Breaking; ಕಸದ ರಾಶಿಗೆ ಬೆಂಕಿ; ದೆಹಲಿ ಪಾಲಿಕೆಗೆ 50 ಲಕ್ಷ ದಂಡ
ನವದೆಹಲಿ, ಏಪ್ರಿಲ್ 29 ; ದೆಹಲಿಯ ಭಾಲಾಸ್ವಾ ಡೈರಿ ಸಮೀಪ ಕಸದ ರಾಶಿಗೆ ಬಿದ್ದಿರುವ ಬೆಂಕಿ ಇನ್ನೂ ಹತೋಟಿಗೆ ಸಿಕ್ಕಿಲ್ಲ. ಮಂಗಳವಾರ ಸಂಜೆ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಶುಕ್ರವಾರ ಬೆಳಗ್ಗೆಯೂ ಹೊಗೆ ಬರುತ್ತಲೇ ಇದೆ.
ಅಗ್ನಿಶಾಮಕ ದಳದ ವಾಹನಗಳು ಗುರುವಾರವೂ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದ್ದವು. ಆದರೆ ಶುಕ್ರವಾರ ಆವರಿಸಿರುವ ಹೊಗೆ ಮತ್ತಷ್ಟು ಆತಂಕ ಮೂಡಿಸಿದೆ. ದೆಹಲಿ ಉತ್ತರ ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
#WATCH: Delhi | Smoke emission continues from the fire at Bhalswa landfill site which broke out on April 26. Visuals from this morning. pic.twitter.com/zu3BYSS5MF
— ANI (@ANI) April 29, 2022
ಕಸದ ರಾಶಿಯಿಂದ ಹೊಗೆ ಹಬ್ಬುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಗ್ನಿಶಾಮಕ ದಳಗಳು ಇಂದೂ ಸಹ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ಕೈಗೊಳ್ಳುವ ಸಾಧ್ಯತೆ ಇದೆ.

ದೆಹಲಿ ಸರ್ಕಾರ ಕಸದ ರಾಶಿಗೆ ಬೆಂಕಿ ಬಿದ್ದಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಸರ್ಕಾರ ಉತ್ತರ ಮಹಾನಗರ ಪಾಲಿಕೆಗೆ 50 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ದೆಹಲಿಯ ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಕಾರಕ್ಕೆ ಭಾಲಾಸ್ವಾ ಡೈರಿ ಪ್ರದೇಶದ ಬಗ್ಗೆ ವರದಿಯನ್ನು ನೀಡಿದೆ. ವರದಿಯ ಪ್ರಕಾರ ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಹೇಳಿದೆ. ಈ ಹಿನ್ನಲೆಯಲ್ಲಿ ಸರ್ಕಾರ ದಂಡ ವಿಧಿಸಿದೆ.
ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಮೊದಲು ಕಸದ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 6 ಗಂಟೆ ವೇಳೆಗೆ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿತು. ದಟ್ಟ ಹೊಗೆ ಕಾರಣ ಸಮೀಪದಲ್ಲಿದ್ದ ಶಾಲೆ ಮುಚ್ಚಲಾಯಿತು. ಸುತ್ತಮುತ್ತಲಿನ ಪ್ರದೇಶದ ಜನರು ಉಸಿರಾಡಲು ಸಹ ಕಷ್ಟಪಟ್ಟರು. ಆದರೆ ಶುಕ್ರವಾರವೂ ಬೆಂಕಿ ಹತೋಟಿಗೆ ಸಿಗುತ್ತಿಲ್ಲ.












Click it and Unblock the Notifications