ಶಾಲಾ ಮಕ್ಕಳಿಗಿಂತ ಕಡೆ: ಸಂಸದರಿಗೆ ಮಹಾಜನ್ ಛಾಟಿ ಏಟು
ನವದೆಹಲಿ, ಡಿಸೆಂಬರ್ 18: ಚಳಿಗಾಲದ ಅಧಿವೇಶನಕ್ಕೆ ದಿನದಿನವೂ ಅಡ್ಡಿ ಮಾಡುತ್ತಿರುವ ಕೆಲ ಸಂಸದರ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, 'ನಿಮ್ಮ ವರ್ತನೆ ಶಾಲಾ ಮಕ್ಕಳಿಗಿಂತ ಕಡೆಯಾಗಿದೆ. ಅವರಾದರೂ ಸಭ್ಯವಾಗಿ ವರ್ತಿಸುತ್ತಾರೆ' ಎಂದರು.
ಕಾಂಗ್ರೆಸ್, ಎಡಿಎಐಎಂಕೆ ಮತ್ತು ಟಿಡಿಪಿ ಸಂಸದರು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ವಿವಿಧ ಕಾರಣಕ್ಕಾಗಿ ಗಲಾಟೆ ಎಬ್ಬಿಸಿದ್ದರು.
ಮಂಗಳವಾರ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಬೇಕೆಂದು ಕೋರಿ ಕಾಂಗ್ರೆಸ್ ಸಂಸದರು ಮೊದಲಿಗೆ ಗಲಾಟೆ ಆರಂಭಿಸಿದ್ದರು.

ನಂತರ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೋರಿ ತೆಲುಗು ದೇಶಂ ಪಕ್ಷ ಸಂಸದರು ಕೂಗಾಟ ಆರಂಭಿಸಿದರೆ, ಮೇಕೆದಾಟು ಆಣೆಕಟ್ಟನ್ನು ವಿರೋಧಿಸಿ ತಮಿಳುನಾಡಿನ ಎಐಎಡಿಎಂಕೆ ಸಂಸದರು ಪ್ರತಿಭಟನೆ ಆರಂಭಿಸಿದರು.
"ಲೋಕಸಭೆಯಲ್ಲಿ ನೀವು ಹೀಗೆ ವರ್ತಿಸುವುದು ಹೊರಜಗತ್ತಿನ ಕಣ್ಣಲ್ಲಿ ಸಂಸತ್ತಿನ ಘನತೆಯನ್ನು ಕಡಿಮೆ ಮಾಡುತ್ತದೆ. ಭಾರತದಕೆಲವು ವಿದೇಶಿಯವರು ಪ್ರಶ್ನಿಸಿದ್ದನ್ನು ನಾನು ಕೇಳಿದ್ದೇನೆ. ಶಾಲೆಯಲ್ಲಿ ಓದುವ ಮಕ್ಕಳೂ ಹೀಗೆ ಗಲಾಟೆ ಮಾಡುವುದಿಲ್ಲ" ಎಂದು ಮಹಾಜನ್ ಬೇಸರದಿಂದ ಹೇಳಿದರು.
ಇಷ್ಟೆಲ್ಲ ಆದ ನಂತರವೂ ಸಂಸದರು ಗಲಾಟೆಯನ್ನೇನೂ ಕಡಿಮೆ ಮಾಡದ ಕಾರಣ ಲೋಕಸಭೆ ಕಲಾಪವನ್ನು ಅಪರಾಹ್ನಕ್ಕೆ ಮುಂದೂಡಲಾಯಿತು.












Click it and Unblock the Notifications