ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ನವದೆಹಲಿ, ಸೆಪ್ಟೆಂಬರ್ 26: ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಹತ್ವದ ತೀರ್ಪು ಹೊರಬಿದ್ದಿದ್ದು, ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಕೋರ್ಟ್ ಎತ್ತಿಹಿಡಿದಿದೆ.
ಆಧಾರ್ ಕಾರ್ಡ್ ಅನ್ನು ಎಲ್ಲಾ ಸರ್ಕಾರಿ ಯೋಜನೆಗಳಿಗೂ ಕಡ್ಡಾಯವಾಗಿ ಬಳಸಬೇಕು ಎಂದು ಸುಪ್ರೀಂ ಹೇಳಿದೆ.
ಆದರೆ ಖಾಸಗೀ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಅದು ಹೇಳಿದೆ.
ಒಟ್ಟು 40 ಪುಟಗಳ ತೀರ್ಪಿನ ಸಾರಾಂಶವನ್ನು ನ್ಯಾ.ಎಕೆ ಸಿಕ್ರಿ ಓದಿದ್ದು, 'ಖಾಸಗೀತನದ ಹಕ್ಕು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ' ಎಂದಿದ್ದಾರೆ.
ಪಂಚಸದಸ್ಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ ಎಕೆ ಸಿಕ್ರಿ, ನ್ಯಾ.ಎ ಎಂ ಖಾನ್ ವಿಲ್ಕರ್, ನ್ಯಾ.ಡಿ ವೈ ಚಂದ್ರಚೂಡ್, ನ್ಯಾ. ಅಶೋಕ್ ಭೂಷಣ್ ಅವರಿದ್ದಾರೆ.
ಆಧಾರ್ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಐವರು ನ್ಯಾಯಮೂರ್ತಿಗಳಲ್ಲಿ ಮೂವರು ನ್ಯಾಯಮೂರ್ತಿಗಳು ಸಿಂಧುತ್ವವನ್ನು ಸ್ವಾಗತಿಸಿದ್ದರೆ, ಇನ್ನಿಬ್ಬರು ವಿರೋಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯನ್ನು ಕಳೆದ ಮಾರ್ಚ್ ತಿಂಗಳಿನಿಂದ ಆರಂಭಿಸಿತ್ತು.
12 ಅಂಕಿಗಳ ಆಧಾರ್ ಸಂಖ್ಯೆಯನ್ನು ಬಹುಮುಖ್ಯ ದಾಖಲೆಗಳೊಂದಿಗೆ ಜೋಡಿಸುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುವ ಸಂಭವವಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ. ಖಾಸಗೀತನ ಮೂಲಭೂತ ಹಕ್ಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿರುವುದು ಆಧಾರ್ ಕಡ್ಡಾಯ ಕ್ರಮದಿಂದ ಖಾಸಗೀತನಕ್ಕೆ ಧಕ್ಕೆಯಾಗುತ್ತದೆ ಎಂಬ ಆರೋಪಕ್ಕೆ ಪುಷ್ಟಿ ನೀಡಿದಂತಾಗಿತ್ತು.

ಸಿಜೆಐ ದೀಪಕ್ ಮಿಶ್ರಾ ಅವರು ನಿವೃತ್ತಿ(ಅ.2 ರಂದು)ಗೂ ಮುನ್ನ ತೀರ್ಪ ನೀಡುತ್ತಿರುವ ಮಹತ್ವದ ಪ್ರಕರಣಗಳಲ್ಲಿ ಇದೂ ಒಂದಾಗಿದೆ.












Click it and Unblock the Notifications