ಪ್ರಶಾಂತ್ ಕಿಶೋರ್ ಯಾಕೆ ಕಾಂಗ್ರೆಸ್ ಸೇರಲಿಲ್ಲ? ಪ್ರಿಯಾಂಕಾ ಗಾಂಧಿ ಬಹಿರಂಗ
ಹೊಸದಿಲ್ಲಿ ಜನವರಿ 22: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ರಾಹುಲ್ ಗಾಂಧಿ ಅವರೊಂದಿಗೆ ಯುಪಿ ಯುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಇದರ ನಡುವೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಏಕೆ ಕಾಂಗ್ರೆಸ್ ಸೇರಲು ಸಾಧ್ಯವಾಗಲಿಲ್ಲ ಎಂಬುದನ್ನು ಈಗ ಪ್ರಿಯಾಂಕಾ ಗಾಂಧಿ ಬಹಿರಂಗಪಡಿಸಿದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವಲ್ಲಿ ನೆರವಾಗಿದ್ದ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರೆನ್ನುವ ಊಹಾಪೋಹಗಳಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ತೆರೆ ಎಳೆದಿದ್ದಾರೆ. ಕಳೆದ ವರ್ಷ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಬೇಕು ಎಂದುಕೊಂಡಿದ್ದು, ಅದಕ್ಕಾಗಿ ಪ್ರಯತ್ನ ಪಟ್ಟಿದ್ದೂ ಹೌದು. ಆದರೆ ಕಿಶೋರ್ ಕಾಂಗ್ರೆಸ್ ಸೇರಲು ಸಾಧ್ಯವಾಗದಕ್ಕೆ ಕಾರಣವನ್ನು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಸಂದರ್ಶನದ ವೇಳೆ ಮಾತನಾಡಿದ ಪ್ರಿಯಾಂಕಾ ಪಿಕೆ (ಪ್ರಶಾಂತ್ ಕಿಶೋರ್) ಕಾಂಗ್ರೆಸ್ ಸೇರದಿರಲು ಕಾರಣ ಯಾರೆಂದು ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ಬಹಿರಂಗ
ಎನ್‌ಡಿಟಿವಿ ಸಂದರ್ಶನದ ವೇಳೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರದ ಕಾರಣವನ್ನು ಅವರು ತಿಳಿಸಿದ್ದಾರೆ. ಪ್ರಿಯಾಂಕಾ ಗಾಂಧಿಗೆ ಪ್ರಶಾಂತ್ ಕಿಶೋರ್ ಬಗ್ಗೆ ಪ್ರಶ್ನೆ ಕೇಳಿದಾಗ, 'ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವ ಎಲ್ಲಾ ಸಾಧ್ಯತೆಗಳಿವೆ ಎಂದು ನಾನು ನಂಬುತ್ತೇನೆ. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇದರ ಹಿಂದೆ ಅನೇಕ ಕಾರಣಗಳಿವೆ ಎಂದು ನಾನು ಭಾವಿಸುತ್ತೇನೆ. ಕೆಲವು ಅವನ ಕಡೆಯಿಂದ ಕಾರಣಗಳಿವೆ ಮತ್ತು ಕೆಲವು ನಮ್ಮ ಕಡೆಯಿಂದಲೂ ಕಾರಣಗಳಿವೆ. ನಾನು ಇದರ ಬಗ್ಗೆ ಹೆಚ್ಚು ಆಳವಾಗಿ ಹೋಗಲು ಬಯಸುವುದಿಲ್ಲ. ಸ್ಪಷ್ಟವಾಗಿ ಹೇಳುವುದಾದರೆ, ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಈ ಕಾರಣದಿಂದಾಗಿ ಈ ಚರ್ಚೆಯು ಮುಂದುವರಿಯಲು ಸಾಧ್ಯವಾಗಲಿಲ್ಲ' ಎಂದಿದ್ದಾರೆ.

ರಾಹುಲ್ ಗಾಂಧಿ ಜೊತೆ ಪಿಕೆ ಫೋಟೋ
ಕಳೆದ ಬಾರಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ, ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳು ಇದ್ದವು. ಕಳೆದ ವರ್ಷ ಪ್ರಶಾಂತ್ ಕಿಶೋರ್ ಅವರು ರಾಹುಲ್, ಪ್ರಿಯಾಂಕಾ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಅವರ ಫೋಟೋ ರಾಹುಲ್ ಗಾಂಧಿಯವರ ಮನೆಯಲ್ಲಿ ಕಾಣಿಸಿಕೊಂಡಾಗ, ಈ ಊಹಾಪೋಹಗಳಿಗೆ ಮತ್ತಷ್ಟು ಪ್ರಚೋದನೆ ಸಿಕ್ಕಿತ್ತು. ಆದರೆ, ಈ ಊಹಾಪೋಹಗಳನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಮತ್ತು ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪ್ರವೇಶಿಸಲಿಲ್ಲ.

ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರಶಾಂತ್ ಕಿಶೋರ್ ದಾಳಿ
ಎರಡೂ ಕಡೆಯ ಮಾತುಕತೆ ಮುರಿದುಬಿದ್ದ ನಂತರ, ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರಶಾಂತ್ ಕಿಶೋರ್ ಅವರಿಂದಲೂ ಕೆಲವು ತೀಕ್ಷ್ಣವಾದ ದಾಳಿಗಳು ನಡೆದವು. ನಾನು 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಲಿದೆ ಎಂದು ನಂಬಿದ್ದೇನೆ. ಆದರೆ ಪ್ರಸ್ತುತ ನಾಯಕತ್ವದಲ್ಲಿ ಇದು ಸಾಧ್ಯವಾಗುತ್ತಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಇದಲ್ಲದೇ ಪ್ರಶಾಂತ್ ಕಿಶೋರ್ ರಾಹುಲ್ ಗಾಂಧಿಯವರನ್ನೂ ಟಾರ್ಗೆಟ್ ಮಾಡಿದ್ದಾರೆ. ಸದ್ಯ ಬಿಹಾರದಲ್ಲಿ ಟಿಎಂಸಿ ಪರವಾಗಿ ಪ್ರಶಾಂತ್ ಕಿಶೋರ್ ಸಕ್ರಿಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

'ನನಗೆ ಖಂಡಿತವಾಗಿ ಸಿದ್ಧಾಂತವಿದೆ'
ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವಲ್ಲಿ ನೆರವಾಗಿದ್ದ ಪ್ರಶಾಂತ್ ಕಿಶೋರ್ "ರಾಜಕಾರಣಿಗಳ ಸಹಾಯಕನಾಗಿ ನನ್ನನ್ನು ನಾನು ಕಂಡುಕೊಂಡಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಸಹಾಯ ಪಡೆಯುವವರಿಗೆ ನಾನು ಸಹಾಯಕನಾಗಿರುತ್ತೇನೆ," ಎಂದು ಹೇಳಿದ್ದಾರೆ. ಕಿಶೋರ್‌ರ ಸ್ವಂತ ಸಿದ್ಧಾಂತ ಮತ್ತು ರಾಜಕೀಯ ಮಹತ್ವಾಕಾಂಕ್ಷೆಗಳು, ವಿರೋಧ ಪಕ್ಷಗಳ ಸ್ಥಾನಮಾನ, ಬಿಜೆಪಿನ ಯಶಸ್ಸಿಗೆ ಕಾರಣ, ಭಾರತದ ಪ್ರಸ್ತುತ ರಾಜಕೀಯ ಸನ್ನಿವೇಶಗಳ ಬಗ್ಗೆ ಚಿಂತಿಸುತ್ತಾರೆ.
ಪ್ರಶಾಂತ್ ಕಿಶೋರ್ ತನ್ನದೇ ಆದ ಸಿದ್ಧಾಂತವನ್ನು ಹೊಂದಿದ್ದಾರೆಯೇ ಎಂದು ಪ್ರಶ್ನೆಗೆ ಅವರು ಈ ಹಿಂದೆ, ಖಂಡಿತ ಹೌದು ಎಂದಿದ್ದರು. "ನನಗೆ ಖಂಡಿತವಾಗಿ ಸಿದ್ಧಾಂತವಿದೆ. ಆದರೆ ಯಾವುದೇ ಸಿದ್ಧಾಂತ ನನ್ನ ವಸ್ತುನಿಷ್ಠತೆಯನ್ನು ಕಳೆದುಕೊಳ್ಳುವಂತೆ ಮಾಡಬಾರದು. ಇದೇ ಸಂದರ್ಭದಲ್ಲಿ ಬಿಜೆಪಿಯ ಉದಾಹರಣೆಯನ್ನು ಪ್ರಶಾಂತ್ ಕಿಶೋರ್ ನೀಡಿದ್ದಾರೆ. "ಬಿಜೆಪಿಯಲ್ಲಿ ಹತ್ಯೆಗಳನ್ನು ನಾಯರುಗಳೇ ಸಮರ್ಥಿಸಿಕೊಳ್ಳುತ್ತಿದ್ದಾರೆ," ಎಂದಿದ್ದು, ಇದು ಸಿದ್ದಾಂತಕ್ಕೆ ಜೋತು ಬಿದ್ದು ವಸ್ತುನಿಷ್ಠತೆಯನ್ನು ಕಳೆದುಕೊಳ್ಳುವುದು ಎಂದು ಕೂಡಾ ಅಭಿಪ್ರಾಯಿಸಿದ್ದರು.












Click it and Unblock the Notifications