ಶಾಲೆಗಳಲ್ಲಿ ಜಂಕ್ ಫುಡ್ ಬೇಡವೆಂದ ಸಚಿವೆ ಮನೇಕಾ
ನವದೆಹಲಿ, ಜೂನ್ 5: ನಾಯಕನೊಬ್ಬ ಖಡಕ್ಕಾಗಿದ್ದರೆ ಕೆಳಹಂತದಲ್ಲಿ ಸೇನಾನಿಗಳೂ ಹೇಗೆ ಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂಬುದಕ್ಕೆ ನೂತನ ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಉದಾಹರಣೆಯಾಗುತ್ತಿದ್ದಾರೆ.
ಜಂಕ್ ಫುಡ್ ಎಂಬ ಕುರುಕುಲು ತಿಂಡಿಗೆ ಇಂದಿನ ಮಕ್ಕಳು ಮನಸೋತು ಹೇಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಳೆಗುಂದುತ್ತಿದ್ದಾರೆ ಎಂಬುದು ಪೋಷಕರಿಗೆ ಚೆನ್ನಾಗಿ ಗೊತ್ತು. ಮಾಯಾವಿಯಂತೆ ಮಕ್ಕಳ ಮುಂದೆ ಆವರಿಸುವ ಜಂಕ್ ಫುಡ್ ಮುಂದೆ ಪೋಷಕರು ಅಸಹಾಯಕರಾಗಿದ್ದಾರೆ.
ಆದರೆ ಜಂಕ್ ಫುಡ್ ಹಾವಳಿಗೆ ಬ್ರೇಕ್ ಹಾಕಲು ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಗಂಭೀರವಾಗಿ ಆಲೋಚಿಸಿದ್ದಾರೆ. ಇಂತಹ ಜನಪರ ಆಲೋಚನೆ ಬಂದ ಮೇಲೆ ಸುಮ್ಮನೆ ಕುಳಿತುಕೊಳ್ಳುವವರಲ್ಲ ಹಿರಿಯ ನಾಯಕಿ ಮನೇಕಾ ಗಾಂಧಿ.

ಹಾಗಾಗಿ ದೇಶದಲ್ಲಿ ಯಾವುದೇ ಶಾಲೆಯ ಮುಂದೆ ಇಂತಹ ಜಂಕ್ ಫುಡ್ ಕಾಣಿಸಿಕೊಳ್ಳಬಾರದು. ಶಾಲಾ ಆವರಣವನ್ನು ಜಂಕ್ ಫುಡ್ ನಿಂದ ಮುಕ್ತಿಗೊಳಿಸಬೇಕು ಎಂಬ ಖಡಕ್ ಪ್ರಸ್ತಾವನೆಯ ಬಗ್ಗೆ ಸಚಿವೆ ಮನೇಕಾ ಅವರು ಗಂಭೀರವಾಗಿ ಆಲೋಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯದಲ್ಲೇ ಸಚಿವೆ ಮನೇಕಾ ಗಾಂಧಿ ಅವರು ಈ ಪ್ರಸ್ತಾವನೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಮತ್ತು ಆರೋಗ್ಯ ಸಚಿವರೊಂದಿಗೆ ಚರ್ಚಿಸಲಿದ್ದಾರೆ. ಅದಾದ ನಂತರ ಪ್ರತ್ಯೇಕ ಮಾರ್ಗಸೂಚಿ ನಿಗದಿಪಡಿಸುತ್ತಾರೆ ಎಂದು ಆಶಿಸಲಾಗಿದೆ.
ಪೋಷಕರು ಏನನ್ತೀರಿ?:

ದಿಲ್ಲಿ ಹೈಕೋರ್ಟ್ ಮುಂದೆಯೂ ಪ್ರಸ್ತಾವನೆ:
ಶಾಲೆಗಳ ಮುಂದೆ ಜಂಕ್ ಫುಡ್ ಅನ್ನು ನಿಷೇಧಿಸಬೇಕು. ಶಾಲಾ ಮಕ್ಕಳಿಗೆ ಆರೋಗ್ಯಕರ ಆಹಾರ ದೊರಕುವಂತಾಗಬೇಕು ಎಂದು ಆಶಿಸಿ ಉದಯ್ ಫೌಂಡೇಷನ್ ಎಂಬ ಒಂದು ಎನ್ ಜಿಒ ದಿಲ್ಲಿನ ಹೈಕೋರ್ಟಿನಲ್ಲಿ ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಸದ್ಯದಲ್ಲೇ ಕೋರ್ಟ್ ಸಹ ಮಾರ್ಗಸೂಚಿ ನಿಗದಿಪಡಿಸುವ ಅಂದಾಜಿದೆ.
ಚಿಪ್ಸ್, ಬೇಕರಿ ತಿನಿಸುಗಳು ಸೇರಿದಂತೆ ವಿವಿಧ ರೀತಿಯ ಸಂಸ್ಕರಿತ ಜಂಕ್ ಫುಡ್ ಗಳಿಂದ ಪೋಷಕರು ಮಕ್ಕಳನ್ನು ದೂರವಿಡಲು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಆದರೆ, ಶಾಲಾ ಕ್ಯಾಂಟೀನ್ ಗಳಲ್ಲಿ ಇವು ಮಕ್ಕಳ ಕೈಗೆಟುಕುವಂತೆ ರಾರಾಜಿಸುತ್ತಿರುತ್ತವೆ. ಹಾಗಾಗಿ, ಶಾಲೆಗಳ ಆವರಣವನ್ನು ಜಂಕ್ ಫುಡ್ ಮುಕ್ತವಾಗಿಸಿ, ಮಕ್ಕಳನ್ನು ಇಂಥ ಅನಾರೋಗ್ಯಕರ ಆಹಾರಗಳಿಂದ ದೂರವಿರಿಸುವುದು ಈ ಪ್ರಸ್ತಾವನೆ ಹಿಂದಿರುವ ಮುಖ್ಯ ಉದ್ದೇಶ.
ಜಂಕ್ ಫುಡ್ ನಿಷೇಧಿಸಿದ ಮಾತ್ರಕ್ಕೇ ಮಕ್ಕಳಿಗೆ ಅದರ ಮೇಲಿನ ವ್ಯಾಮೋಹ ದೂರವಾಗಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ, ಜಂಕ್ ಫುಡ್‌ಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪ್ರತಿ ಶಾಲೆಯಲ್ಲೂ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ.












Click it and Unblock the Notifications