ಗೋವಾದಲ್ಲಿ 650 ಕೋಟಿ ರೂ ಮೌಲ್ಯದ ಯೋಜನೆ ಉದ್ಘಾಟನೆ, ಶಂಕುಸ್ಥಾಪನೆಗೈದ ಮೋದಿ
ಪಣಜಿ, ಡಿಸೆಂಬರ್ 19: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೋವಾದಲ್ಲಿ ಸುಮಾರು 600 ಕೋಟಿ ಮೌಲ್ಯದ ಅಭಿವೃದ್ದಿ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದು, ಶಂಕುಸ್ಥಾಪನೆಯನ್ನು ಕೂಡಾ ಮಾಡಿದ್ದಾರೆ. ಜೊತೆಗೆ ನವೀಕರಿಸಿದ ಫೋರ್ಟ್ ಅಗುಡಾ ಜೈಲ್ ಮ್ಯೂಸಿಯಂ ಅನ್ನು ಕೂಡಾ ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ.
ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ವಿಮೋಚನೆಗೊಳಿಸಿದ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡ 'ಆಪರೇಷನ್ ವಿಜಯ್' ಯಶಸ್ಸನ್ನು ಸ್ಮರಿಸಲು ಪ್ರತಿ ವರ್ಷ ಡಿಸೆಂಬರ್ 19 ರಂದು ಗೋವಾ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಮಾರು 600 ಕೋಟಿ ಮೌಲ್ಯದ ಅಭಿವೃದ್ದಿ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ. ಮುಂದಿನ ವರ್ಷ ಗೋವಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಈ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮಾಡಲಾಗಿದೆ. ಈ ಹಿನ್ನೆಲೆಯಿಂದ ಈ ವಿಚಾರವು ಇನ್ನಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್, ನೂತನ ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆ, ಮೋಪಾ ವಿಮಾನ ನಿಲ್ದಾಣದಲ್ಲಿ ನಾಗರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ದಬೋಲಿಮ್-ನವೇಲಿಮ್, ಮರ್ಗೋವ್‌ನಲ್ಲಿ ಅನಿಲ ಅಳವಡಿಕೆ ಉಪ ಕೇಂದ್ರ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಗೋವಾದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್‌ನ ಭಾರತ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಕಾನೂನು ಶಿಕ್ಷಣ ಮತ್ತು ಸಂಶೋಧನೆಗೆ ಅಡಿಪಾಯ ಕೂಡಾ ಪ್ರಧಾನಿ ಮೋದಿ ಹಾಕಿದ್ದಾರೆ.

ಈ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ದೇಶದ ಇತರೆ ದೊಡ್ಡ ಭಾಗಗಳು ಮೊಘಲರ ಆಳ್ವಿಕೆಯಲ್ಲಿ ಇದ್ದ ಸಂದರ್ಭದಲ್ಲಿ ಗೋವಾ ಪೋರ್ಚುಗಲ್ ಅಧೀನಕ್ಕೆ ಹೋಗಿತ್ತು. ಅದಾದ ಬಳಿಕ ಈ ದೇಶ ಎಷ್ಟೊಂದು ರಾಜಕೀಯ ಬೆಳವಣಿಗೆಗಳನ್ನು ಕಂಡಿದೆ. ಎಷ್ಟು ಅಧಿಕಾರವನ್ನು ನೋಡಿದೆ. ಆದರೆ ಇಷ್ಟು ಸಮಯ ಕಳೆದರೂ ಕೂಡಾ ಗೋವಾವು ತನ್ನ ಭಾರತೀಯತೆಯನ್ನು ಮರೆತಿಲ್ಲ. ಭಾರತವು ತನ್ನ ಗೋವಾವನ್ನು ಮರೆತಿಲ್ಲ. ಇದು ಕಾಲ ನಂತರದಲ್ಲಿ ಬಲವಾಗಿ ಬೆಳೆದ ಸಂಬಂಧವಾಗಿದೆ," ಎಂದಿದ್ದಾರೆ.
