ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ನಿಧನ
Jayamma passes away: ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಅವರ ತಾಯಿ, ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ಮಂಗಳವಾರ (ಜೂನ್ 16) ಬೆಳಗ್ಗೆ ವಿಧಿವಶರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಜಯಮ್ಮ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಆದರೆ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದೇ ಜೂನ್ 16ರ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಜಯಮ್ಮ ಅವರು ಕೇವಲ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿಯಷ್ಟೇ ಅಲ್ಲ, ತಮ್ಮ ಕುಟುಂಬದ ಬೆನ್ನೆಲುಬಾಗಿ ನಿಂತಿದ್ದರು. ಹಿರಿಯ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಅವರ ಸಿನಿ ಪಯಣಕ್ಕೂ, ಮಕ್ಕಳ ಕಲಾ ಬದುಕಿನ ಬೆಳವಣಿಗೆಯಲ್ಲೂ ಅವರು ಅಪಾರ ಬೆಂಬಲ ನೀಡಿದ್ದರು.

ಕುಟುಂಬಕ್ಕೆ ಆಸರೆಯಾಗಿದ್ದ ಜಯಮ್ಮ
ಪತಿ ಚಿನ್ನೇಗೌಡರು ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರಾಗಿ ಹೊರಹೊಮ್ಮಲು ಮತ್ತು ಇಬ್ಬರೂ ಗಂಡುಮಕ್ಕಳಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರು ಸ್ಯಾಂಡಲ್‌ವುಡ್‌ನ ಸ್ಟಾರ್ ನಟರಾಗಿ ಮಿಂಚಲು ಜಯಮ್ಮ ಅವರ ನಿರಂತರ ಪ್ರೋತ್ಸಾಹ, ಪ್ರೇರಣೆ ಹಾಗೂ ನೈತಿಕ ಬೆಂಬಲವೇ ಮುಖ್ಯ ಕಾರಣವಾಗಿತ್ತು. ಎಂದಿಗೂ ಪ್ರಚಾರ ಬಯಸದೆ, ತೆರೆಯ ಮರೆಯಲ್ಲೇ ಇದ್ದುಕೊಂಡು ಇಡೀ ಕುಟುಂಬವನ್ನು ಮುನ್ನಡೆಸಿದ ಹೆಗ್ಗಳಿಕೆ ಇವರದ್ದಾಗಿತ್ತು.
ಚಿತ್ರರಂಗದಲ್ಲಿ ವಿಜಯ್ ರಾಘವೇಂದ್ರ, ಶ್ರೀ ಮುರಳಿ ಸಾಧನೆ
ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟು ಪ್ರಸಿದ್ಧ 'ಚಿನ್ನಾರಿ ಮುತ್ತ' ಚಲನಚಿತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಹೆಮ್ಮೆ ವಿಜಯ್ ರಾಘವೇಂದ್ರ ಅವರದ್ದು. ಇದು 1993ರಲ್ಲಿ ರಿಲೀಸ್ ಆಗಿದ್ದು, ಕನ್ನಡದ ಹೆಮ್ಮೆಯ ಚಲನಚಿತ್ರವಾಗಿದೆ. ಇದು ಅತ್ಯುತ್ತಮ ಕನ್ನಡ ಚಿತ್ರ ವಿಭಾಗದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ.
ನಂತರದ ದಿನಗಳಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿ ಹಾಗೂ ಜನಪ್ರಿಯ ರಿಯಾಲಿಟಿ ಶೋಗಳ ನೆಚ್ಚಿನ ತೀರ್ಪುಗಾರರಾಗಿ ಗುರುತಿಸಿಕೊಂಡಿರುವ ವಿಜಯ್ ರಾಘವೇಂದ್ರ ಅವರಿಗೆ ಇಂದಿಗೂ ಸ್ಯಾಂಡಲ್‌ವುಡ್‌ನಲ್ಲಿ ಅಪಾರ ಬೇಡಿಕೆಯಿದೆ. ಮತ್ತೊಂದೆಡೆ ಚಂದ್ರ ಚಕೋರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶ್ರೀಮುರಳಿ ನಂತರ ಉಗ್ರಂ ಸಿನಿಮಾದ ದೊಟ್ಟ ಮಟ್ಟದ ಯಶಸ್ಸು ಕಂಡರು.
ಶ್ರೀಮುರಳಿ ಅವರು ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದರು. ಆನಂತರ ಬ್ಯಾಕ್-ಟು-ಬ್ಯಾಕ್ ಆ್ಯಕ್ಷನ್ ಸಿನಿಮಾಗಳ ಮೂಲಕ ರೋರಿಂಗ್ ಸ್ಟಾರ್ ಆಗಿ ಸಿನಿಪ್ರೇಕ್ಷಕರ ಮನಗೆದ್ದು ಭದ್ರವಾಗಿ ನೆಲೆಸಿದರು. ಈ ಇಬ್ಬರೂ ಸಹೋದರರ ಯಶಸ್ವಿ ಸಿನಿಮಾ ಜರ್ನಿಯ ಹಿಂದೆ ತಾಯಿ ಜಯಮ್ಮ ಅವರ ಆಶೀರ್ವಾದ ಸದಾ ಇತ್ತು.
ವರನಟ ಡಾ. ರಾಜ್‌ಕುಮಾರ್ ಕುಟುಂಬದ ಆಪ್ತ ಸಂಬಂಧಿಕರಾಗಿರುವ ಚಿನ್ನೇಗೌಡರ ಪರಿವಾರಕ್ಕೆ ಈಗ ಜಯಮ್ಮ ಅವರ ಅಗಲಿಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಜಯಮ್ಮ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಈ ಅಗಾಧ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರಿಗೆ ನೀಡಲಿ ಎಂದು ಚಿತ್ರರಂಗ ಹಾಗೂ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅನೇಕ ಕಲಾವಿದರು, ನಿರ್ಮಾಪಕರು ಹಾಗೂ ತಂತ್ರಜ್ಞರು ಜಯಮ್ಮ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.












Click it and Unblock the Notifications