'ಮೋದಿ ಪ್ರಧಾನಿಯಾದರೆ ದುರಂತ, ರಾಹುಲ್ ಬೆಸ್ಟ್'
ನವದೆಹಲಿ, ಜ.3: ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಹತ್ತು ವರುಷದ ಅಧಿಕಾರ ಅವಧಿಯಲ್ಲಿ ಮೂರನೇ ಬಾರಿಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ಅವರು ಸುದ್ದಿಗೋಷ್ಠಿ ನಡೆಸಿರುವುದು ಭಾರಿ ಕುತೂಹಲ ಕೆರಳಿಸಿತ್ತು. ಯುಪಿಎ ಸಾಧನೆಗಳನ್ನು ತಮ್ಮ ಭಾಷಣದುದ್ದಕ್ಕೂ ಸಿಂಗ್ ಕೊಂಡಾಡಿದ ಮೇಲೆ ಮೋದಿ, ರಾಹುಲ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿದರು.
ಸಮಯ 12.08: ಆರೋಗ್ಯ ರಕ್ಷಣೆ ಯೋಜನೆಗೆ ಒತ್ತು. ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆ ಹಾಗೂ ಮಹಿಳೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗಿದೆ ಎಂದರು.
ಸಮಯ 12.00: ಯುಎಸ್ ಜತೆ ಅಣ್ವಸ್ತ್ರ ಒಪ್ಪಂದ ನನ್ನ ಅವಧಿಯ ಸ್ಮರಣೀಯ ಕ್ಷಣ ಎಂದ ಪ್ರಧಾನಿ ಜನತೆ ದೆಹಲಿಯಲ್ಲಿ ಬದಲಾವಣೆ ಬಯಸಿದಂತೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿದೆ. ಜನತೆಯ ಆಶೋತ್ತರ ಈಡೇರಿಸಲು ನಾವು ಪರೋಕ್ಷವಾಗಿ ನೆರವಾಗಿದ್ದೇವೆ ಅಷ್ಟೇ ಎಂದರು.
ಸಮಯ 11.50 : ಮೋದಿ ಏನಾದರೂ ಪ್ರಧಾನಿಯಾದರೆ ದೊಡ್ಡ ದುರಂತ': ಯುಪಿಎ ಮುಂದಿನ ಬಾರಿಯೂ ಅಧಿಕಾರ ಚುಕ್ಕಾಣಿ ಹಿಡಿಯುವುದರಿಂದ ಮೋದಿ ಅವರು ಪ್ರಧಾನಿಯಾಗುವ ಕನಸು ನನಸಾಗುವುದು ಕಷ್ಟ. ಸೂಕ್ತ ಸಮಯದಲ್ಲಿ ಯುಪಿಎ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲಿದೆ.
ಸಮಯ 11.30 : ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಯಿದೆ. ರಾಹುಲ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಯಿದೆ ಎಂಬ ಸುಳಿವನ್ನು ಪ್ರಧಾನಿ ಸಿಂಗ್ ನೀಡಿದರು.
ಸಮಯ 11.25: ಅಧಿಕಾರ ಹಸ್ತಾಂತರ : ಸದ್ಯಕ್ಕೆ ರಾಜೀನಾಮೆ ನೀಡುವ ಸುಳಿವು ನೀಡದ ಸಿಂಗ್, ಮೂರನೇ ಬಾರಿಗೆ ಪ್ರಧಾನಿಯಾಗುವುದಿಲ್ಲ. ಹೊಸ ಪೀಳಿಗೆ ನಾಯಕರು ದೇಶವನ್ನು ಸಮರ್ಥವಾಗಿ ಮುನ್ನಡೆಸುವ ವಿಶ್ವಾಸವಿದೆ ಎಂದರು. ಹೀಗಾಗಿ ಮುಂದಿನ ಚುನಾವಣೆಯನ್ನು ಹೊಸ ನಾಯಕನ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಸಿಂಗ್ ಪರೋಕ್ಷವಾಗಿ ಒಪ್ಪಿಕೊಂಡರು.

ಸಮಯ 11.20 : ನನಗೆ ರಾಜೀನಾಮೆ ನೀಡುವಂತೆ ಯಾರೂ ಒತ್ತಡ ಹೇರಿಲ್ಲ. ನನಗೂ ರಾಜೀನಾಮೆ ನೀಡುವ ಪ್ರಸಂಗ ಎದುರಾಗಿಲ್ಲ . ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನನ್ನ ಅಧಿಕಾರ ಬಳಸಿ ಸ್ವಜನ ಪಕ್ಷಪಾತ ಎಂದೂ ಮಾಡಿಲ್ಲ ಎಂದರು.
ಯುಪಿಎ ಸರ್ಕಾರದ ಸಾಧನೆಗಳು ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರಕ್ಕಿಂತ ಉತ್ತಮವಾಗಿದೆ ಎಂದು ಮನಮೋಹ್ ಸಿಂಗ್ ದಾಖಲೆಗಳ ಸಮೇತ ಹೇಳಿದರು. ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದು ಸರ್ಟಿಫಿಕೇಟ್ ನೀಡಿದರು.
ಸಮಯ 11.10 : ಆರ್ಥಿಕ ಸುಧಾರಣೆಗಳು ದೇಶದ ಪ್ರಗತಿಗೆ ಪೂರಕವಾಗಿದ್ದರೂ ಹಣದುಬ್ಬರ ಏರಿಕೆ ತಡೆಗಟ್ಟಲು ಸಾಧ್ಯವಾಗಲಿಲ್ಲ ಎಂಬ ಕೊರಗಿದೆ. ಆದರೆ, ಯುಪಿಎ ಅಧಿಕಾರ ಅವಧಿಯಲ್ಲಿ ಆರ್ಥಿಕ ಭದ್ರತೆ ಕಾಯ್ದುಕೊಳ್ಳಲಾಗಿದೆ ಎಂದರು.
ಸಮಯ 11.00: ಗ್ರಾಮೀಣ ಭಾಗದ ಜನತೆಯ ವರಮಾನ ಹೆಚ್ಚಳವಾಗಿದ್ದು ಕಳೆದ 9 ವರ್ಷಗಳಲ್ಲೇ ಅಧಿಕ ಎಂದರು.
ಪ್ರಧಾನಿ ಅವರ ಸುದ್ದಿಗೋಷ್ಠಿಯಲ್ಲಿ ಸುಮಾರು 170ಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾಂಗ್ರೆಸ್ಸಿನ ಮುಂದಿನ ಪ್ರಧಾನಿ ಅಭ್ಯರ್ಥಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ಘೋಷಿಸುತ್ತಾರೆ ಎಂಬ ನಿರೀಕ್ಷೆಯಿಂದ ಸುದ್ದಿಗೋಷ್ಠಿ ಆರಂಭವಾಗಿತ್ತು.












Click it and Unblock the Notifications