ರಾಜಕಾರಣಿಗಳ ಬೆಂಬಲವಿಲ್ಲದೆ ಅಯೋಧ್ಯೆಯಲ್ಲಿ ರಾಮಮಂದಿರ!
ನವದೆಹಲಿ, ಮೇ.13: ಯಾವುದೇ ರಾಜಕಾರಣಿಗಳ ಬೆಂಬಲವಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ದ್ವಾರಕಾಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಬುಧವಾರ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರಕ್ಕೆ ಸವಾಲೊಡ್ಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ದೇಗುಲ ನಿರ್ಮಾಣ ಇತ್ತೀಚಿಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದರು. ರಾಜ್ಯಸಭೆಯಲ್ಲಿ ಎನ್ ಡಿಎಗೆ ಬಹುಮತದ ಕೊರತೆ ಇದೆ. ಹೀಗಾಗಿ ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸುವ ನಿಲುವಳಿ ಮಂಡನೆ ಅಸಾಧ್ಯ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆಯಂತೆ ರಾಮ್ ಲೀಲಾ ಮೈದಾನದಲ್ಲಿ ಬುಧವಾರ ಮಾತನಾಡಿದ ಶಂಕರಾಚಾರ್ಯ ಸ್ವಾಮೀಜಿ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತಂತೆ ರಾಜಕೀಯ ವ್ಯಕ್ತಿಗಳು ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ರಾಮ ಜನ್ಮ ಭೂಮಿ ಬಗ್ಗೆ ಮಾತನಾಡಬೇಡಿ, ರಾಮ ಮಂದಿರ ನಿರ್ಮಾಣವನ್ನು ನಾವು ಮಾಡುತ್ತೇವೆ ಎಂದು ಹಿಂದೂ ಧರ್ಮ ಸಂಸತ್ ನಲ್ಲಿ ಹೇಳಿದರು.
ಸುಪ್ರೀಂಕೋರ್ಟ್ ಆದೇಶ ನಮ್ಮ ಪರ ಬರುವ ನಿರೀಕ್ಷೆಯಿದೆ. ನಮಗೆ ಯಾವುದೇ ರಾಜಕಾರಣಿಗಳ ಆರ್ಥಿಕ ಬೆಂಬಲದ ನಿರೀಕ್ಷೆಯಿಲ್ಲ. ಜನರೇ ಇದನ್ನು ಭರಿಸಲಿದ್ದಾರೆ. ರಾಮಾಯಣ, ಮಹಾಭಾರತ ಮುಂತಾದ ಧರ್ಮಗ್ರಂಥಗಳಿಂದ ಪಡೆದ ಜ್ಞಾನವನ್ನು ದೇಶದ ಎಲ್ಲಾ ಕಾಲೇಜುಗಳಿಗೆ ಹಂಚಬೇಕಿದೆ. ಗೋಹತ್ಯೆ ನಿಷೇಧ ಹೇರಿದಂತೆ ಮದ್ಯಪಾನದ ಮೇಲೂ ನಿಷೇಧ ಜಾರಿಗೊಳ್ಳಲಿ ಎಂದು ಶಂಕರಾಚಾರ್ಯ ಅವರು ನೆರೆದಿದ್ದ ಸಭೆಯನ್ನು ಉದ್ದೇಶಿಸಿ ಹೇಳಿದರು. (ಪಿಟಿಐ)












Click it and Unblock the Notifications