ಜನರ ಕಷ್ಟದಲ್ಲಿ ಬಿಜೆಪಿ ಲಾಭ ನೋಡುತ್ತಿದೆ; ಸೋನಿಯಾ ಗಾಂಧಿ
ನವದೆಹಲಿ, ಜನವರಿ 07: ದೆಹಲಿಯಲ್ಲಿ ರೈತರ ಹೋರಾಟ ಹಾಗೂ ಇಂಧನ ಬೆಲೆ ಏರಿಕೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿದೆ ಎಂದು ಟೀಕಿಸಿದ್ದಾರೆ. ಜನರ ಕಷ್ಟಗಳಿಂದ ಕೇಂದ್ರ ಸರ್ಕಾರ ಲಾಭ ಮಾಡಿಕೊಳ್ಳಲು ನೋಡುತ್ತಿದೆ. ಕಳೆದ 73 ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈ ಮಟ್ಟದ ಏರಿಕೆ ಕಂಡಿದೆ ಎಂದು ಆರೋಪಿಸಿದ್ದಾರೆ.
ಅಬಕಾರಿ ಸುಂಕವನ್ನು ಹೆಚ್ಚಿಸಿ ಸರ್ಕಾರ ದೇಶದ ಜನರಿಂದ 19,00,000 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದೆ. ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಕಳೆದ ವರ್ಷ ಹಲವಾರು ದೇಶಗಳು ಮತ್ತು ಪ್ರಮುಖ ನಗರಗಳಲ್ಲಿ ತೈಲ ಬೆಲೆ ದಾಖಲೆಯ ಕನಿಷ್ಠ ಮಟ್ಟ ತಲುಪಿತ್ತು. ಅದರ ಪ್ರಯೋಜನವನ್ನೂ ಜನರಿಗೆ ದೊರಕಿಸಿಕೊಡಲಿಲ್ಲ ಎಂದು ದೂರಿದ್ದಾರೆ.
ಬಿಜೆಪಿ "ಅಸೂಕ್ಷ್ಮ" ಸರ್ಕಾರ ಎಂದು ಟೀಕಿಸಿರುವ ಸೋನಿಯಾ ಗಾಂಧಿ, ಬಿಜೆಪಿ ಇಂಥ ಕಠಿಣ ಸಮಯದಲ್ಲಿ ಜನರಿಗೆ ನೆರವು ನೀಡುವ ಬದಲು ಇದರಿಂದ ಲಾಭ ಗಳಿಸುವಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ರಾಜಧಾನಿ ದೆಹಲಿಯಲ್ಲಿ ಗುರುವಾರ ಪೆಟ್ರೋಲ್ ಬೆಲೆ ಲೀಟರ್ ಗೆ 23 ಪೈಸೆ ಏರಿಕೆಯಾಗಿ 84.20ರೂ ಗೆ ತಲುಪಿದೆ. ಡೀಸೆಲ್ ಬೆಲೆಯಲ್ಲಿ 26 ಪೈಸೆ ಏರಿಕೆಯಾಗಿ 74.38ರೂಗೆ ತಲುಪಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ, "ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಭಾರತ ಇಂಥ ಬಿಕ್ಕಟ್ಟಿನ ಸ್ಥಿತಿ ಎದುರಿಸುತ್ತಿದೆ. ಒಂದೆಡೆ ದೇಶದ ಅನ್ನದಾತರು ದೆಹಲಿ ಗಡಿಗಳಲ್ಲಿ 44 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ದೇಶದ ಈ ಅಸೂಕ್ಷ್ಮ, ನಿರ್ದಯ ಬಿಜೆಪಿ ಸರ್ಕಾರ ಬಡವರ, ರೈತರ, ಮಧ್ಯಮ ವರ್ಗದವರ ಬೆನ್ನೆಲುಬು ಮುರಿಯುವಲ್ಲಿ ನಿರತವಾಗಿದೆ" ಎಂದರು.
ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಹಾಗೂ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸೋನಿಯಾ ಗಾಂಧಿ ಮತ್ತೊಮ್ಮೆ ಒತ್ತಾಯಿಸಿದ್ದಾರೆ.












Click it and Unblock the Notifications