ಗೋವಾ ಅಂತಿಮ ಫಲಿತಾಂಶ; ಬಿಜೆಪಿಗೆ ಪಕ್ಷೇತರರ ಬೆಂಬಲ
ಪಣಜಿ, ಮಾರ್ಚ್ 11; 40 ಸದಸ್ಯ ಬಲದ ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಫೆಬ್ರವರಿ 14ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಪಡೆಯುವ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ ಸಿಕ್ಕಿಲ್ಲ.
ಗೋವಾದಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 21. ಚುನಾವಣೆಯಲ್ಲಿ ಬಿಜೆಪಿ 20, ಕಾಂಗ್ರೆಸ್ 11, ಎಎಪಿ 2, ಎಂಜಿಪಿ 2, ಗೋವಾ ಫಾರ್ವರ್ಡ್ ಪಾರ್ಟಿ 1, ಆರ್‌ಜಿಪಿ 1 ಮತ್ತು ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮೂವರು ಪಕ್ಷೇತರರು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಟಿಎಂಸಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ (ಎಂಜಿಪಿ) ಎರಡು ಕ್ಷೇತ್ರದಲ್ಲಿ ಜಯಗಳಿಸಿದೆ. ಆದರೆ ಚುನಾವಣೆ ಘೋಷಣೆಯಾದ ಬಳಿಕ ಪಕ್ಷ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದೆ.
ಮೂವರು ಪಕ್ಷೇತರರು ಮತ್ತು ಎಂಜಿಪಿಯ ಇಬ್ಬರು ಶಾಸಕರು ಸೇರಿ ಬಿಜೆಪಿಯ ಬಲ 25ಕ್ಕೆ ಏರಿಕೆಯಾಗಿದೆ. ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ಸರ್ಕಾರ ರಚನೆಗೆ ಬೆಂಬಲ ನೀಡಿದ ಪಕ್ಷೇತರರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.

ದೇವೇಂದ್ರ ಫಡ್ನವೀಸ್ ಹೇಳಿಕೆ
ಗೋವಾ ಚುನಾವಣೆ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಗುರುವಾರ ಸಂಜೆ ಗೋವಾದಲ್ಲಿ ನೂತನ ಶಾಸಕರ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿ, "ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಮತ್ತು ಮೂವರು ಪಕ್ಷೇತರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೈಕಮಾಂಡ್ ಒಪ್ಪಿಗೆ ಪಡೆದು ಅವರ ಸಹಕಾರದಿಂದ ಸರ್ಕಾರ ರಚನೆ ಮಾಡಲಾಗುತ್ತದೆ" ಎಂದು ಹೇಳಿದರು.
ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಮುಂದುವರೆಯಲಿದ್ದಾರೆಯೇ? ಅಥವ ಬೇರೆ ನಾಯಕರನ್ನು ಆಯ್ಕೆ ಮಾಡಲಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ವಿಧಾನಸಭೆ ಚುನಾವಣೆಯಲ್ಲಿ 20 ಸ್ಥಾನಗಳಲ್ಲಿ ಜಯಗಳಿಸಿರುವ ಬಿಜೆಪಿ ಶೇ 33.3ರಷ್ಟು ಮತಗಳನ್ನು ಪಡೆದಿದೆ.

ಎಂಜಿಪಿ ಬೆಂಬಲ ಪತ್ರವನ್ನು ನೀಡಿದೆ
"ಗೋವಾ ರಾಜ್ಯ ಈಗ ಡಬಲ್ ಎಂಜಿನ್ ಸರ್ಕಾರದ ಅನುಭವ ಪಡೆಯಲಿದೆ. ನಾನು ಗೋವಾದ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಗೋವಾದ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿಗೆ ಅರ್ಪಣೆ ಮಾಡುತ್ತೇವೆ. ಮೂವರು ಪಕ್ಷೇತರರು ಬಿಜೆಪಿಗೆ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಎಂಜಿಪಿ ಪಕ್ಷ ಈಗಾಗಲೇ ಬಿಜೆಪಿ ಬೆಂಬಲಿಸುವುದಾಗಿ ಪತ್ರವನ್ನು ನೀಡಿದೆ. ನಾವು ಎಂಜಿಪಿಗೆ ಧನ್ಯವಾದ ತಿಳಿಸುತ್ತೇವೆ. 25 ಶಾಸಕರ ಬಲದಿಂದ ನಾವು ಸರ್ಕಾರ ರಚನೆ ಮಾಡಲಿದ್ದೇವೆ" ಎಂದು ದೇವೇಂದ್ರ ಫಡ್ನವೀಸ್ ಹೇಳಿದರು.

ಬಿಜೆಪಿ ಸೋಲಿಸಿದ ಅಭ್ಯರ್ಥಿಯಿಂದ ಪಕ್ಷಕ್ಕೆ ಬೆಂಬಲ
ಪಕ್ಷೇತರ ಶಾಸಕರಾದ ಕೋರ್ಟಾ ಕ್ಷೇತ್ರದ ಅಂಟಾನಿಯೋ ವ್ಯಾಸ್, ಬಿಚೋಲಿಮ್ ಕ್ಷೇತ್ರದ ಡಾ. ಚಂದ್ರಕಾಂತ್, ಅಲೆಕ್ಸ್ ರೆಜಿನಾಲ್ಡ್ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಡಾ. ಚಂದ್ರಕಾಂತ್ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ, ಗೋವಾ ವಿಧಾನಸಭೆ ಸ್ಪೀಕರ್ ರಾಜೇಶ್ ಪಾಟ್ನೇಕರ್ ಸೋಲಿಸಿದ್ದಾರೆ. ಆದರೆ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಅವರು ಬಹಿರಂಗವಾಗಿ ಬಿಜೆಪಿ ಬೆಂಬಲಿಸುವುದಾಗಿ ಘೋಷಣೆ ಮಾಡಿದರು.

ಕೇಂದ್ರದಿಂದ ವೀಕ್ಷಕರ ನೇಮಕ
"ಬಿಜೆಪಿ ರಾಜ್ಯದಲ್ಲಿ ಬಹುಮತ ಏಕೆ ಪಡೆಯಲಿಲ್ಲ? ಎಂದು ನಾವು ನಂತರ ತೀರ್ಮಾನಿಸುತ್ತೇವೆ. ಕೇಂದ್ರ ಸಂಸದೀಯ ಮಂಡಳಿ ರಾಜ್ಯಕ್ಕೆ ವೀಕ್ಷಕರನ್ನು ನೇಮಕ ಮಾಡಲಿದೆ. ವೀಕ್ಷಕರ ನೇಮಕವಾದ ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆಸಿ, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ನಮಗೆ ಸಂಪೂರ್ಣ ಬಹುಮತವಿದೆ. ನಾವು ಸರ್ಕಾರ ರಚನೆ ಮಾಡುತ್ತೇವೆ" ಎಂದು ದೇವೇಂದ್ರ ಫಡ್ನವೀಸ್ ಹೇಳಿದರು.












Click it and Unblock the Notifications