ತೇಜಪಾಲ್ ಖುಲಾಸೆ ಪ್ರಶ್ನಿಸಿ ಗೋವಾ ಸರ್ಕಾರದಿಂದ ಮೇಲ್ಮನವಿ
ಗೋವಾ, ಮೇ 26: ತಮ್ಮ ಸಂಸ್ಥೆಯ ಮಹಿಳಾ ಸಹೋದ್ಯೋಗಿ ಅಸಭ್ಯವಾಗಿ ನಡೆದುಕೊಂಡ ಆರೋಪದಿಂದ ಖ್ಯಾತ ಪತ್ರಕರ್ತ, ತೆಹಲ್ಕಾ ಸಹ ಸಂಸ್ಥಾಪಕ, ಸಂಪಾದಕ ತರುಣ್ ತೇಜಪಾಲ್ ಖುಲಾಸೆಗೊಂಡಿದ್ದಾರೆ. ಸೆಷನ್ಸ್ ನ್ಯಾಯಾಲಯದಿಂದ ಮೇ 21ರಂದು ನೀಡಿದ ಆದೇಶವನ್ನು ಗೋವಾ ಸರ್ಕಾರ ಪ್ರಶ್ನಿಸಲು ಮುಂದಾಗಿದೆ.
ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ನಿರ್ದೋಷಿ ಎಂದು ಘೋಷಿಸಿದ್ದ ಗೋವಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದೆ. ಗೋವಾದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಕ್ಷಮಾ ಜೋಶಿ ಅವರು ತೇಜ್‌ಪಾಲ್ ಪರ ಆದೇಶ ನೀಡಿದ್ದರು.
ಈ ಪ್ರಕರಣ ಬೆಳಕಿಗೆ ಬಂದ ಬಳಿಕ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆ ತೊರೆದಿದ್ದರು. ನಂತರ ಅವರನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಅಮಾನತು ಮಾಡಲಾಗಿತ್ತು. 2013ರ ಲೈಂಗಿಕ ಕಿರುಕುಳ ಪ್ರಕರಣದಿಂದ ಮುಕ್ತಿ ಬಯಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಲು ನಿರಾಕರಿಸಿರುವ ಸುಪ್ರೀಂಕೋರ್ಟ್, " ತೇಜಪಾಲ್ ವಿರುದ್ಧದ ಆರೋಪ ಗಂಭೀರವಾಗಿದೆ ಹಾಗೂ ಸಂತ್ರಸ್ತೆಯ ಖಾಸಗಿತನ ಮೇಲಿನ ಆಕ್ರಮಣವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.

2013ರಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗೋವಾದಲ್ಲಿ ತೇಜಪಾಲ್ ಹಾಗೂ ಕಿರಿಯ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಮೂರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ತನಗಾದ ಕಿರುಕುಳ ಬಗ್ಗೆ ಖಾಸಗಿ ಮಾಧ್ಯಮವೊಂದರಲ್ಲಿ ಮಹಿಳಾ ಉದ್ಯೋಗಿ ದುಃಖ ತೋಡಿಕೊಂಡಿದ್ದರು. ಗೋವಾದಲ್ಲಿ ಈ ಘಟನೆ ನಡೆದಿದ್ದರಿಂದ ಪಣಜಿ ಪೊಲೀಸರು ತೇಜ್ ಪಾಲ್ ವಿರುದ್ಧ ಐಪಿಸಿ ಸೆಕ್ಷನ್ 354, 354 ಎ, 341, 342, 276, 376(2)(ಎಫ್), 376(2)(ಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. 2013ರ ನವೆಂಬರ್‌ನಲ್ಲಿ ಬಂಧಿತರಾಗಿದ್ದ ತೇಜ್‌ಪಾಲ್ ಅವರು 2014ರ ಜುಲೈನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಮೇಲ್ಮನವಿ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಅಡ್ವೋಕೇಟ್ ಜನರಲ್ ದೇವಿದಾಸ್ ಪಂಗಂ, ಬಾಂಬೆ ಹೈಕೋರ್ಟಿನ ಗೋವಾ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ವಿಚಾರಣೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡಾ ಈ ಹಿಂದೆ ತಮ್ಮ ಸರ್ಕಾರ ಈ ಆದೇಶದ ವಿರುದ್ಧ ಕಾನೂನು ಹೋರಾಟ ಮುಂದುವರೆಸುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications