ಸಂಸತ್ ಅಧಿವೇಶನ: 11ನೇ ದಿನ ಉಭಯ ಸದನಗಳಲ್ಲಿ ಯಾವ ವಿಷಯ ಚರ್ಚೆ?
ನವದೆಹಲಿ, ಡಿಸೆಂಬರ್ 14: ಸಂಸತ್ ಚಳಿಗಾಲ ಅಧಿವೇಶನ ಮಂಗಳವಾರ 11ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಸಭೆಯ 12 ಸಂಸದರ ಅಮಾನತು ಆದೇಶವನ್ನು ವಿರೋಧಿಸಿ ವಿರೋಧ ಪಕ್ಷದ ಹಲವು ನಾಯಕರು ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ.
ಇದರ ಮಧ್ಯೆ ಸೋಮವಾರ ಲೋಕಸಭೆಯಲ್ಲಿ ಎನ್‌ಡಿಪಿಎಸ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತಿದ್ದುಪಡಿ ಮಸೂದೆಯು ಬಹಳ ಸೀಮಿತ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು. ಪ್ರಸ್ತಾಪಿಸಲಾದ ತಿದ್ದುಪಡಿಗಳು ನಿರ್ದಿಷ್ಟ ಕ್ಲೆರಿಕಲ್ ದೋಷವನ್ನು ಸರಿಪಡಿಸಲು ಮಾತ್ರ ಪ್ರಯತ್ನಿಸುತ್ತವೆ ಎಂದು ಅವರು ತಿಳಿಸಿದರು.
2021-2022ರ ಹಣಕಾಸು ವರ್ಷದಲ್ಲಿ ವಿವಿಧ ಸೇವೆಗಳಿಗೆ ಭಾರತದ ಏಕೀಕೃತ ನಿಧಿಯನ್ನು ಹೇಗೆ ವಿನಿಯೋಗಪಡಿಸಿಕೊಳ್ಳಬೇಕು ಎಂಬುದರ ಕುರಿತು ಮಸೂದೆ ಸಿದ್ಧತಪಿಸುವುದಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಜೆ ಮೇಲೆ ತೆರಳಿದ್ದರು.

ಲೋಕಸಭೆಯಲ್ಲಿ ಯಾವ ಮಸೂದೆ ಮಂಡನೆ?
ಭಾರತದ ಏಕೀಕೃತ ನಿಧಿಯಿಂದ 2021-22ನೇ ಸಾಲಿನಲ್ಲಿ ಯಾವ ಸೇವೆಗಳಿಗೆ ಎಷ್ಟು ಹಣವನ್ನು ವಿನಿಯೋಗಪಡಿಸಿಕೊಳ್ಳಬೇಕು ಎಂಬುದರ ಕುರಿತು ಮಸೂದೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.
ರಾಜ್ಯಸಭೆಯಲ್ಲಿ ಕಾಯ್ದೆ ಕುರಿತು ಚರ್ಚೆ:
ಲೋಕಸಭೆಯಲ್ಲಿ ಡಾ. ಜಿತೇಂದ್ರ ಸಿಂಗ್ ಅವರು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ 1946 ಅನ್ನು ತಿದ್ದುಪಡಿ ಮಾಡಲು ಮಸೂದೆಯನ್ನು ಮಂಡಿಸಲಿದ್ದು, ಅದು ಅಂಗೀಕಾರವಾಗುತ್ತಿದ್ದಂತೆ ರಾಜ್ಯಸಭೆಯಲ್ಲಿ ಮಂಡಿಸಲಿದ್ದಾರೆ. ಲೋಕಸಭೆಯು ಅಂಗೀಕರಿಸಿದಂತೆ, ಕೇಂದ್ರೀಯ ಜಾಗೃತ ಆಯೋಗದ ಕಾಯಿದೆ, 2003 ಅನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಪರಿಗಣಿಸುವಂತೆ ಡಾ. ಜಿತೇಂದ್ರ ಸಿಂಗ್ ಮೇಲ್ಮನೆಯಲ್ಲಿ ಪ್ರಸ್ತಾಪಿಸಲಿದ್ದಾರೆ.
ರಾಜ್ಯಸಭೆಯಲ್ಲಿ ಏನು ಚರ್ಚೆ?
ಡಿಸೆಂಬರ್ 14ರ ಮಂಗಳವಾರ ರಾಜ್ಯಸಭೆಯಲ್ಲಿ ದೆಹಲಿ ವಿಶೇಷ ಪೊಲೀಸ್ ಕಾಯ್ದೆ ತಿದ್ದುಪಡಿ ಮಸೂದೆ ಕುರಿತು ಚರ್ಚೆ ನಡೆಸಲಿದೆ. ಇನ್ನೊಂದು ಕಡೆಯಲ್ಲಿ 12 ಸಂಸದರನ್ನು ಅಮಾನತುಗೊಳಿಸಿದ ಆದೇಶವನ್ನು ಮರುಪರಿಶೀಲಿಸುವಂತೆ ಕೆಲವು ಪ್ರತಿಪಕ್ಷ ಸದಸ್ಯರು ಬೇಡಿಕೆಯನ್ನು ಮುಂದುವರಿಸಿದರು. ವಿರೋಧ ಪಕ್ಷದ ಕೆಲವು ನಾಯಕರು ಸಂಸದರ ಅಮಾನತು ಆದೇಶವನ್ನು ಹಿಂಪಡಿಯದಿದ್ದರೆ, ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications