'ಗುಜರಾತಿ'ಯ ಅಮಿತ್ ಶಾ 'ಹಿಂದಿ' ಗುಲಾಮಗಿರಿ ಮಾಡುತ್ತಿರುವುದು ವಿಷಾದನೀಯ: ಸಿದ್ದರಾಮಯ್ಯ
ಬೆಂಗಳೂರು ಏಪ್ರಲ್ 8: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂದೆಗೆದುಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿವಿಧ ರಾಜ್ಯಗಳ ಜನರು ಹಿಂದಿಯಲ್ಲಿ ಮಾತನಾಡಬೇಕು, ಇಂಗ್ಲಿಷ್ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. 'ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಹಿಂದಿಯನ್ನು ಅಧಿಕೃತ ಸಂಪರ್ಕಭಾಷೆಯಾಗಿ ಬಳಸುವುದಿಲ್ಲ. ಅವುಗಳ ಜೊತೆಯಲ್ಲಿ ಹಿಂದಿಯಲ್ಲಿ ವ್ಯವಹರಿಸಬೇಕು ಎನ್ನುವುದು ಸಾಂಸ್ಕೃತಿಕ ಭಯೋತ್ಪಾದನೆಯಾಗಿದೆ' ಎಂದಿದ್ದಾರೆ.
ಅಮಿತ್ ಶಾ ಅವರ ತವರು ಗುಜರಾತ್ ರಾಜ್ಯದ ಮಣ್ಣಿನ ಮಗನಾದ ಮಹಾತ್ಮ ಗಾಂಧೀಜಿ ಬಹು ಸಂಸ್ಕೃತಿ, ಬಹುಭಾಷೆಗಳ ಪ್ರತಿಪಾದಕರಾಗಿದ್ದರು. ಆದರೆ ಅವರಿಗೆ ಗಾಂಧೀಜಿಯವರಿಗಿಂತ ಏಕ ಸಂಸ್ಕೃತಿ, ಏಕಭಾಷೆಯ ಪ್ರತಿಪಾದಕರಾದ ಸೂಡೊ ರಾಷ್ಟ್ರೀಯವಾದಿ ಸಾವರ್ಕರ್ ಪ್ರಿಯರಾಗಿರುವುದು ದುರಂತ ಎಂದು ಸಿದ್ದರಾಮಯ್ಯ ಅಮಿತ್ ಶಾ ವಿರುದ್ಧ ಕಿಡಿ ಕಾರಿದ್ದಾರೆ.
ಕೇಂದ್ರ ಗೃಹಸಚಿವ @AmitShah ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂದೆಗೆದುಕೊಳ್ಳಬೇಕು.
— Siddaramaiah (@siddaramaiah) April 8, 2022
8/8#IndiaAgainstHindiImposition
ಗುಜರಾತಿನಿಂದ ಬಂದಿರುವ ಅಮಿತ್ ಶಾ ಅವರ ಮಾತೃಭಾಷೆ ಗುಜರಾತಿ. ಇವರು ತಮ್ಮ ಮಾತೃಭಾಷೆಯನ್ನೇ ಕಡೆಗಣಿಸಿ ಹಿಂದಿ ಭಾಷೆಯ ಗುಲಾಮಗಿರಿ ಮಾಡುತ್ತಿರುವುದು ವಿಷಾದನೀಯ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವ ರೀತಿಯಲ್ಲಿ ಬಿಂಬಿಸುವ ಜೊತೆಯಲ್ಲಿ, ರಾಜ್ಯ ಭಾಷೆಗಳನ್ನು ದಮನಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದನ್ನು ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳು ಕೂಡಿ ಪ್ರತಿಭಟಿಸುವ ಕಾಲ ಸನ್ನಿಹಿತವಾಗಿದೆ ಎಂದಿದ್ದಾರೆ.

ಭಾರತ ವಿವಿಧ ಭಾಷೆಗಳ ದೇಶ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ಆದರೆ ಪ್ರಪಂಚದಲ್ಲಿ ನಮ್ಮ ರಾಷ್ಟ್ರದ ಗುರುತಾಗುವ ಒಂದು ಭಾಷೆಯನ್ನು ಹೊಂದುವುದು ಅವಶ್ಯಕವಾಗಿದೆ. ಇಡೀ ದೇಶವನ್ನು ಒಂದೇ ದಾರದಲ್ಲಿ ಕಟ್ಟಿಕೊಡುವ ಭಾಷೆ ಯಾವುದಾದರೂ ಇದ್ದರೆ ಅದು ಹಿಂದಿ. ಇದನ್ನು ಹೆಚ್ಚು ಮಾತನಾಡಬೇಕು.

ವಿವಿಧ ರಾಜ್ಯಗಳ ಜನರು ಪರಸ್ಪರ ಹಿಂದಿಯಲ್ಲಿ ಸಂವಹನ ನಡೆಸಬೇಕು, ಇಂಗ್ಲಿಷ್‌ನಲ್ಲಿ ಅಲ್ಲ ಎಂದು ಗೃಹ ಸಚಿವ ಅಮಿತ್ ಶಾ ಗುರುವಾರ ಸಲಹೆ ನೀಡಿದ್ದಾರೆ. ಸಂಸದೀಯ ಅಧಿಕೃತ ಭಾಷಾ ಸಮಿತಿಯ 37 ನೇ ಸಭೆಯಲ್ಲಿ ಮಾತನಾಡಿದ ಅವರು, "ಸರ್ಕಾರವನ್ನು ನಡೆಸುವ ಮಾಧ್ಯಮವೇ ಅಧಿಕೃತ ಭಾಷೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಇದು ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಈಗ ಅಧಿಕೃತ ಭಾಷೆಯನ್ನು ದೇಶದ ಏಕತೆಯ ಪ್ರಮುಖ ಭಾಗವಾಗಿಸುವ ಸಮಯ ಬಂದಿದೆ. ಇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸಿದಾಗ ಅದು ಭಾರತದ ಭಾಷೆಯಲ್ಲಿರಬೇಕು" ಎಂದು ಹೇಳಿದ್ದಾರೆ ಎಂದು ಗೃಹ ಸಚಿವಾಲಯ ಉಲ್ಲೇಖಿಸಿದೆ.












Click it and Unblock the Notifications