ಕಿರಣ್ ಬೇಡಿ ಸಲಹೆಗೆ ಕಿವಿಗೊಡುವರೆ ಕೇಜ್ರಿವಾಲ್?
ನವದೆಹಲಿ, ಡಿ. 9 : ದೆಹಲಿ ಮತದಾರರು ಮತ ಹಾಕಿರುವುದು ಅತಂತ್ರ ವಿಧಾನಸಭೆಗಲ್ಲ. ಅವರು ಸರಕಾರವನ್ನು ಆಯ್ಕೆ ಮಾಡಿದ್ದು ಆಡಳಿತ ನಡೆಸಲೆಂದು. ದೆಹಲಿ ನಗರ ಮತ್ತು ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮತ್ತು ಎಎಪಿ ಒಗ್ಗಟ್ಟಿನಿಂದ ಆಡಳಿತ ನಡೆಸಬೇಕು ಎಂದು ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸಲಹೆ ನೀಡಿದ್ದಾರೆ.
ಆದರೆ, ಈ ಮಾತುಗಳು ಅರವಿಂದ್ ಕೇಜ್ರಿವಾಲ್ ಅಥವಾ ಇತರ ನಾಯಕರಿಗಾಗಲಿ, ಬಿಜೆಪಿಯ ಧುರೀಣರ ಕಿವಿಗೆ ಕೇಳಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಎರಡೂ ಪಕ್ಷಗಳಿಗೆ ಸ್ಪಷ್ಟ ಬಹುಮತ ಸಿಗದಿದ್ದರಿಂದ ಇಬ್ಬರೂ ಆಡಳಿತದ ಚುಕ್ಕಾಣಿ ಹಿಡಿಯಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ನಿಚ್ಚಳವಾಗಿದೆ. [ಅರವಿಂದ್ ನಿಜವಾದ ಹೀರೋ]
ಒಟ್ಟು 70 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 32 ಸ್ಥಾನಗಳನ್ನು ಗೆದ್ದಿದ್ದರೆ, ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದ ಆಮ್ ಆದ್ಮಿ ಪಕ್ಷ 28 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೂರು ಅವಧಿ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಕೇವಲ 8 ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಎರಡು ಸೀಟುಗಳು ಇತರರ ಪಾಲಾಗಿವೆ. ಸರಕಾರ ರಚಿಸಲು ಒಂದು ಪಕ್ಷಕ್ಕೆ ಬೇಕಿರುವುದು 36 ಸ್ಥಾನಗಳು. [ದೆಹಲಿ ಚುನಾವಣಾ ಫಲಿತಾಂಶ]

ಒಂದು ವೇಳೆ ಬಿಜೆಪಿ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಲು ಮುಂದೆ ಬಂದರೂ ಅದನ್ನು ಎಎಪಿ ಸ್ವೀಕರಿಸುವುದಿಲ್ಲ ಎಂದು ಎಎಪಿ ನಾಯಕ ಯೋಗೇಂದ್ರ ಯಾದವ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಬಿಜೆಪಿಗಿಂತ ಕಡಿಮೆ ಕ್ಷೇತ್ರಗಳನ್ನು ಎಎಪಿ ಗೆದ್ದಿದೆ. ಸರಕಾರ ರಚಿಸುವಷ್ಟು ಮತ ನಮಗೆ ಸಿಕ್ಕಿಲ್ಲ. ಎರಡನೇ ಸ್ಥಾನದಲ್ಲಿರುವ ಪಕ್ಷ ಸರಕಾರ ರಚಿಸಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ. [ಪೊರಕೆ ಬೆಲೆ ದಿಢೀರನೆ ಏರಿಕೆ]
ಬಿಜೆಪಿ, ಕಾಂಗ್ರೆಸ್ ಕೈಜೋಡಿಸಲಿ : ಬೇಕಿದ್ದರೆ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿಕೊಂಡು ಸರಕಾರ ರಚಿಸಲಿ ನಮಗೇನು ಅಭ್ಯಂತರವಿಲ್ಲ. ವಿರೋಧಪಕ್ಷದಲ್ಲಿ ಕುಳಿತುಕೊಳ್ಳಲು ನಮಗೇನು ಬೇಸರವಿಲ್ಲ. ರೋಮ್ ಒಂದೇ ದಿನದಲ್ಲಿ ನಿರ್ಮಿಸಿದ್ದಲ್ಲ. ನಮಗೆ ಬಹುಮತ ಸಿಕ್ಕಿದ್ದರೆ ಆ ಕಥೆಯೇ ಬೇರೆಯಾಗಿರುತ್ತಿತ್ತು ಎಂದು ಯೋಗೇಂದ್ರ ಯಾದವ್ ಮಾರ್ಮಿಕವಾಗಿ ನುಡಿದಿದ್ದಾರೆ. ಇದೇ ದನಿಯನ್ನು ಭಾನುವಾರ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
ಅಣ್ಣಾ ಹಜಾರೆ ನಿರಶನ : ಭ್ರಷ್ಟಾಚಾರ ಮುಕ್ತ ಭಾರತದ ನಿರ್ಮಾಣಕ್ಕಾಗಿ ಜನ ಲೋಕಪಾಲ ಮಸೂದೆ ಮಂಡನೆ ತೀರ ಅಗತ್ಯವಾಗಿದೆ. ಹಿಂದೆ ಲಿಖಿತ ಭರವಸೆ ಕಾಂಗ್ರೆಸ್ ನೀಡಿದ್ದರೂ ಅದನ್ನು ಜಾರಿಗೆ ತಂದಿಲ್ಲ. ಲೋಕಪಾಲ ಮಸೂದೆಗಾಗಿ 25 ವರ್ಷಗಳಿಂದ ಹೋರಾಟ ನಡೆಸಿದ್ದೇನೆ. ಇನ್ನು ಮುಂದೆಯೂ ಮಾಡುತ್ತೇನೆ. ಡಿ.10ರಿಂದ ದೆಹಲಿಯಲ್ಲಿ ಮತ್ತೆ ನಿರಶನ ಆರಂಭಿಸುತ್ತೇನೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಎಚ್ಚರಿಗೆ ನೀಡಿದ್ದಾರೆ. [ಅರವಿಂದಗೆ ಅಣ್ಣಾ ಆಶೀರ್ವಾದ]
ಗಡ್ಕರಿ ನಿವಾಸದಲ್ಲಿ ಸಭೆ : ಮುಖ್ಯಮಂತ್ರಿ ಸ್ಥಾನದ ಆಮಿಷ ಒಡ್ಡಿದ್ದರೂ, ಭ್ರಷ್ಟಾಚಾರದ ವಿರುದ್ಧ ಕೇಜ್ರಿವಾಲ್ ಅವರಿಗೆ ಬೆಂಬಲ ನೀಡಿದ್ದ ಕಿರಣ್ ಬೇಡಿ, ಅವರ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು. ಈ ನಡುವೆ, ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಅವರ ನಿವಾಸದಲ್ಲಿ ಮಹತ್ವದ ಸಭೆ ಸೋಮವಾರ ನಡೆಯಲಿದ್ದು, ಅಲ್ಲಿ ಎಎಪಿಗೆ ಬೆಂಬಲ ನೀಡಲು ನಿರ್ಧರಿಸಲಾಗುವುದೋ ಅಥವಾ ಮತ್ತೆ ಚುನಾವಣೆ ಎದುರಿಸಲು ಹೇಳಲಾಗುವುದೋ ತಿಳಿಯಲಿದೆ.












Click it and Unblock the Notifications