ಸೈನಿಕರೆಂದ ಮೇಲೆ ಸಾಯಲೇಬೇಕು ಎಂದು, ಕ್ಷಮೆ ಕೇಳಿದ ಬಿಜೆಪಿ ನಾಯಕ
ನವದೆಹಲಿ, ಜನವರಿ 02: "ಸೈನಿಕರಾದ ಮೇಲೆ ಸಾಯಲೇಬೇಕು, ಯಾವ ದೇಶದಲ್ಲಿ ಸೈನಿಕರು ಸಾಯುವುದಿಲ್ಲ ಹೇಳಿ?" ಎಂದು ಅಪ್ರಬುದ್ಧ, ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ನೇಪಾಲ್ ಸಿಂಗ್ ನಂತರ ಕ್ಷಮೆ ಯಾಚಿಸಿದ್ದಾರೆ.
ಉತ್ತರ ಪ್ರದೇಶದ ರಾಂಪುರದ ಸಂಸದ ನೇಪಾಲ್ ಸಿಂಗ್ ಇಂಥ ಅಪ್ರಬುದ್ಧ ಹೇಳಿಕೆ ನೀಡುವ ಮೂಲಕ ಚಳಿ, ಮಳೆ ಎನ್ನದೆ ದೇಶವನ್ನು ಕಾಯುವ ಸೈನಿಕರಿಗೆ ಅವಮಾನ ಮಾಡಿದ್ದರು. ನಂತರ, 'ನಾನು ಆ ರೀತಿಯಲ್ಲಿ ಹೇಳಿರಲಿಲ್ಲ. ಆದರೂ ನನ್ನ ಮಾತಿಗೆ ಕ್ಷಮೆ ಕೇಳುತ್ತೇನೆ. ಸೈನಿಕರಿಗೆ ಬುಲೆಟ್ ತಾಕದಂಥ ಡಿವೈಸ್ ವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚುತ್ತಿದ್ದಾರೆ, ಇದರಿಂದ ನಮ್ಮ ಸೈನಕರನ್ನು ರಕ್ಷಿಸಬಹುದು ಎಂದಷ್ಟೇ ನಾನು' ಹೇಳಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ.

ಆದರೆ ಒಮ್ಮೆ ಆಡಿದ ಮಾತನ್ನು ಹಿಂಪಡೆಯುವುದಕ್ಕೆ ಸಾಧ್ಯವೇ? ಇತ್ತೀಚಿಗೆ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿದ್ದರಿಂದ ಮೃತರಾದ ಭಾರತೀಯ ಸೇನೆಯ ಐವರು ಸೈನಿಕರ ಬಗ್ಗೆ ಮಾತನಾಡುತ್ತಿದ್ದ ಅವರು, "ಸೈನಿಕರು ಪ್ರತಿದಿನವೂ ಸಾಯುತ್ತಾರೆ. ಸೈನಿಕರು ಸಾಯದಿರುವ ದೇಶ ಯಾವುದಾದರೂ ಇದೆಯೇ? ಸಣ್ಣ ಹಳ್ಳಿಯಲ್ಲಿ ನೂಕುನುಗ್ಗಲಾದರೂ ಕನಿಷ್ಠ ಒಬ್ಬ ವ್ಯಕ್ತಿಗಾದರೂ ನೋವಾಗದೆ ಇರುತ್ತದೆಯೇ? ಸಾವಿನಿಂದ ಉಳಿಸುವ ಡಿವೈಸ್ ಯಾವುದಾದರೂ ಇದೆಯೇ? ಬುಲೆಟ್ ಅನ್ನು ತಡೆಯುವ ಅಂಥ ಯಾವುದಾದರು ವಸ್ತುವಿದ್ದರೆ ಹೇಳಿ ನೋಡೋಣ" ಎಂದಿದ್ದರು.












Click it and Unblock the Notifications