ಷೇತ್ರವನ್ನು ಸೋನಿಯಾ ಗಾಂಧಿ ಅವರಿಗಾಗಿ ತೊರೆದಿದ್ದರು. ನಂತರ 2004ರ ಜುಲೈನಿಂದ 2016ರವರೆಗೂ ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.