ಗೋವಾ ಫಲಿತಾಂಶ; ದೆಹಲಿ, ಮುಂಬೈನಲ್ಲಿ ಸಿದ್ಧವಾಗುತ್ತಿದೆ ತಂತ್ರ!
ಪಣಜಿ, ಮಾರ್ಚ್ 09; ಗೋವಾದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆದಿತ್ತು. ಗುರುವಾರ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೋತ್ತರ ಫಲಿತಾಂಶಗಳು ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಹೇಳಿವೆ. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ತಂತ್ರಗಳನ್ನು ರಚನೆ ಮಾಡುತ್ತಿವೆ. ಗೋವಾದಲ್ಲಿ ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 21. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಮತ್ತು ಬಿಜೆಪಿ 14 ರಿಂದ 17 ಸ್ಥಾನ ಪಡೆಯಬಹುದು ಎಂದು ಅಂದಾಜಿಸಿವೆ.
ಎಎಪಿ 2 ರಿಂದ 4, ಇತರರು 3 ರಿಂದ 6 ಮತ್ತು ಟಿಎಂಸಿ 2-4 ಸ್ಥಾನಗಳಲ್ಲಿ ಜಯಗಳಿಸಬಹುದು ಸಮೀಕ್ಷೆಗಳು ಹೇಳಿವೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಚಿಕ್ಕಪುಟ್ಟ ಪಕ್ಷಗಳು, ಪಕ್ಷೇತರರು ಕಿಂಗ್ ಮೇಕರ್ ಆಗಲಿದ್ದಾರೆ. ಅತಂತ್ರ ಫಲಿತಾಂಶ ಬರಲಿದೆ ಎಂದು ಅಂದಾಜಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿದೆ.

ಮೋದಿ, ಸಾವಂತ್ ಭೇಟಿ; ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಂಗಳವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ಪ್ರತಿ ಕ್ಷೇತ್ರದ ಚುನಾವಣಾ ಚಿತ್ರಣದ ಬಗ್ಗೆ ವಿವರಣೆ ನೀಡಿ, ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಭೇಟಿ ಬಳಿಕ ಮಾತನಾಡಿದ ಪ್ರಮೋದ್ ಸಾವಂತ್, "ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಗೋವಾ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.
ಮುಂಬೈನಲ್ಲಿ ಸಭೆ; ಪ್ರಮೋದ್ ಸಾವಂತ್ ಮುಂಬೈನಲ್ಲಿ ಗೋವಾ ಚುನಾವಣಾ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಜೊತೆ ಸಭೆ ನಡೆಸಿದರು. ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದರು. ರಾಜ್ಯದಲ್ಲಿ ಎಂಜಿಪಿ ಟಿಎಂಸಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ.
ಎಂಜಿಪಿಯ ರಾಮಕೃಷ್ಣ ಧವಳಿಕರ್ ಜೊತೆ ಕೆಲವು ದಿನಗಳ ಹಿಂದೆ ದೇವೇಂದ್ರ ಫಡ್ನವೀಸ್ ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ಮಾಡಿದ್ದಾರೆ.
ಮಂಗಳವಾರ ಕಾಂಗ್ರೆಸ್ ನಾಯಕರ ಜೊತೆಗಿನ ಸಭೆ ಬಳಿಕ ಮಾತನಾಡಿದ ರಾಮಕೃಷ್ಣ ಧವಳಿಕರ್, "ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಗೋವಾ ಜನರ ಹಿತ ಕಾಪಾಡುವ ಪಕ್ಷಕ್ಕೆ ನಾವು ಬೆಂಬಲ ನೀಡಲಿದ್ದೇವೆ" ಎಂದು ಹೇಳಿದ್ದಾರೆ.
ಗುರುವಾರ ಮಧ್ಯಾಹ್ನ 4 ಗಂಟೆಗೆ ಎಂಜಿಪಿ ಮಹತ್ವದ ಸಭೆ ಕರೆದಿದೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂದು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಯಾರು ಎಷ್ಟು ಸೀಟು ಗೆಲ್ಲಲಿದ್ದಾರೆ? ಎಂಬುದು ನಿರ್ಣಾಯಕವಾಗಲಿದೆ.
ಕಾಂಗ್ರೆಸ್, ಬಿಜೆಪಿ ಸಿದ್ಧತೆ; ಗೋವಾದಲ್ಲಿ ಅತಂತ್ರ ಫಲಿತಾಂಶ ಬಂದರೆ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಸಿದ್ಧವಾಗಿವೆ. 2017ರ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ಬಿಜೆಪಿ 13 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಪಕ್ಷ ಗೋವಾ ಫಾರ್ವರ್ಡ್ ಪಕ್ಷ, ಪಕ್ಷೇತರ ಅಭ್ಯರ್ಥಿಗಳ ಸಹಾಯರಿಂದ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತ್ತು.
ಚುನಾವಣೆಯಲ್ಲಿ 17 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾದರೂ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿತ್ತು. ಆದರೆ ಕಳೆದ ಬಾರಿಯ ಚುನಾವಣೆ ತಪ್ಪನ್ನು ಈ ಬಾರಿ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಫಲಿತಾಂಶದ ಚಿತ್ರಣ ಸಿಗುತ್ತಿದ್ದಂತೆಯೇ ಮುಂದಿನ ತೀರ್ಮಾನ ಕೈಗೊಳ್ಳಲು ನಾಯಕರನ್ನು ಗೋವಾಕ್ಕೆ ಕಳಿಸಿದೆ.












Click it and Unblock the Notifications