ನರಭಕ್ಷಕ ಕೋಲಿ ಗಲ್ಲು ಶಿಕ್ಷೆ ಮುಂದೂಡಿಕೆ
ನವದೆಹಲಿ, ಸೆ.8: ನಿಥಾರಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ, ನಂತರ ಅವರನ್ನು ಅಮಾನವೀಯವಾಗಿ ಹತ್ಯೆ ಮಾಡುತ್ತಿದ್ದ ಪಾತಕಿ ಸುರೀಂದರ್ ಕೋಲಿ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಗಾಜಿಯಾಬಾದ್ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶದಂತೆ ಕೋಲಿಯನ್ನು ಈ ವಾರ ಮೀರತ್ ಜೈಲಿನಲ್ಲಿ ಗೆಲ್ಲಿಗೇರಿಸಬೇಕಾಗಿತ್ತು.
ಸೆಷನ್ಸ್ ಕೋರ್ಟ್ ಆದೇಶದ ನಂತರ ಉತ್ತರ ಪ್ರದೇಶ ಸರ್ಕಾರ ಅದಕ್ಕೆ ಪೂರ್ವ ತಯಾರಿಯನ್ನೂ ನಡೆಸಿತ್ತು. ಆದರೆ ಸೋಮವಾರ ಮುಂಜಾನೆ 1.30ಕ್ಕೆ ಕೋಲಿ ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡಿ ಒಂದು ವಾರ ಕಾಲ ಗಲ್ಲು ಶಿಕ್ಷೆ ಮುಂದೂಡುವಂತೆ ಜಸ್ಟೀಸ್ ಎಚ್.ಎಲ್ ದತ್ತು ಅವರಿದ್ದ ನ್ಯಾಯಪೀಠ ಆದೇಶ ನೀಡಿದೆ.
ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಯ ಮರುಪರಿಶೀಲನಾ ಮೇಲ್ಮನವಿ ಅರ್ಜಿಯನ್ನು ಅಪರಾಧಿಯ ಖುದ್ದು ಹಾಜರಾತಿಯಲ್ಲಿ ಬಹಿರಂಗವಾಗಿ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧ ಅವರ ನೇತೃತ್ವದ ಪೀಠ ಕಳೆದ ವಾರ ತೆಗೆದುಕೊಂಡಿದ್ದ ಐತಿಹಾಸಿಕ ನಿರ್ಣಯವನ್ನು ಪರಿಗಣಿಸಿ ಸುಪ್ರೀಂಕೋರ್ಟ್ ಇಂದು ಈ ನಿರ್ದೇಶನ ನೀಡಿದೆ.[ನಿಥಾರಿ ಸರಣಿ ಹಂತಕ, ನರಭಕ್ಷಕನಿಗೆ ಡೆತ್ ವಾರೆಂಟ್]
ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಈ ಅಂಶವನ್ನು ಕೋಲಿ ಪರ ನ್ಯಾಯವಾದಿ ತಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಗಲ್ಲು ಮುಂದೂಡುವಂತೆ ಸೂಚಿಸಿತು. ಕೋಲಿ ಪರ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರ ಮನವಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಇಂದು ಬೆಳಗಿನ ಜಾವ ತಮ್ಮ ನಿವಾಸದಲ್ಲಿಯೇ ಈ ಆದೇಶ ಹೊರಡಿಸಿದರು.

ಮುಂದಿನ ವಾರ ಈ ಅರ್ಜಿ ವಿಚಾರಣೆಗೆ ಬರಲಿದೆ. 42 ವರ್ಷದ ಅತ್ಯಾಚಾರಿ, ಹಂತಕ ಕೋಲಿಯನ್ನು ಮೀರತ್ ಜೈಲಿನಲ್ಲಿ ಸೆ.12 ರಂದು ಗಲ್ಲಿಗೇರಿಸಬೇಕಾಗಿತ್ತು. ಅದಕ್ಕೆ ಕಾರಾಗೃಹದಲ್ಲಿ ಅಗತ್ಯ ಸಿದ್ಧತೆಯೂ ನಡೆದಿತ್ತು.
ಕಳೆದ 2011ರಲ್ಲಿ ಅಲಹಾಬಾದ್ ನ್ಯಾಯಾಲಯ ನೀಡಿದ್ದ ಕೋಲಿಯ ಮರಣ ಶಿಕ್ಷೆಯನ್ನು ಸುಪ್ರೀಂ ಎತ್ತಿ ಹಿಡಿದಿದ್ದು, ಯಾವುದೇ ಕಾರಣಕ್ಕೂ ಕೋಲಿ ಕ್ಷಮೆಗೆ ಅರ್ಹನಲ್ಲ ಎಂದು ಹೇಳಿತ್ತು. ಕೋಲಿ ಸುಮಾರು 14 ಮಂದಿ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ನಂತರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.
ಸುರೇಂದ್ರ ಕೋಲಿಗೆ ಐದು ಪ್ರಕರಣಗಳಲ್ಲಿ ಗಲ್ಲುಶಿಕ್ಷೆ ನೀಡಲಾಗಿದೆ. ಕೋಲಿ ವಿರುದ್ಧ ಇನ್ನು 16 ಪ್ರಕರಣಗಳು ದಾಖಲಾಗಿದ್ದು, ಮಿಕ್ಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಎಲ್ಲಾ ಪ್ರಕರಣಗಳಲ್ಲೂ ಇಬ್ಬರ ಮೇಲೆ ಸಿಬಿಐ ಚಾರ್ಜ್ ಶೀಟ್ ದಾಖಲಿಸಿದೆ. ಇಬ್ಬರೂ ಸೈಕೋ ಕಿಲ್ಲರ್ ಗಳಾಗಿದ್ದು, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಿದ್ದರು. [ವಿಚಾರಣಾಧೀನ ಕೈದಿ ಬಿಡುಗಡೆ : ಲಾಭ ಯಾರಿಗೆ?]
ಇದೇ ಅಲ್ಲದೆ ಮೃತ ಬಾಲಕಿಯರ ದೇಹವನ್ನು ಭಕ್ಷಿಸುವಷ್ಟು ಇತ ಕ್ರೂರಿಯಾಗಿದ್ದರು. ದೆಹಲಿಯ ಹೊರವಲಯದಲ್ಲಿರುವ ನೋಯ್ಡಾ ಪರಿಸರದ ನಿವಾಸಿಯಾಗಿದ್ದ ರಿಂಪಾ 2005ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಳು. 2006ರಲ್ಲಿ ಪಂಧೇರ್‌ನ ನಿವಾಸದ ಹಿಂದಿರುವ ಚರಂಡಿಯಲ್ಲಿ ಹಲವಾರು ಮಾನವ ಅವಶೇಷಗಳು ಪತ್ತೆಯಾದ ನಂತರ ಸರಣಿ ಕಗ್ಗೊಲೆ ಪ್ರಕರಣ ಬೆಳಕಿಗೆ ಬಂದಿತ್ತು.












Click it and Unblock the Notifications