ಸುಪ್ರೀಂಕೋರ್ಟ್‌ನಲ್ಲಿ ಕೇಜ್ರಿವಾಲ್‌ಗೆ ಹಿನ್ನಡೆ: ಎಸಿಬಿ ಅಧಿಕಾರ ಕೇಂದ್ರ ಸರ್ಕಾರಕ್ಕೆ
ನವದೆಹಲಿ, ಫೆಬ್ರವರಿ 14: ದೆಹಲಿಯಲ್ಲಿರುವ ಭ್ರಷ್ಟಾಚಾರ ನಿಯಂತ್ರಣ ದಳವನ್ನು (ಎಸಿಬಿ) ನಿಯಂತ್ರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ದೆಹಲಿ ಸರ್ಕಾರಕ್ಕಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದೆ.
ಇದರಿಂದ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರಕ್ಕೆ ತೀವ್ರ ಹಿನ್ನಡೆಯುಂಟಾಗಿದೆ.
ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ನ್ಯಾಯಪೀಠ ವರ್ಗಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನ ಅಭಿಪ್ರಾಯಗಳನ್ನು ತಾಳಿತು. ಆದರೆ, ಎಸಿಬಿಯ ನಿಯಂತ್ರಣ ಅಧಿಕಾರದ ವಿಚಾರದಲ್ಲಿ ಸಹಮತ ವ್ಯಕ್ತಪಡಿಸಿತು.

ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಅಧಿಕಾರಗಳನ್ನು ಸ್ಪಷ್ಟಪಡಿಸುವ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯ ತೀರ್ಪನ್ನು ಸುಪ್ರೀಂಕೋರ್ಟ್ ನ್ಯಾಯಪೀಠ ನೀಡಿದೆ.
ಮುಖ್ಯ ನ್ಯಾಯಮೂರ್ತಿಗಳಾಗಿದ್ದ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ಈ ಹಿಂದೆ ತೀರ್ಪು ನೀಡಿದ್ದರೂ ಆಡಳಿತ ವಿಚಾರದಲ್ಲಿ ಎರಡೂ ಸರ್ಕಾರಗಳ ನಡುವೆ ಗೊಂದಲಗಳು ಉಳಿದುಕೊಂಡಿವೆ ಎಂದು ಆಮ್ ಆದ್ಮಿ ಪಕ್ಷ ಸರ್ಕಾರ ಅರ್ಜಿಯಲ್ಲಿ ಹೇಳಿತ್ತು.
ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ಗೊಂದಲಗಳಿಗೆ ಸಂಬಂಧಿಸಿದಂತೆ ತಮ್ಮ ನಡುವೆ ಅಭಿಪ್ರಾಯಭೇದ ವ್ಯಕ್ತವಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಕೆಲವು ಗ್ರೇಡ್ ಅಧಿಕಾರಿಗಳ ವರ್ಗಾವಣೆ ಲೆಫ್ಟಿನೆಂಟ್ ಗವರ್ನರ್ ಅವರ ಅಧೀನದಲ್ಲಿದ್ದರೆ. ಉಳಿದವರ ವರ್ಗಾವಣೆ ದೆಹಲಿ ಸರ್ಕಾರದ ಅಡಿಯಲ್ಲಿ ಬರುತ್ತದೆ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಹೇಳಿದರು.
ವಿಚಾರಣಾ ಆಯೋಗ ರಚನೆಯ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಇದೆ. ಕೃಷಿ ಭೂಮಿಗೆ ಸಂಬಂಧಿಸಿದ ಅಧಿಕಾರ ದೆಹಲಿ ಸರ್ಕಾರಕ್ಕೆ ಸಿಗುತ್ತದೆ. ಸರ್ಕಾರಿ ವಕೀಲರನ್ನು ನೇಮಿಸುವ ಅಧಿಕಾರ ಹಾಗೂ ವಿದ್ಯುತ್‌ಚ್ಛಕ್ತಿ ಇಲಾಖೆಯ ನಿರ್ದೇಶಕರನ್ನು ನೇಮಿಸುವ ಅಧಿಕಾರಿಗಳು ಸಹ ದೆಹಲಿ ಸರ್ಕಾರಕ್ಕೆ ಇದೆ ಎಂದು ಸಿಕ್ರಿ ಹೇಳಿದರು.
ಉಳಿದ ವಿಚಾರಗಳ ಬಗ್ಗೆ ಸಿಕ್ರಿ ಅವರ ಅಭಿಪ್ರಾಯಗಳಿಗೆ ತಮ್ಮ ಸಹ ಅನುಮತಿ ಇದೆ. ಸೇವೆಗಳ ವಿಚಾರದಲ್ಲಿ ಮಾತ್ರ ಒಪ್ಪಿಗೆಯಿಲ್ಲ ಎಂದು ಅಶೋಕ್ ಭೂಷಣ್ ಹೇಳಿದರು.












Click it and Unblock the Notifications