ಮಮತಾ ಬ್ಯಾನರ್ಜಿಗೆ ಹಿನ್ನಡೆ: ಆಪ್ತ ಪೊಲೀಸ್ ಅಧಿಕಾರಿಗೆ ಬಂಧನ ಭೀತಿ
ನವದೆಹಲಿ, ಮೇ 17: ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಅವರ ಆಪ್ತರ ವಲಯದಲ್ಲಿರುವ ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಬಂಧನ ಭೀತಿ ಎದುರಾಗಿದೆ.
ರಾಜೀವ್ ಕುಮಾರ್ ಅವರಿಗೆ ಬಂಧನದಿಂದ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂಕೋರ್ಟ್ ಹಿಂದಕ್ಕೆ ಪಡೆದುಕೊಂಡಿದೆ. ಏಳು ದಿನಗಳ ಒಳಗೆ ಸೂಕ್ತ ವೇದಿಕೆಯನ್ನು ಸಂಪರ್ಕಿಸುವಂತೆ ಅದು ಕಾಲಾವಕಾಶ ನೀಡಿದೆ.
ಕಾನೂನಿನ ಪ್ರಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐ ಮುಂದುವರಿಸಬಹುದು. ಆದರೆ, ರಾಜೀವ್ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲು ನೀಡಿರುವ ನಿರ್ದೇಶನವಿದು ಎಂದು ಸಿಬಿಐ ಭಾವಿಸಕೂಡದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಶಾರದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಮುಂದಾಗಿತ್ತು. ರಾಜೀವ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ಒದಗಿಸಿ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಈ ರಕ್ಷಣೆ ಇನ್ನು ಏಳು ದಿನಗಳ ಕಾಲ ಮಾತ್ರ ಇರಲಿದೆ.
ಈ ಪ್ರಕರಣದಲ್ಲಿ ಅತ್ಯಂತ ಪ್ರಮುಖವಾಗಿರುವ ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಹಾಳು ಮಾಡಲು ರಾಜೀವ್ ಕುಮಾರ್ ಅವರು ಪ್ರಯತ್ನಿಸಿದ್ದಕ್ಕೆ ಪ್ರಾಥಮಿಕ ಪುರಾವೆಗಳಿವೆ. ಹೀಗಾಗಿ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲು ಬಯಸಿರುವುದಾಗಿ ಸಿಬಿಐ ಸುಪ್ರೀಂಕೋರ್ಟ್‌ಗೆ ಹೇಳಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜೀವ್ ಕುಮಾರ್ ಪರ ವಕೀಲರು, ಅವರನ್ನು ಹಿಂಸಿಸುವ ಸಲುವಾಗಿಯಷ್ಟೇ ಸಿಬಿಐ ತಮ್ಮ ವಶಕ್ಕೆ ಪಡೆದುಕೊಳ್ಳಲು ಬಯಸಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದರು.












Click it and Unblock the Notifications