ಗೋವಾದಲ್ಲಿ ಎಚ್‌ಡಿಕೆ ಸರಳವಾಗಿ ಹುಟ್ಟುಹಬ್ಬ ಆಚರಣೆ
ಬೆಂಗಳೂರು, ಡಿಸೆಂಬರ್ 15: ನಾಳೆ 61ನೇ ವಸಂತಕ್ಕೆ ಕಾಲಿಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗೋವಾದಲ್ಲಿ ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿ ಕೊಳ್ಳಲಿದ್ದಾರೆ.
ಕಳೆದ ಶುಕ್ರವಾರವೇ ಕುಟುಂಬದ ಸದಸ್ಯರು ಹಾಗೂ ಶಾಸಕರೊಂದಿಗೆ ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಕುಮಾರಸ್ವಾಮಿ 60ನೇ ವರ್ಷದ ಷಷ್ಠಬ್ಧಿ ಆಚರಿಸಿಕೊಂಡಿದ್ದಾರೆ. ತಂದೆ ಎಚ್ ಡಿ ದೇವೇಗೌಡ, ತಾಯಿ ಚೆನ್ನಮ್ಮ ಹಾಗೂ ಸಹೋದರಿಯರು, ಸಹೋದರರು, ಆಪ್ತರ ಸಮ್ಮುಖದಲ್ಲಿ ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ದಂಪತಿಯ ಷಷ್ಟಿಪೂರ್ತಿ ಸಮಾರಂಭ ನಡೆದಿದೆ.


ಕೆಲಕಾಲ ಗೋವಾದಲ್ಲಿಯೆ ಇರಲಿದ್ದಾರೆ ಕುಮಾರಸ್ವಾಮಿ
ಕಳೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಕುಮಾರಸ್ವಾಮಿ ಸತತವಾಗಿ ಎಲ್ಲ 15 ಕ್ಷೇತ್ರಗಳಲ್ಲಿ ಸಂಚಾರ ಮಾಡಿ, ಪ್ರಚಾರ ಮಾಡಿದ್ದರು. ಇದರಿಂದ ಬಳಲಿದ್ದರಿಂದ ವಿಶ್ರಾಂತಿ ಮಾಡುವಂತೆ ವೈದ್ಯರು ಸೂಚಿಸಿದ್ದರು. ಜೊತೆಗೆ ರಾಜ್ಯದ ಜನತೆಯನ್ನು ಕಾಡಿದ ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಎಚ್‌ಡಿಕೆ ತೀರ್ಮಾನಿಸಿದ್ದರು. ಬೆಂಗಳೂರಿನಲ್ಲಿ ಇದ್ದರೆ ಪಕ್ಷದ ನಾಯಕರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅಭಿನಂದಿಸಲು ಬರುತ್ತಿದ್ದರು.
ಹೀಗಾಗಿ ಕುಮಾರಸ್ವಾಮಿ ಗೊವಾಕ್ಕೆ ತೆರಳಿದ್ದಾರೆ. ಇನ್ನೂ ಒಂದು ವಾರ ವಿಶ್ರಾಂತಿ ಮಾಡುವಂತೆ ವೈದ್ಯರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸೂಚಿಸಿರುವುದರಿಂದ ಕುಮಾರಸ್ವಾಮಿ ಗೋವಾದಲ್ಲಿಯೆ ಇರಲಿದ್ದಾರೆ. ಜೊತೆಗೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಅಲ್ಲಿಯೆ ಇರಲಿದ್ದಾರೆ. ಗೋವಾದಿಂದ ಹಿಂದಿರುಗಿದ ಬಳಿಕ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಜೊತೆಗೆ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿ ತೋರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ.











Click it and Unblock the Notifications