ಮನೋಹರ್ ಪರಿಕ್ಕರ್‌ರನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ
ಇನ್ನು ಗೋವಾವನ್ನು ತಲುಪಿದ ಬಳಿಕ ಪ್ರಧಾನಿ ಮೋದಿ ತಮ್ಮ ಮಾಜಿ ಸಹೋದ್ಯೋಗಿ ಮನೋಹರ್ ಪರಿಕ್ಕರ್ ಅವರನ್ನು ನೆನಪಿಸಿಕೊಂಡಿದ್ದಾರೆ. "ನನ್ನ ಅವಿಭಾಜ್ಯ ಪಾಲುದಾರ ಮನೋಹರ್ ಪರಿಕರ್ ಜಿ ಅವರನ್ನೂ ನೆನಪಿಸಿಕೊಳ್ಳುತ್ತೇನೆ, ಗೋವಾದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆದವರು ಮನೋಹರ್ ಪರಿಕ್ಕರ್. ಗೋವಾ ಸಾಮರ್ಥ್ಯವನ್ನು ಮನೋಹರ್ ಪರಿಕ್ಕರ್ ವಿಸ್ತರಣೆ ಮಾಡಿದ್ದಾರೆ. ಮನೋಹರ್ ಜಿ ಅವರೊಳಗೆ ದೇಶವು ಗೋವಾವನ್ನು ನೋಡುತ್ತಿತ್ತು. ಓರ್ವ ವ್ಯಕ್ತಿ ತನ್ನ ದೇಶಕ್ಕೆ ತನ್ನ ಉಸಿರು ಇರುವವರೆಗೂ ಹೇಗೆ ಬದ್ಧನಾಗಿ ಇರುತ್ತಾನೆ ಎಂಬುವುದಕ್ಕೆ ಮನೋಹರ್ ಜಿ ಜೀವನವೇ ಸಾಕ್ಷಿ," ಎಂದು ಕೂಡಾ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
"ಗೋವಾ ಮುಕ್ತಿ ವಿಮೋಚನಾ (Goa Liberation Day) ಸಮಿತಿಯ ಸತ್ಯಾಗ್ರಹದಲ್ಲಿ 31 ಸತ್ಯಾಗ್ರಹಿಗಳು ಪ್ರಾಣ ಕಳೆದುಕೊಳ್ಳಬೇಕಾಯಿತು," ಎಂದು ಹೇಳಿದ ಪ್ರಧಾನಿ ಮೋದಿ ಗೋವಾ ವಿಮೋಚನಾ ಚಳವಳಿಯ ಬಗ್ಗೆ ವಿವರಣೆ ನೀಡಿದ್ದಾರೆ.
ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ಮುಕ್ತಗೊಳಿಸಿದ ಭಾರತೀಯ ಸಶಸ್ತ್ರ ಪಡೆಗಳ ಸ್ಮರಣಾರ್ಥವಾಗಿ ಪ್ರಧಾನಮಂತ್ರಿ ವಿಶೇಷ ಕವರ್ ಮತ್ತು ಸ್ಪೆಶಲ್ ಕ್ಯಾನ್ಸಲೇಷನ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಇತಿಹಾಸದ ಈ ವಿಶೇಷ ಸಂಚಿಕೆಯನ್ನು ವಿಶೇಷ ಮುಖಪುಟದಲ್ಲಿ ತೋರಿಸಲಾಗಿದೆ, ಆದರೆ ಸ್ಪೆಶಲ್ ಕ್ಯಾನ್ಸಲೇಶನ್ ಭಾರತೀಯ ನೌಕಾ ನೌಕೆ ಗೋಮಾಂತಕ್‌ನಲ್ಲಿ ಯುದ್ಧ ಸ್ಮಾರಕವನ್ನು ಚಿತ್ರಿಸುತ್ತದೆ, ಇದನ್ನು ಏಳು ಯುವ ಧೀರ ನಾವಿಕರು ಮತ್ತು "ಆಪರೇಷನ್ ವಿಜಯ್" ನಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಇತರ ಸಿಬ್ಬಂದಿಗಳ ನೆನಪಿಗಾಗಿ ನಿರ್ಮಿಸಲಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications