ಗೋವಾ ಚುನಾವಣೆ; ರಾಜ್ಯಕ್ಕೆ ಆಗಮಿಸಿದ ಚುನಾವಣಾ ಆಯೋಗದ ತಂಡ
ಪಣಜಿ, ಡಿಸೆಂಬರ್ 20; ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಮೂರು ದಿನಗಳ ಭೇಟಿಗಾಗಿ ಗೋವಾಕ್ಕೆ ಆಗಮಿಸಿದೆ. 2022ರ ಫೆಬ್ರವರಿಯಲ್ಲಿ ಗೋವಾ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ಸೋಮವಾರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ನೇತೃತ್ವದ ಅಧಿಕಾರಿಗಳ ತಂಡ ಗೋವಾಕ್ಕೆ ಆಗಮಿಸಿದೆ. ವಿಧಾನಸಭೆ ಚುನಾವಣೆ ಸಿದ್ಧತೆಗಳ ಕುರಿತು ಮೂರು ದಿನಗಳ ಕಾಲ ತಂಡ ಪರಿಶೀಲನೆ ನಡೆಸಲಿದೆ.
"ಡಿಸೆಂಬರ್ 20 ರಿಂದ 23ರ ತನಕ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ನೇತೃತ್ವದ ತಂಡ 2022ರ ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲಿದೆ" ಎಂದು ಗೋವಾ ರಾಜ್ಯದ ಚುನಾವಣಾ ಆಯುಕ್ತ ಕೂನಲ್ ಸಿಂಗ್ ಹೇಳಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಗೆ 2017ರಲ್ಲಿ ಚುನಾವಣೆ ನಡೆದಿತ್ತು. ಈಗ 2022ರಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರವನ್ನು ಆರಂಭಿಸಿವೆ. ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 17, ಬಿಜೆಪಿ 13 ಇತರರು 10 ಸ್ಥಾನಗಳಲ್ಲಿ ಜಯಗಳಿಸಿದ್ದರು. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಿಜೆಪಿ ಇತರ ಪಕ್ಷಗಳ ಬೆಂಬಲದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿಯಿತು.
ಈ ಬಾರಿ ಆಮ್ ಆದ್ಮಿ ಪಕ್ಷ, ಟಿಎಂಸಿ ಪಕ್ಷಗಳು ಸಹ ಗೋವಾ ಚುನಾವಣಾ ಕಣಕ್ಕಿಳಿಯಲಿವೆ. ಪಕ್ಷಗಳು ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ರಾಜ್ಯದಲ್ಲಿ ಪ್ರಚಾರವನ್ನು ಆರಂಭಿಸಿವೆ. ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ನೀಡುವುದಾಗಿಯೂ ಘೋಷಣೆ ಮಾಡಿವೆ.
2022ರಲ್ಲಿ ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗದ ತಂಡ ಐದು ರಾಜ್ಯಗಳಿಗೆ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಭೇಟಿ ನೀಡುತ್ತಿದೆ.
ಮೈತ್ರಿ ಮಾಡಿಕೊಂಡ ಕಾಂಗ್ರೆಸ್; ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಗೋವಾ ಫಾರ್ವರ್ಡ್ ಪಕ್ಷ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಈ ಹಿಂದೆ ಗೋವಾ ಫಾರ್ವರ್ಡ್ ಪಕ್ಷ ಬಿಜೆಪಿ ಜೊತೆ ಅಧಿಕಾರ ಹಂಚಿಕೊಂಡಿತ್ತು. ಆದರೆ 2022ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ.
2019ರ ಜುಲೈನಲ್ಲಿ ಪಕ್ಷದ ಅಧ್ಯಕ್ಷ ವಿಜಯ್ ಸರ್ ದೇಸಾಯಿ ಸೇರಿದಂತೆ ಮೂವರು ಶಾಸಕರನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಿಂದ ಕೈ ಬಿಟ್ಟರು. ಬಳಿಕ ಬಿಜೆಪಿ ಮತ್ತು ಫಾರ್ವರ್ಡ್ ಪಕ್ಷದ ಸಂಬಂಧ ಹಳಸಿದೆ.
"ಈ ಹಿಂದೆ ಆಗಿದ್ದೆಲ್ಲವೂ ಆಗಿ ಹೋಗಿದೆ. ರಾಜಕೀಯದಲ್ಲಿ ಸ್ನೇಹಿತರು ಬಹಳ ಮುಖ್ಯ ಕಾಂಗ್ರೆಸ್ ಪಕ್ಷವನ್ನು ನಾನು ನಂಬಿದ್ದೇವೆ. ಆದ್ದರಿಂದ ಅವರ ಜೊತೆ ಕೈ ಜೋಡಿಸಿದ್ದೇವೆ" ಎಂದು ವಿಜಯ್ ಸರ್ ದೇಸಾಯಿ ಹೇಳಿದ್ದಾರೆ.
"ನಾವು ಒಟ್ಟಾಗಿ ಚುನಾವಣೆಗೆ ಹೋಗುತ್ತೇವೆ. ಈ ಮೈತ್ರಿ ಇನ್ನಷ್ಟು ಜನರು ಕಾಂಗ್ರೆಸ್ ಸೇರಲು ಪ್ರೇರೆಪಣೆ ನೀಡುತ್ತದೆ. ಗೋವಾದ ಜನರು ಬಿಜೆಪಿಯನ್ನು ತಿರಸ್ಕರಿಸಲು ತೀರ್ಮಾನ ಮಾಡಿದ್ದಾರೆ. ಸಂಪೂರ್ಣ ಬಹುಮತದ ಸರ್ಕಾರವನ್ನು ತರಲು ಜನರು ಸಂಕಲ್ಪ ಮಾಡಿದ್ದಾರೆ" ಎಂದರು.
'ಸಮಾನ ಮನಸ್ಕ ಪಕ್ಷಗಳು ನಮ್ಮ ಜೊತೆ ಮೈತ್ರಿಗೆ ಬಂದರೆ ಸ್ವಾಗತಿಸುತ್ತೇವೆ. ಕೆಲವು ಪಕ್ಷೇತರ ಅಭ್ಯರ್ಥಿಗಳು, ಚಿಕ್ಕ ಪಕ್ಷಗಳು ಸಹ ಮುಂದಿನ ದಿನಗಳಲ್ಲಿ ನಮ್ಮ ಜೊತೆ ಕೈ ಜೋಡಿಸಲಿವೆ" ಎಂದು ವಿಜಯ್ ಸರ್ ದೇಸಾಯಿ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications